ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ಬೈರತಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಫೆಬ್ರವರಿ 12ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಅವರನ್ನು ಬಂಧಿಸಲಾಗಿತ್ತು.
ಬಂಧನದ ಬಳಿಕ ಮರುದಿನ ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅವರ ಇಸಿಜಿಯಲ್ಲಿ ಸಮಸ್ಯೆ ಕಂಡುಬಂದಿತ್ತು. ನಂತರ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಗ್ರಾಮ್ ಮಾಡಿಸಲಾಗಿತ್ತು.
ಈ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕೃತವಾದ ಬಳಿಕ ಬೈರತಿ ಬಸವರಾಜ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಕೂಡ ಅವರಿಗೆ ನಿರೀಕ್ಷಿತ ಪರಿಹಾರ ಸಿಗದೇ ಅರ್ಜಿ ವಜಾಗೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಘಟನೆಗಳಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿದ್ದಾಗ ಆರೋಪಿತ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆಯೆಂದು ಆರೋಪಿಸಲಾಗಿದೆ. ಆ ಸಂದರ್ಭದಲ್ಲಿ ಆಸ್ತಿಯ ಜಿಪಿಎ ದಾಖಲೆಯನ್ನು ತೋರಿಸಲಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಬಿಕ್ಲು ಶಿವನಿಗೆ ಅವನ ತಾಯಿಯ ಮುಂದೆ ಗನ್ ತೋರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಕಾಲ್ ರೆಕಾರ್ಡ್ ಪರಿಶೀಲನೆ ವೇಳೆ ಗನ್ ಹೊಂದಿದ್ದ ವ್ಯಕ್ತಿ ಜಗದೀಶ್ ಜೊತೆ ಸಂಪರ್ಕ ಹೊಂದಿದ್ದ ವಿಚಾರವೂ ಹೊರಬಂದಿದೆ. ನಂತರ ಆ ವ್ಯಕ್ತಿ ಶ್ರೀಲಂಕಾಕ್ಕೆ ಪಲಾಯನ ಮಾಡಿದನೆಂದು ತಿಳಿದುಬಂದಿದೆ.ಇದನ್ನು ಓದಿ –ದೇಶದಲ್ಲಿ ಪೆಟ್ರೋಲ್–ಡೀಸೆಲ್ ಕೊರತೆ ಇಲ್ಲ: ಹರ್‌ದೀಪ್ ಸಿಂಗ್ ಪುರಿ ಭರವಸೆ
ಈ ಪ್ರಕರಣದ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಹೇಳಿತ್ತು. ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಅದರ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಕೋರ್ಟ್ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿತ್ತು.








