ನವದೆಹಲಿ: ದೇಶದಲ್ಲಿ ಈ ಬಾರಿಯ ಜೂನ್ ತಿಂಗಳ ಮುಂಗಾರು ಮಳೆ ಕಳೆದ 126 ವರ್ಷಗಳಲ್ಲೇ ಮೂರನೇ ಅತ್ಯಂತ ಕಡಿಮೆ ಮಟ್ಟಕ್ಕೆ ದಾಖಲಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಸೋಮವಾರದವರೆಗೆ ದೇಶದಲ್ಲಿ ಕೇವಲ 92.1 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾಮಾನ್ಯ ಮಳೆ ಪ್ರಮಾಣಕ್ಕಿಂತ ಶೇ.42ರಷ್ಟು ಕಡಿಮೆಯಾಗಿದೆ.
1901ರಿಂದ ಇದುವರೆಗೆ ಜೂನ್ ತಿಂಗಳಲ್ಲಿ 100 ಮಿಲಿಮೀಟರ್‌ಗಿಂತ ಕಡಿಮೆ ಮಳೆಯಾಗಿರುವುದು ಕೇವಲ ನಾಲ್ಕು ಬಾರಿ ಮಾತ್ರ. 2009ರಲ್ಲಿ 87.5 ಮಿಲಿಮೀಟರ್ ಮಳೆಯಾಗಿ ಅತ್ಯಂತ ಕಡಿಮೆ ಮಳೆ ದಾಖಲಾಗಿದ್ದರೆ, 1905ರಲ್ಲಿ 92.3 ಮಿಲಿಮೀಟರ್ ಹಾಗೂ 2014ರಲ್ಲಿ 93 ಮಿಲಿಮೀಟರ್ ಮಳೆಯಾಗಿತ್ತು. ಈ ಬಾರಿ ಜೂನ್ ತಿಂಗಳು ಕೂಡ ಇದೇ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ಐಎಂಡಿ ಮಾಹಿತಿ ಪ್ರಕಾರ, 1926ರಲ್ಲಿ 97.4 ಮಿಲಿಮೀಟರ್, 1902ರಲ್ಲಿ 109 ಮಿಲಿಮೀಟರ್, 1912ರಲ್ಲಿ 106.8 ಮಿಲಿಮೀಟರ್ ಹಾಗೂ 1923ರಲ್ಲಿ 101.7 ಮಿಲಿಮೀಟರ್ ಮಳೆಯಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳ ದೀರ್ಘಾವಧಿಯ ಸರಾಸರಿ ಮಳೆ ಪ್ರಮಾಣ 165 ಮಿಲಿಮೀಟರ್‌ಗಿಂತ ಹೆಚ್ಚಿರುತ್ತದೆ.
ಈ ವರ್ಷ ನೈರುತ್ಯ ಮುಂಗಾರು ತಡವಾಗಿ ಆರಂಭವಾಗಿದ್ದು, ಮಧ್ಯದಲ್ಲಿ 11 ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದರ ಪರಿಣಾಮವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಉತ್ತರ, ಮಧ್ಯ ಹಾಗೂ ಪಶ್ಚಿಮ ಭಾರತದ ಹಲವು ಭಾಗಗಳಿಗೆ ಮುಂಗಾರು ತಡವಾಗಿ ತಲುಪಿದೆ.
ಮುಂಗಾರು ಪ್ರವೇಶಿಸಿದ ರಾಜ್ಯಗಳಲ್ಲೂ ಮಹಾರಾಷ್ಟ್ರ, ಒಡಿಶಾ, ಬಿಹಾರ, ಛತ್ತೀಸಗಢ ಹಾಗೂ ತೆಲಂಗಾಣದಲ್ಲಿ ಮಳೆಯ ಕೊರತೆ ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಜೂನ್ 27ರಂದು ಮುಂಗಾರು ಪ್ರವೇಶಿಸಬೇಕಾಗಿದ್ದರೂ ಅದು ಇನ್ನೂ ತಲುಪಿಲ್ಲ. ಜುಲೈ ಮೊದಲ ವಾರದಲ್ಲಿ ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಬಲ ಎಲ್ ನಿನೊ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ಐಎಂಡಿ ಈಗಾಗಲೇ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಮಳೆಯ ದೀರ್ಘಾವಧಿಯ ಮುನ್ಸೂಚನೆಯನ್ನು ಶೇ.90ಕ್ಕೆ ಇಳಿಸಿದೆ. ಇದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಆದರೆ, ಜೂನ್ ತಿಂಗಳಲ್ಲಿ ಮಳೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈಗಲೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಳೆಯ ಹಂಚಿಕೆ ಹಾಗೂ ಮುಂದಿನ ತಿಂಗಳ ಮಳೆ ಪರಿಸ್ಥಿತಿಯನ್ನೂ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಐಎಂಡಿಯ ಮಾಜಿ ಮಹಾನಿರ್ದೇಶಕ ಕೆ.ಜೆ. ರಮೇಶ್ ಅವರ ಪ್ರಕಾರ, ಮುಂಗಾರು ಪ್ರವೇಶಿಸಿರುವ ರಾಜ್ಯಗಳಲ್ಲಿ ಇದುವರೆಗೆ ಉತ್ತಮ ಮಳೆಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಮತ್ತು ಜಲಾಶಯಗಳಲ್ಲೂ ನೀರಿನ ಲಭ್ಯತೆ ಸಮರ್ಪಕವಾಗಿದೆ.
ಕೇಂದ್ರ ಕೃಷಿ ಸಚಿವಾಲಯವು ಈ ಬಾರಿ ದುರ್ಬಲ ಮುಂಗಾರಿನಿಂದ ಬಾಧಿತವಾಗುವ ಸಾಧ್ಯತೆ ಇರುವ 315 ಸೂಕ್ಷ್ಮ ಜಿಲ್ಲೆಗಳನ್ನು ಗುರುತಿಸಿದೆ. ಅವುಗಳಲ್ಲಿ 111 ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆಯ ವಿಭಾಗಕ್ಕೆ ಸೇರಿಸಲಾಗಿದ್ದು, ಉಳಿದ 76 ಜಿಲ್ಲೆಗಳು ಮಧ್ಯಮ ಆದ್ಯತೆಯ ಪಟ್ಟಿಯಲ್ಲಿವೆ. ಈ ಜಿಲ್ಲೆಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿದಂತೆ 12 ರಾಜ್ಯಗಳಲ್ಲಿ ವ್ಯಾಪಿಸಿವೆ.
ಇದೀಗ ದೆಹಲಿ ಹಾಗೂ ಹರಿಯಾಣದ ಕೆಲವೆಡೆ ಭಾನುವಾರ ಮತ್ತು ಸೋಮವಾರ ಗುಡುಗು ಸಹಿತ ಮಳೆಯಾಗಿದ್ದರೂ, ಮಂಗಳವಾರ ಮಳೆ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








