ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕೇಂದ್ರ ಸರ್ಕಾರ ಇಳಿಕೆ ಘೋಷಿಸಿದೆ. ಜುಲೈ 1ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 183.50 ರೂಪಾಯಿ ಕಡಿತಗೊಳಿಸಲಾಗಿದೆ.
ದರ ಇಳಿಕೆಯ ಬಳಿಕ 3,113.50 ರೂಪಾಯಿ ಇದ್ದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,930 ರೂಪಾಯಿಗೆ ಇಳಿದಿದೆ. ಆದರೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿದ್ದ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅಮೆರಿಕ ಮತ್ತು ಇಸ್ರೇಲ್ ದಾಳಿಯ ಬಳಿಕ ಇರಾನ್, ಹೊರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಹಾಗೂ ಎಲ್‌ಪಿಜಿ ಸಾಗಿಸುವ ಹಡಗುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ವಿಶ್ವದಾದ್ಯಂತ ಇಂಧನ ಬೆಲೆಗಳು ಏರಿಕೆಯಾಗಿದ್ದವು.
ಈ ಪರಿಣಾಮವಾಗಿ ಭಾರತದಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ನಾಲ್ಕು ತಿಂಗಳಲ್ಲಿ ಹಂತ ಹಂತವಾಗಿ ಹೆಚ್ಚಿಸಲಾಗಿತ್ತು. ಮಾರ್ಚ್‌ನಲ್ಲಿ 144 ರೂಪಾಯಿ, ಏಪ್ರಿಲ್‌ನಲ್ಲಿ 195.50 ರೂಪಾಯಿ, ಮೇನಲ್ಲಿ 993 ರೂಪಾಯಿ ಹಾಗೂ ಜೂನ್‌ನಲ್ಲಿ 42 ರೂಪಾಯಿ ಏರಿಕೆ ಮಾಡಲಾಗಿತ್ತು. ಒಟ್ಟಾರೆ ನಾಲ್ಕು ಹಂತಗಳಲ್ಲಿ 1,374.50 ರೂಪಾಯಿ ಹೆಚ್ಚಳವಾಗಿತ್ತು.ಇದನ್ನು ಓದಿ –ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ದರ ಏರಿಕೆ
ಇದೇ ಅವಧಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನೂ ಎರಡು ಬಾರಿ ಪರಿಷ್ಕರಿಸಲಾಗಿತ್ತು. ಮಾರ್ಚ್‌ನಲ್ಲಿ 60 ರೂಪಾಯಿ ಹಾಗೂ ಜೂನ್‌ನಲ್ಲಿ 29 ರೂಪಾಯಿ ಹೆಚ್ಚಳವಾಗಿದ್ದು, ಒಟ್ಟು 89 ರೂಪಾಯಿ ಏರಿಕೆಯಾಗಿತ್ತು. ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದರೂ, ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.








