ಅಳಿವೆ ಬೀಜ ಈ ಹೆಸರು ಕೇಳಿದೊಡನೆ ಮಹಿಳೆಯರು ಅಲರ್ಟ್ ಆಗುತ್ತಾರೆ. ಕೆಲವರು ಕಣ್ಣರಳಿಸಿ ನಕ್ಕರೆ, ಮತ್ತೆ ಕೆಲವರು ವಾಕರಿಕೆ ಬಂದವರಂತೆ ಮುಖ ಕಿವುಚಿಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ತಾಯಿಯಾಗಿ ಸಂಭ್ರಮಿಸಿದ ಆ ಕ್ಷಣದ ನೆನಪುಗಳಲ್ಲಿ ತೇಲಿ ಹೋಗುತ್ತಾರೆ. ಅಂದಹಾಗೆ ಬಹುತೇಕ ಮಹಿಳೆಯರಿಗೆ ಅದರಲ್ಲೂ ಹಳ್ಳಿಗಳಲ್ಲಿ, ತವರು ಮನೆಯಲ್ಲಿ ಹೆರಿಗೆಯ ದಿನಗಳನ್ನು ಕಳೆದವರಿಗೆ ಅಳಿವೆ ಬೀಜ ಅಂದಕೂಡಲೆ ನೆನಪಾಗುವುದು ತಾವು ಬಾಣಂತಿಯಾಗಿದ್ದ ದಿನಗಳು.
ಬಾಣಂತಿಯರ ಧಾನ್ಯ
ಅತ್ಯಂತ ಪೌಷ್ಠಿಕ ಧಾನ್ಯವಾಗಿರುವ ಅಳಿವೆಯನ್ನು ಬಾಣಂತಿಯರ ಧಾನ್ಯ ಎಂದೂ ಕರೆಯುತ್ತಾರೆ. ಹೆರಿಗೆಯ ಬಳಿಕ ಬಾಣಂತಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೊಂಟ ನೋವು ನಿವಾರಿಸಲು ಅಳಿವೆ ಬೀಜಗಳಿಂದ ತಯಾರಿಸಿದ ಆಹಾರ (ಪಾಯಸ, ಉಂಡೆ, ಲಡ್ಡು) ನೀಡಲಾಗುತ್ತದೆ. ಸೊಂಟದ ಕೆಳಭಾಗದಲ್ಲಿ ಇರುವ ಶ್ರೋಣಿಯ ಸ್ನಾಯುಗಳಿಗೆ (ಪೆಲ್ವಿಕ್ ಮಸಲ್ಸ್) ಶಕ್ತಿ ತುಂಬುವಲ್ಲಿ ಅಳಿವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ತಾಯಂದಿರ ಎದೆಹಾಲು ಹೆಚ್ಚಿಸುವುದು ಈ ಅಳಿವೆಯ ವಿಶೇಷ ಗುಣವಾಗಿದೆ.
ಹಿಂದೆಲ್ಲಾ ಅಜ್ಜಿಯರು ಮೊಮ್ಮಕ್ಕಳ ಬಾಣಂತನ ಮಾಡುವಾಗ ಒಂದು ದಿನ ಕೂಡ ಈ ಅಳಿವೆಯ ಆಹಾರ ತಪ್ಪುತ್ತಿರಲಿಲ್ಲ. ಬೆಳ್ಳಂ ಬೆಳಗ್ಗೆಯೇ ನೀರಿನ ದೊಡ್ಡ ಲೋಟ ಒಂದಕ್ಕೆ ಅಳಿವೆ ಸುರಿದು, ಹಾಲು, ತುಪ್ಪ ಬೆರೆಸಿ ಸ್ವಲ್ಪ ಬಿಸಿ ಇರುವಂತೆಯೇ ಲೋಟವನ್ನು ಬಾಣಂತಿ ಮೊಮ್ಮಗಳ ಕೈಗೆ ತಂದಿಡುತ್ತಿದ್ದ ಅಜ್ಜಿ, ‘ಕಣ್ ಮುಚ್ಕೊಂಡು ಕುಡಿಯವ್ವಾ’ ಎಂದು ಹೇಳುತ್ತಿದ್ದರಂತೆ. ಅಳಿವೆ ರಸದ ಲೋಟ ಮೇಲೆತ್ತಿದರೆ ಖಾಲಿ ಆದ ನಂತರವೇ ಇಳಿಸಬೇಕು ಎಂಬ ಅಲಿಖಿತ ನಿಯಮವೂ ಇತ್ತಂತೆ. ಈಗಿನ ಬಾಣಂತಿಯರು ಆ ಸಂಪ್ರದಾಯಗಳನ್ನೆಲ್ಲಾ ಪಾಲಿಸುವುದಿಲ್ಲ. ಆದರೆ, ಅಳಿವೆ ರಸ ಕುಡಿಯುವುದ ಬಿಡುವುದಿಲ್ಲ. ಕೆಲವರಿಗೆ ಇದು ಅಚ್ಚುಮೆಚ್ಚಾದರೆ, ಇನ್ನೂ ಕೆಲವರಿಗೆ ಒಂಚೂರೂ ಇಷ್ಟವಾಗುವುದಿಲ್ಲ.
ಪೌಷ್ಠಿಕಾಂಶದ ಶಕ್ತಿ ಕೇಂದ್ರ

ಕನ್ನಡದಲ್ಲಿ ಅಳಿವೆ, ಅಳವೆ, ಆಳ್ವೆ, ಆಳಿವೆ, ಸಂಸ್ಕೃತದಲ್ಲಿ ನಂದಿನಿ, ಚಂದ್ರಿಕಾ, ಚಂದ್ರಸೂರ, ಹಿಂದಿಯಲ್ಲಿ ಹಲೀಮ್, ಮರಾಠಿಯಲ್ಲಿ ಅಳಿವರ್ಚಿ ಮತ್ತು ಆಂಗ್ಲಭಾಷೆಯಲ್ಲಿ ಗಾರ್ಡನ್ ಕ್ರೆಸ್ ಅಥವಾ ಕಾಮನ್ ಕ್ರೆಸ್ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಬೀಜದ ಮಹತ್ವ ಬಲ್ಲವರೇ ಬಲ್ಲರು. ಅಳಿವೆ ಬೀಜಗಳಲ್ಲಿ ಖನಿಜದ ಅಂಶ ಯಥೇಚ್ಚವಾಗಿರುತ್ತದೆ. ಇದು ಲವಣ ಹಾಗೂ ವಿಟಮಿನ್‌ನ ಆಗರವೂ ಹೌದು. ಹಲೀಮ್ ಬೀಜಗಳು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದೇ ಜನಪ್ರಿಯ. ಈ ಸಣ್ಣ ಬೀಜಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ತುಂಬಿದೆ. ಹಲೀಮ್ ಬೀಜಗಳಲ್ಲಿ ಪೌಷ್ಠಿಕಾಂಶ ಮಾತ್ರವಲ್ಲದೇ ಖನಿಜಗಳು, ವಿಟಮಿನ್ ಇ, ಎ, ಸಿ, ಕೆ, ಫೋಲಿಕ್ ಆಮ್ಲ, ಪ್ರೋಟೀನ್, ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನಿಶಿಯಮ್ ಮತ್ತು ಫೈಬರ್‌ಗಳು ಕೂಡಾ ಇವೆ.ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುವ ಅಳಿವೆ, ದೇಹಕ್ಕೆ ಶಕ್ತಿ ಒದಗಿಸುವುದು ಮಾತ್ರವಲ್ಲದೆ, ಹೀಮೋಗ್ಲೋಬಿನ್ ಪ್ರಮಾಣ ವೃದ್ಧಿಸುವಲ್ಲಿ ನೆರವಾಗುತ್ತದೆ. ಇದರ ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.ನಾಟಿ ವೈದ್ಯ ಪದ್ಧತಿ, ಆಯುರ್ವೇದ ವಿಜ್ಞಾನದಲ್ಲಿ ಅಳಿವೆಗೆ ಎಲ್ಲಿಲ್ಲದ ಮಹತ್ವವಿದೆ. ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದ್ದರೂ, ಈ ಬೀಜಗಳ ಲಭ್ಯತೆ ಕಡಿಮೆ ಇರುವ ಕಾರಣ ಬಾಣಂತಿಯರಿಗೆ ಮಾತ್ರ ಅಳಿವೆ ಬೀಜದ ಆಹಾರ ಮಾಡಿ ತಿನಿಸುತ್ತಾರೆ.
- ಎಲ್ಲರ ಆರೋಗ್ಯ ಕಾಪಾಡುವ ಈ ಸಣ್ಣ ಕೆಂಪು ಬಣ್ಣದ ಬೀಜಗಳು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಹಾರ್ಮೋನ್ ಅಸಮತೋಲನ, ಸ್ತನ ಕ್ಯಾನ್ಸರ್, ನಿಯಂತ್ರಿಸಲು ಹಲೀಮ್ ಬೀಜದ ಪಾನೀಯ ಅತೀ ಅಗತ್ಯ.
- ದಿನನಿತ್ಯ ನಿಯಮಿತವಾಗಿ ಹಲೀಮ್ ಬೀಜಗಳ ಸೇವನೆ ಮಧುಮೇಹ ಇರುವವರಿಗೆ ಸಹಾಯಕ. ಈ ಬೀಜಗಳು ರಕ್ತದಲ್ಲಿನ ಗ್ಲಕೋಸ್ ಮಟ್ಟ ಕಡಿಮೆ ಮಾಡುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ದೈನಂದಿನ ಸೇವನೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲ ಈ ಹಲೀಮ್ ಬೀಜ. ಇದು ಹೃದಯವನ್ನು ಆರೋಗ್ಯಕರವಾಗಿ ಮತ್ತು ಪಾರ್ಶ್ವವಾಯುಗಳಿಂದ ರಕ್ಷಿಸುತ್ತದೆ.
- ಆಸ್ತಮಾ ರೋಗಿಗಳು ಹಲೀಮ್ ಬೀಜ ಸೇವಿಸುವುದರಿಂದ ಶ್ವಾಸಕೋಶದ ಪ್ರಚೋದನೆ ಹೆಚ್ಚಿಸುತ್ತದೆ ಹಾಗೂ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ ಎಂದು ವರದಿಯೊಂದು ತಿಳಿಸಿದೆ.
- ಕೆಲವರಿಗೆ ಬಿಕ್ಕಳಿಗೆ ಹತ್ತಿದರೆ ನಿಲ್ಲವುದೇ ಇಲ್ಲ. ಗಂಟೆಗಟ್ಟಲೆ ಬಿಕ್ಕಳಿಸುತ್ತಲೇ ಇರುತ್ತಾರೆ. ನೀರು ಕುಡಿಯುವುದು, ಉಸಿರು ಬಿಗಿ ಹಿಡಿಯುವುದು, ಹೊಟ್ಟೆ ಕೆಳಗೆ ನಾಡಿ ಮಲಗುವುದು ಸೇರಿ ಯಾವುದೇ ಉಪಾಯ ಮಾಡಿದರೂ ಬಿಕ್ಕಳಿಕೆ ನಿರಂತರವಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಹೆಚ್ಚು ನುಣ್ಣಗೆ ಆಗದ ರೀತಿಯಲ್ಲಿ ಪುಡಿ ಮಾಡಿಟ್ಟ ಅಳಿವೆ ಬೀಜಗಳನ್ನು ಕಾಲು ಲೀಟರ್ ನೀರಿಗೆ ಬೆರೆಸಿ, 30ರಿಂದ 45 ನಿಮಿಷಗಳ ಕಾಲ ನೆನೆಸಿಡಬೇಕು. ಬಳಿಕ ಸ್ವಲ್ಪ ಗಟ್ಟಿಯಾಗುವ ಅಳಿವೆ ಪುಡಿಯನ್ನು ಎರಡು ಸ್ಪೂನ್ ತಿನಿಸಿದರೆ ಬಿಕ್ಕಳಿಕೆ ನಿಲ್ಲುತ್ತವೆ. ಉರಿ ಬಿಕ್ಕಳಿಕೆಗೆ ಇದು ರಾಮ ಬಾಣ ಎನ್ನಲಾಗುತ್ತದೆ.
- ಹಲೀಮ್ ಬೀಜಗಳು ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಈ ಬೀಜ ಸೇವಿಸುವುದರಿಂದ ದೇಹ ಹೆಚ್ಚು ಶಕ್ತಿ ಪಡೆಯುತ್ತದೆ. ದೀರ್ಘಕಾಲದವರೆಗೆ ಹಸಿವು ಇರುವುದಿಲ್ಲ. ಪದೆ-ಪದೆ ತಿನ್ನುವುದರಿಂದ ದೂರವಿರಲು ಹಾಗೂ ತೂಕ ನಿಯಂತ್ರಣದಲ್ಲಿಡಲು ಈ ಹಲೀಮ್ ಬೀಜಗಳು ಉತ್ತಮ. ಬೆಳಿಗ್ಗೆ ಅಥವಾ ಊಟದ ನಡುವೆ ಖಾಲಿ ಹೊಟ್ಟೆಯಲ್ಲಿ ಹಲೀಮ್ ಬೀಜ ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.
- ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹಲೀಮ್ ಬೀಜ ಉತ್ತಮ. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಲ್ಲಿರುವ ಕಬ್ಬಿಣ ಮತ್ತು ಫೋಲಿಕ್ ಆಮ್ಲ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಾರೆ.
- 1 ಚಮಚ ಹಲೀಮ್ ಬೀಜ 12 ಮಿಗ್ರಾಂ ಕಬ್ಬಿಣವನ್ನು ನೀಡುತ್ತದೆ. ದೀರ್ಘಕಾಲದ ರಕ್ತಹೀನತೆಯಿಂದ ಬಳಲುತ್ತಿದ್ದರೆ ಅಥವಾ ಕಡಿಮೆ ಹಿಮೋಗ್ಲೋಬಿನ್ ಮಟ್ಟ ಹೊಂದಿದ್ದರೆ ಹಲೀಮ್ ಬೀಜಗಳನ್ನು ಅಗತ್ಯವಾಗಿ ಸೇವಿಸಬೇಕು.
- ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಲೀಮ್ ಬೀಜ ತಿನ್ನುವುದರಿಂದ ಚರ್ಮದ ಸಡಿಲತೆ ಕಡಿಮೆಯಾಗುತ್ತದೆ. ಚರ್ಮದಲ್ಲಿನ ಸುಕ್ಕು ದೂರವಾಗುತ್ತದೆ. ಹಲೀಮ್ ಬೀಜ ತಿನ್ನುವುದರಿಂದ ಕೂದಲು ಉದುರುವಿಕೆಯ ಎಲ್ಲಾ ಸಮಸ್ಯೆಗಳನ್ನು ಪರಿಹಾರ ನೀಡುತ್ತದೆ.
- ಸಂದು ನೋವಾದಾಗ, ದೇಹದ ಯಾವುದೇ ಅಂಗಕ್ಕೆ ಹೊರಗಿನಿಂದ ಪೆಟ್ಟು ಬಿದ್ದ ರಕ್ತ ಹೆಪ್ಪುಗಟ್ಟಿದಾಗ ಅಳಿವೆ ಬೀಜಗಳನ್ನು ನೀರಿನಲ್ಲಿ ಅರೆದು, ಪೆಟ್ಟು ಬಿದ್ದ ಸ್ಥಳಕ್ಕೆ ಲೇಪಿಸಬೇಕು. ಇದರಿಂದ ತಕ್ಷಣವೇ ಹೆಪ್ಪುಗಟ್ಟಿದ ರಕ್ತ ಸರಿ ಹೋಗುತ್ತದೆ ಮತ್ತು ಸಂದು ನೋವು ಕೂಡ ಕಡಿಮೆಯಾಗುತ್ತದೆ. ಶಕ್ತಿವರ್ಧಕವಾಗಿರುವ ಅಳಿವೆ, ಕರುಳಿನ ಆರೋಗ್ಯ ಕಾಪಾಡುವ ಗುಣ ಹೊಂದಿದೆ. ಅಳಿವೆ ಸೇವನೆಯಿಂದ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ. ಚರ್ಮದ ಸೌಂದರ್ಯ ಹೆಚ್ಚುತ್ತದೆ.
ಅಳಿವೆ ಪಾಯಸ

100 ಎಂ.ಎಲ್ ಹಾಲನ್ನು ಒಲೆ ಮೇಲೆ ಕುದಿಯಲು ಇಟ್ಟು, ಹಾಲು ಸ್ವಲ್ಪ ಕುದಿ ಬಂದ ನಂತರ ಅದಕ್ಕೆ 10 ಗ್ರಾಂ. ಅಳಿವೆ ಬೀಜ ಇಲ್ಲವೇ ಅಷ್ಟೇ ಪ್ರಮಾಣದ ಅಳಿವೆ ಬೀಜದ ಪುಡಿಯನ್ನು ಹಾಕಬೇಕು. ಸಿಹಿಗಾಗಿ ಅಗತ್ಯದಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿದರೆ ಅಳಿವೆ ಪಾಯಸ ಸಿದ್ಧವಾಗುತ್ತದೆ. ಶಕ್ತಿ ವರ್ಧಕ ಹಾಗೂ ಆರೋಗ್ಯ ವರ್ಧಕವಾಗಿರುವ ಈ ಪಾಯಸವನ್ನು ಯಾರುಬೇಕಾದರೂ ಕುಡಿಯಬಹುದು. ಅಳಿವೆ ಪಾಯಸವನ್ನು ಬಾಣಂತಿಯರ ಪಾಯಸ ಎಂದೂ ಕರೆಯುತ್ತಾರೆ.
ಒಂದು ಟೀ ಚಮಚ ಅಳಿವೆ ಬೀಜಗಳನ್ನು ಚೆನ್ನಾಗಿ ತೊಳೆದು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದ ನಂತರ 15 ನಿಮಿಷಗಳ ಕಾಲ ಒಲೆ ಮೇಲಿಟ್ಟು ಕುದಿಸಿ, ಹಾಲು ಮತ್ತು ತುಪ್ಪ, ಸಕ್ಕರೆ ಅಥವಾ ಬೆಲ್ಲ ಬೆರೆಸಿ ಸೇವಿಸಬೇಕು (ಸಿಹಿ ತಿನ್ನದವರು ಸಕ್ಕರೆ, ಬೆಲ್ಲ ಬೆರೆಸದೆ ಸೇವಿಸಬಹುದು). ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು. ಬಾಣಂತಿಯರು ಮಾತ್ರವಲ್ಲದೆ ಯಾರುಬೇಕಾದರೂ ಈ ಆಹಾರ ಮಿತಿಯಾಗಿ ಸೇವಿಸಬಹುದು.
ಗಮನಿಸಬೇಕಾದ ಅಂಶ:
ಅತಿಯಾದರೆ ಅಮೃತವೂ ವಿಷ ಎಂಬಂತೆ ಹಲೀಮ್ ಬೀಜಗಳನ್ನು ಕೂಡಾ ಅತಿಯಾಗಿ ಬಳಸದೆ, ದಿನನಿತ್ಯ ನಿಯಮಿತವಾಗಿ ಬಳಸಬೇಕು. ಈ ಬೀಜಗಳು ದೇಹದಿಂದ ಪೊಟ್ಯಾಸಿಯಮ್ ಅನ್ನು ಹೊರಹಾಕುವಿಕೆಯನ್ನು ಹೆಚ್ಚಿಸಬಹುದಾದ್ದರಿಂದ, ಪೊಟ್ಯಾಸಿಯಮ್ ಕೊರತೆಯಿರುವ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಬೇಕು. ಪ್ರತಿದಿನ ಹಲೀಮ್ ಬೀಜಗಳನ್ನು ಸೇವಿಸುವ ಮೊದಲು ಹಲವಾರು ಅಂಶಗಳನ್ನು ಪರಿಗಣಿಸಬೇಕು. ವೈದ್ಯರ ಸಲಹೆಯೊಂದಿಗೆ
ವ್ಯಕ್ತಿಯ ವಯಸ್ಸು, ಆರೋಗ್ಯ, ಅಲರ್ಜಿಗಳು ಮತ್ತು ಇತರ ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಪರಿಗಣಿಸಬೇಕು.

ಸೌಮ್ಯ ಸನತ್.








