ಟೆಹ್ರಾನ್: ಜಾಗತಿಕ ತೈಲ ಬಿಕ್ಕಟ್ಟು ನಡುವೆಯೇ ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಇರಾನ್ ಮಹತ್ವದ ಸಡಿಲಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಭಾರತ ಸೇರಿ ಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಅನುಮತಿ ನೀಡಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.
ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಜಲಸಂಧಿ ಮುಕ್ತಗೊಳಿಸಲಾಗಿದೆ. ಆದರೆ ಶತ್ರು ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಪ್ರತೀಕಾರದ ಭಾಗವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರಿಂದ ಜಾಗತಿಕ ತೈಲ ಸಾಗಾಟಕ್ಕೆ ಅಡಚಣೆ ಉಂಟಾಗಿತ್ತು.
ಇತ್ತೀಚೆಗೆ ಅಮೆರಿಕ ಒಂದು ತಿಂಗಳ ಕದನ ವಿರಾಮ ಘೋಷಿಸಿದ ನಂತರ ಪರಿಸ್ಥಿತಿ ಬದಲಾಗಿದ್ದು, ಮಿತ್ರ ರಾಷ್ಟ್ರಗಳಿಗೆ ಜಲಮಾರ್ಗವನ್ನು ತೆರೆಯಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಅಂತ್ಯಗೊಳಿಸಲು 15 ಅಂಶಗಳ ಪ್ರಸ್ತಾಪ ಮಾಡಿದ ಬಳಿಕ ಈ ಬೆಳವಣಿಗೆ ಗಮನಸೆಳೆದಿದೆ.ಇದನ್ನು ಓದಿ –ಹೈಕಮಾಂಡ್ ತೀರ್ಮಾನದವರೆಗೆ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ
ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ವಿಶ್ವಸಂಸ್ಥೆ ಇರಾನ್‌ಗೆ ಕರೆ ನೀಡಿತ್ತು. ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಸೂಚನೆ ಬಳಿಕ ಇರಾನ್ ಈ ನಿರ್ಧಾರ ಕೈಗೊಂಡಿದೆ.








