ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆ, ನ್ಯಾಯಾಲಯದ ಸೂಚನೆಯಂತೆ ಈ ಬಾರಿ ಅಂಕ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪಟ್ಟಣದ ಬಂಗಾರಧಾಮದಲ್ಲಿ ತಮ್ಮ ತಾಯಿ ಶಕುಂತಲಾ ಬಂಗಾರಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಹಿಂದಿ ವಿಷಯಕ್ಕೆ ಅಂಕಗಳನ್ನು ನೀಡಲಾಗುತ್ತದೆ ಎಂದರು.
ಮುಂದಿನ ವರ್ಷದಿಂದ ಗ್ರೇಡ್ ಪದ್ಧತಿ ಜಾರಿಗೊಳಿಸುವ ಕುರಿತು ಸರ್ಕಾರ ನಂತರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದಿ ಕಡ್ಡಾಯವಲ್ಲ ಎಂಬ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಸರ್ಕಾರ ಹಿಂದಿ ವಿರೋಧಿಯಲ್ಲ, ಕನ್ನಡ ಉಳಿವಿಗೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.ಇದನ್ನು ಓದಿ –ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಜಾಮೀನು
ಹೈಕೋರ್ಟ್ ಆದೇಶವನ್ನು ಸರ್ಕಾರ ಸ್ವಾಗತಿಸುತ್ತಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.








