ಆಸ್ಟಿನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಪಿಕಲ್‌ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಪತನಗೊಂಡು ಐವರು ಮೃತಪಟ್ಟಿದ್ದಾರೆ. ವಿಂಬರ್ಲಿ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಸೆಸ್ನಾ 421C ವಿಮಾನವು ಅಮರಿಲ್ಲೊ ನಗರದಿಂದ ಹೊರಟು ನ್ಯೂ ಬ್ರೌನ್‌ಫೆಲ್ಸ್ ರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಪ್ರಯಾಣಿಸುತ್ತಿತ್ತು. ಆಸ್ಟಿನ್‌ನಿಂದ ಸುಮಾರು 40 ಮೈಲುಗಳಷ್ಟು ನೈಋತ್ಯ ದಿಕ್ಕಿನಲ್ಲಿ ಇರುವ ವಿಂಬರ್ಲಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ವಿಮಾನವು ಮರಗಳಿಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಅಪಘಾತದಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈ ಆಟಗಾರರು ನ್ಯೂ ಬ್ರೌನ್‌ಫೆಲ್ಸ್‌ನ ‘ಕ್ರ್ಯಾಂಕಿ ಪಿಕಲ್’ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ನಿಗದಿಯಾಗಿದ್ದ ಪಂದ್ಯಾವಳಿಯನ್ನು ರದ್ದುಪಡಿಸಲಾಗಿದ್ದು, ಸಂಘಟಕರು ಮೃತರಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದಾರೆ.
ಇದೇ ಕಾರ್ಯಕ್ರಮಕ್ಕೆ ಅಮರಿಲ್ಲೊದಿಂದ ಹೊರಟಿದ್ದ ಇನ್ನೊಂದು ವಿಮಾನವು ಸುರಕ್ಷಿತವಾಗಿ ನ್ಯೂ ಬ್ರೌನ್‌ಫೆಲ್ಸ್‌ನಲ್ಲಿ ಇಳಿದಿದೆ. ಅಪಘಾತಕ್ಕಿಂತ ಮುನ್ನ ಪೈಲಟ್ ತೊಂದರೆಯ ಸಂಕೇತವನ್ನು ಕಳುಹಿಸಿದ್ದಾಗಿ ವರದಿಯಾಗಿದೆ.ಇದನ್ನು ಓದಿ –ಇಂದು ಪಶ್ಚಿಮ ಬಂಗಾಳದಲ್ಲಿ ಮರು ಮತದಾನ ಆರಂಭ
ಅಪಘಾತಕ್ಕೂ ಮುನ್ನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು, ನಂತರ ರಾಷ್ಟ್ರೀಯ ಹವಾಮಾನ ಸೇವೆ ಗುಡುಗು ಸಹಿತ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ. ವಿಂಬರ್ಲಿ ಮತ್ತು ನ್ಯೂ ಬ್ರೌನ್‌ಫೆಲ್ಸ್ ಪ್ರದೇಶಗಳು ಟೆಕ್ಸಾಸ್ ಹಿಲ್ ಕಂಟ್ರಿಯ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.








