- ಅಂದಿಗಿಂತಲೂ ಇಂದೇ ಭಯಾನಕ…!
ಇಡೀ ವಿಶ್ವವನ್ನೆಲ್ಲಾ ಸುತ್ತುತ್ತಲೇ ವಿಶ್ವೇಶ್ವರನಾಗಿರುವ ಮಾಧ್ಯಮಲೋಕದ ಹಿರಿಯ ಪತ್ರಕರ್ತರೊಬ್ಬರ ಅಂಕಣ ಬರಹದ ವಾಣಿಯೊಂದನ್ನು ಎರಡು ದಿನಗಳ ಹಿಂದೆ ಓದಿದೆ.
ಅವರ ಆ ಬರಹದಲ್ಲಿ ದಶಕಗಳ ಹಿಂದಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮಗಳು , ಸುದ್ದಿಗಳು, ಪತ್ರಕರ್ತರಿಗೆ ರಾಜಕಾರಣಿಗಳಿಂದ ಸಿಗುತ್ತಿದ್ದ ಗೌರವ ಹಾಗೂ ಸಮಾಜದಲ್ಲಿ ಮಾಧ್ಯಮಗಳಿಗಿದ್ದ ಬೆಲೆ, ಘನತೆ , ಮೌಲ್ಯ….ಇತ್ಯಾದಿ ವಿಚಾರಗಳ ಬಗೆಗೆ ಅಚ್ಚುಕಟ್ಟಾಗಿ ಅವಲೋಕಿಸಿದ್ದಾರೆ. ಅಂದಿನ ಮಾಧ್ಯಮಲೋಕದ ವಿದ್ಯಮಾನಗಳನ್ನು ಇಂದಿನ ಕಾಲಘಟ್ಟಕ್ಕೆ ಹೋಲಿಸುತ್ತಲೇ ಅಂದು ಕಡೆಗಣಿಸಲ್ಪಟ್ಟಿದ್ದ ಓದುಗ ಇಂದು ಎಷ್ಟು ಮಹತ್ವವುಳ್ಳವನೆಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಇಂದಿನ ಪತ್ರಿಕಾ ಓದುಗ, ಪತ್ರಕರ್ತನಿಗಿಂತ ಮುಂದಿದ್ದಾನೆ. ಟಿವಿ ವೀಕ್ಷಕ, ಆಂಕರ್ ಗಿಂತ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಸಾಹಿತಿಗಿಂತ ಓದುಗನೇ ವಿಷಯವನ್ನು ಚೆನ್ನಾಗಿ ಮಂಡಿಸಬಲ್ಲ. ನುರಿತ ವಿಮರ್ಶಕನಿಗಿಂತ ಒಂದು ಕೈ ಮೇಲಾಗಿ ಪುಸ್ತಕವನ್ನಾಗಲಿ, ಸಿನಿಮಾವನ್ನಾಗಲಿ, ವಿಮರ್ಶೆ ಮಾಡಬಲ್ಲ. ಪತ್ರಕರ್ತನ ಬರಹದಲ್ಲಿರುವ ತಪ್ಪುಗಳನ್ನು ಪಟ್ಟಿ ಮಾಡಿ, ಎಲ್ಲರ ಎದುರು ಬೆತ್ತಲೆಯಾಗಿಸಬಲ್ಲ… ಇತ್ಯಾದಿಯಾಗಿ ಮಾಧ್ಯಮ ಕುರಿತಾದ ಅಂದಿನ ಮತ್ತು ಇಂದಿನ ವಾತಾವರಣವನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ.
ಈ ಎಲ್ಲವೂ ಸರಿ.
ಆದರೆ ಜಗತ್ತಿನವಾಣಿಯ ಸಂಪಾದಕರು ವಾಸ್ತವದ ಒಂದು ಮುಖವನ್ನಷ್ಟೇ ಹೇಳಿದ್ದಾರೆಯೇ ಹೊರತು ಇನ್ನೊಂದು ಮುಖದ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಇಂದು ಮಾಧ್ಯಮಗಳ ಟ್ರೆಂಡು ಬದಲಾಗಿರುವುದನ್ನು ಒತ್ತಿ ಹೇಳುವುದರ ಜೊತೆಗೆ ಡಿಜಿಟಲ್ ಮೀಡಿಯಾಗಳು ಸೋಷಿಯಲ್ ಮೀಡಿಯಾಗಳು ಉಂಟು ಮಾಡುತ್ತಿರುವ ಅಪಾಯಕಾರಿ ಸಂವಹನದ ಪರಿಣಾಮಗಳ ಬಗೆಗೂ ಆ ಹಿರಿಯ ಪತ್ರಕರ್ತರು ಬೆಳಕು ಚೆಲ್ಲಬೇಕಿತ್ತು. ಅಸಲು ಅದೇ ಸೆನ್ಸಿಟೀವ್ ಟಾಪಿಕ್ಕು.
.
ಹಿಂದೆ ಸೋಷಿಯಲ್ ಮೀಡಿಯಾಗಳು ಇಲ್ಲದಿದ್ದ ಕಾಲದಲ್ಲಿ ಪತ್ರಿಕೆಗಳಲ್ಲಿ ಬಂದಿದ್ದನ್ನೇ ಬಹುಪಾಲು ಜನ ನಂಬಲೇ ಬೇಕಾದ ವಾತಾವರಣವಿದ್ದರೂ ಅದು ಸಮಾಜಕ್ಕೆ ಅಂಥಾ ಅಪಾಯಕಾರಿಯಾಗಿರಲಿಲ್ಲ. ಏಕೆಂದರೆ ಯಾವ ಪತ್ರಿಕೆಯಾಗಲೀ ಅಥವಾ ಮಾಧ್ಯಮಗಳಾಗಲೀ ತೀರ ಮೂರೂಬಿಟ್ಟು ಫ಼ೇಕು ಸುದ್ದಿಗಳನ್ನು ಪ್ರಕಟಿಸುವ ಕೀಳುಮಟ್ಟಕ್ಕೆ ಹೋಗುತ್ತಿರಲಿಲ್ಲ.
ಅಷ್ಟರಮಟ್ಟಿಗೆ ಮಾಧ್ಯಮಕ್ಕೆ ಘನತೆ ಉಳಿದಿತ್ತು. ಆದರೆ ಇಂದಿನ ಯೂಟ್ಯೂಬುಗಳ ಪ್ರಜಾಪ್ರಭುತ್ವೀಕರಣದ ಕಾಲಘಟ್ಟದಲ್ಲಿ ಸುಳ್ಳುಸುದ್ದಿಗಳೇ ಎಲ್ಲಾ ಡಿಜಿಟಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಿವೆ. ಎಲ್ಲರೂ ರಚನಾತ್ಮಕತೆಗಿಂತ ರೋಚಕತೆಯ ಹಿಂದೆ ಬಿದ್ದು ಸುಳ್ಳುಗಳನ್ನು ಹುಟ್ಟಿಸಿ, ಹರಡಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರೂ ಬುದ್ದಿವಂತರೂ ಸಹಾ ಕೆಲವೊಂದು ಫ಼ೇಕು ಸುದ್ದಿಗಳೆಂದು ಗೊತ್ತಿದ್ದರೂ ಒಂದೊಮ್ಮೆ ಅದು ತಮಗಾಗದವರ ಬಗ್ಗೆ ಇದ್ದಲ್ಲಿ ಅದನ್ನು ಬೇಕಾಗಿಯೇ ಜಾಲತಾಣಗಳಲ್ಲಿ ಹರಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ಜನರಿಗೆ ಸುಳ್ಳುಸುದ್ದಿಗಳೇ ಹೆಚ್ಚು ಸಂತೋಷ ಕೊಡುವಂತಹ ವಿಕೃತ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಜಾತಿ ,ಮತ, ಧರ್ಮ ರಾಜಕೀಯಗಳಂತಹ ಸೂಕ್ಷ್ಮ ವಿಚಾರಗಳಲ್ಲಿ ಜನರ ನಡುವೆ ಕಂದಕಗಳನ್ನು ಸೃಷ್ಟಿಸುವ ಪ್ರವೋಕಿಂಗ್ ಸುದ್ದಿಗಳು ಮಾತ್ರವೇ ರಾರಾಜಿಸುತ್ತಿವೆ.
ರಾಜಕೀಯ ಪಕ್ಷಗಳಂತೂ ತಮ್ಮ ಐಟಿ ಸೆಲ್ ಗಳನ್ನು ಇಂಥಾ ಸುಳ್ಳುಸುದ್ದಿಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನಾಗಿ ಮಾಡಿಕೊಂಡು ಅದಕ್ಕೆಂದೇ ಕೋಟ್ಯಂತರ ಹಣ ಚೆಲ್ಲುತ್ತಿದ್ದಾರೆ. ಫೋನ್ ಕದ್ದಾಲಿಕೆ, ಕ್ಯಾಸೆಟ್, ಪೆನ್ ಡ್ರೈವು, ಪೆನ್ ಕ್ಯಾಮೆರಾ , ಸಿಡಿ ಗಳ ಕಾಲ ಮುಗಿದು ಈಗೇನಿದ್ದರೂ AI ಗಳ ಮೂಲಕ ಹೊಸ ಲೋಕವನ್ನೇ ಸೃಷ್ಟಿಸಿ ಹಸಿ ಸುಳ್ಳನ್ನೂ ಅಪ್ಪಟ ಸತ್ಯವನ್ನಾಗಿಸಿ ಜನರ ಕಿವಿಯಲ್ಲಿ ಹೂ ಇಟ್ಟಿದ್ದಾರೆ. ಫ಼ೇಕು ಸುದ್ದಿಗಳನ್ನು ಸೃಷ್ಟಿಸುವವರಿಗೆ, ಎದುರಾಳಿಗಳ ತೇಜೋವಧೆ ಮಾಡುವವರಿಗೆ, ರಾಜಕೀಯ ಲಾಭ ಪಡೆಯುವವರಿಗೆ , ಸಮಾಜಘಾತುಕ ಶಕ್ತಿಗಳಿಗೆ ಇವೆಲ್ಲವೂ ಬೆಲ್ಲದಷ್ಟೇ ಸವಿಯಾದ ಸ್ಟಫ಼್ ಆಗಿವೆ. ಅಂತೂ ಯಾರನ್ನು ಹೇಗೆ ಬೇಕಾದರೂ ತೋರಿಸುವ ನಂಬಿಸುವ ಸುಳ್ಳನ್ನೇ ನಿಜವೆಂದು ಭಯಾನಕ ಕ್ಯಾನ್ಸರ್ ನಂತೆ ಹರಡುತ್ತಿರುವ ಇಂದಿನ ಸುದ್ದಿಗಳ ಬಗೆಗೆ ವಿಶ್ವಮಟ್ಟದ ಸಂಪಾದಕರು ಸಹಜ ಆತಂಕದ ಜೊತೆಗೆ ಅರಿವಿನ ಬೆಳಕು ಚೆಲ್ಲಿದ್ದರೆ ಬರಹ ಪರಿಪೂರ್ಣವಾಗಿರುತ್ತಿತ್ತು.
ಅವರಿಗೆ ಇವೆಲ್ಲಾ ಗೊತ್ತಿಲ್ಲವೆಂದಲ್ಲ. ಆದರೆ ತಮಗೆ ಯಾವುದು ಬೇಕೋ ಅದನ್ನಷ್ಟೇ ಆರಿಸಿ ಬರೆಯುವ ಕಲೆ ಅವರಿಗೆ ಚೆನ್ನಾಗಿ ಗೊತ್ತು.
ಅದಿರಲಿ. ಆದರೆ ಇಡೀ ಬರಹದಲ್ಲಿ ಗಮನ ಸೆಳೆದದ್ದು, ಲೇಖಕರು ಈ ಮಾತುಗಳನ್ನು ಹೇಳುವ ಭರದಲ್ಲಿ ಅನಗತ್ಯವಾಗಿ ಇಂದು ನಮ್ಮೊಂದಿಗಿಲ್ಲದ ಕನ್ನಡದ ಹಿರಿಯ ಬರಹಗಾರರು ಹಾಗೂ ಪತ್ರಕರ್ತರಾಗಿದ್ದ ಪಿ.ಲಂಕೇಶ್ ಮತ್ತು ರವಿಬೆಳಗೆರೆಯವರನ್ನು ಉಲ್ಲೇಖಿಸಿ ಅವರನ್ನು ಪರೋಕ್ಷವಾಗಿ ಹೀಗಳೆಯುವ ಯತ್ನಕ್ಕೆ ಕೈಹಾಕಿದ್ದು ಮಾತ್ರ ಮಾಧ್ಯಮಲೋಕದವರ ಮತ್ಸರವನ್ನು ಅನಾವರಣ ಮಾಡಿಕೊಂಡಂತಿತ್ತು.
ಎಂಭತ್ತರ ದಶಕದಲ್ಲಿ ಕನ್ನಡದಲ್ಲಿ ಮೊಟ್ಟಮೊದಲ ಟ್ಯಾಬ್ಲಾಯ್ಡ್ ಪತ್ರಿಕೆಯನ್ನು ಜಾಹೀರಾತಿಲ್ಲದೇ ಹೊರತಂದು, ಅದನ್ನು ಕನ್ನಡದ ಜಾಣ ಜಾಣೆಯರ ಪತ್ರಿಕೆಯನ್ನಾಗಿ ರೂಪಿಸಿ ತಮ್ಮ ಪತ್ರಿಕೆಯನ್ನೇ ಸಮರ್ಥ ವಿರೋಧಪಕ್ಷವನ್ನಾಗಿಸಿ ಸರ್ಕಾರಕ್ಕೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಪಿ.ಲಂಕೇಶ್ ಕನ್ನಡ ಟ್ಯಾಬ್ಲಾಯ್ಡ್ ಲೋಕದ ಪಿತಾಮಹ. ಅವರ ಬಗೆಗೆ ಏನೆಲ್ಲಾ ಟೀಕೆ ಟಿಪ್ಪಣಿಗಳು ವೈರುಧ್ಯಗಳಿದ್ದರೂ ಅಧಿಕಾರದಲ್ಲಿದ್ದು ಅಡ್ಡದಾರಿ ಹಿಡಿದವರನ್ನೂ ಭ್ರಷ್ಟರನ್ನೂ ಮುಲಾಜಿಲ್ಲದೇ ಬಯಲಿಗೆಳೆದು ಮುಖವಾಡ ಕಳಚುತ್ತಿದ್ದ ಲಂಕೇಶರ ಅಂದಿನ ಸಾಹಸ ಕನ್ನಡ ಪತ್ರಿಕೋದ್ಯಮದಲ್ಲೇ ನವ ಮನ್ವಂತರಕ್ಕೆ ನಾಂದಿಹಾಡಿತ್ತು. ಜೊತೆಗೆ ಕನ್ನಡಿಗರ ಸಾಕ್ಷಿ ಪ್ರಜ್ಞೆಯಂತೆ , ಆಕ್ರೋಶದ ಸಂಕೇತದಂತೆ ಲಂಕೇಶ್ ಪತ್ರಿಕೆ ಬೆಳಗಿತ್ತು. ಕತ್ತಿಗಿಂತ ಪೆನ್ನು ಹರಿತ ಎಂಬ ಮಾತು ಅವರ ಬರಹಗಳಲ್ಲಿ ಅಕ್ಷರಶಃ ಧ್ವನಿಸುವಂತಿತ್ತು.
ಇನ್ನು ಲಂಕೇಶರ ಚಿಂತನೆಗಳಿಗಿಂತ ಭಿನ್ನವಾಗಿದ್ದರೂ ಇದೇ ಟ್ಯಾಬ್ಲಾಯ್ಡ್ ಲೋಕಕ್ಕೆ ಪಾಪಿಗಳ ಲೋಕದ ಪಾಕವನ್ನು ಬ್ಲೆಂಡ್ ಮಾಡಿ ಅದನ್ನು ತಮ್ಮದೇ ಆದ ಶೈಲಿಯಲ್ಲಿ ಅಕ್ಷರಗಳಲ್ಲಿ ಬೆಳಗಿಸಿದ್ದ ರವಿ ಬೆಳಗೆರೆ ತಮ್ಮ ಹಾಯ್ ಬೆಂಗಳೂರ್ ಮೂಲಕ ಪತ್ತಿಕೋದ್ಯಮದ ದಿಕ್ಕು ದೆಸೆಯನ್ನೇ ವಿಶಿಷ್ಟವನ್ನಾಗಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿದ್ದರು.
ಇವರಿಬ್ಬರ ಬಗ್ಗೆ ವಿಶ್ವವಾಣಿಯ ಸಂಪಾದಕರು ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾ….
” ತಾಕತ್ತಿದ್ದರೆ ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಪತ್ರಿಕೋದ್ಯಮ ಮಾಡಬೇಕಿತ್ತು. ಅವರ ಕಾಲದಲ್ಲಿ ಸಂವಹನವು ಏಕಮುಖವಾಗಿತ್ತು. ಅವರು ಬರೆದಿದ್ದನ್ನು ಓದಿ ಜನ ಮೆಚ್ಚಿಕೊಳ್ಳಬೇಕಿತ್ತೇ ಹೊರತು, ಪ್ರಶ್ನೆ ಮಾಡುವ ವೇದಿಕೆಗಳು ಇರಲಿಲ್ಲ. ಪ್ರಶ್ನೆ ಮಾಡುವವರ ಮೇಲೆ ಅವರು ಪ್ರಹಾರ ಮಾಡಿ ಬಾಯಿ ಮುಚ್ಚಿಸುತ್ತಿದ್ದರು. ಈಗ ಆ ತಂತ್ರಗಳು ನಡೆಯುವುದಿಲ್ಲ. ಈಗ ಓದುಗರು ಹಿಡಿಯುವ ಭೂತಗನ್ನಡಿ ಶಾಖಕ್ಕೆ ಅವರಿಬ್ಬರೂ ಸುಟ್ಟು ಹೋಗುತಿದ್ದರು. ” ಇವೇ ಮುಂತಾದ ಟೀಕಾಸ್ತ್ರಗಳಿಂದ ಅವರಿಬ್ಬರನ್ನು ತಿವಿದಿದ್ದಾರೆ. ಲಂಕೇಶ್ ಮತ್ತು ಬೆಳಗೆರೆ ಪರಿಪೂರ್ಣರೂ ಅಲ್ಲ ಟೀಕಾತೀತರೂ ಅಲ್ಲ. ಆ ಮಾತು ಬೇರೆ. ಆದರೆ ಹೀಗೆ ಹೀಗಳೆಯುವ ಮೂಲಕ ಅವರ ಮೇಲಿನ ತಮ್ಮೊಳಗಿನ ಅಸಹನೆಯನ್ನೋ ಈರ್ಷ್ಯೇಯನ್ನೋ ಹೊರಹಾಕುವ ಅಥವಾ ತಾವು ಸೋಷಿಯಲ್ ಮೀಡಿಯಾಗಳಿಲ್ಲದ ಅವರ ಕಾಲದಲ್ಲೂ ಮತ್ತು ಇಂದಿನ ಸಂಕೀರ್ಣ ಮಾಧ್ಯಮಲೋಕದ ವಾತಾವರಣದಲ್ಲೂ ನಡೆಯುತ್ತಿರುವ ನಾಣ್ಯವೇ ಎಂಬುದನ್ನು ಸೂಚ್ಯವಾಗಿ ಹೈಲೈಟ್ ಮಾಡಿ ಕೊಚ್ಚಿಕೊಂಡಿದ್ದಾರೆ.
ರೈಟ್…. ಎದುರಾಳಿಯನ್ನು ಕಾಲೆಳೆಯುವುದೂ ಅಥವಾ ಆತ್ಮರತಿಯ ಅಂತಃಪುರದಲ್ಲೇ ಅಮಲೇರಿಸಿಕೊಂಡು ಅಕ್ಷರಗಳೊಂದಿಗೆ ತಾವೂ ಅಲ್ಲಾಡುವುದು… ಇದಾವುದೂ ಮಾಧ್ಯಮಲೋಕದ ಕೆಲವು ಸ್ಟಾರ್ ಬರಹಗಾರರ ಖಯಾಲಿಗಳಿಗೆ ಹೊಸತೂ ಅಲ್ಲ ಅಚ್ಚರಿಯೂ ಅಲ್ಲ. ಅದಕ್ಕೆ ಇವರೂ ಹೊರತೂ ಅಲ್ಲ.
ಆದರೆ ಲಂಕೇಶ್ ಬಗ್ಗೆ ಭ್ರಷ್ಟರಿಗೆ , ರಾಜಕೀಯದವರಿಗೆ ಮಾತ್ರ ಹೆದರಿಕೆ ಇತ್ತು. ಆಬಗ್ಗೆ ಅವರೇನೇ ಬರೆದರೂ ಅದು ಜನಸಾಮಾನ್ಯರ ಭಾವನೆಗಳ ಮೇಲೆ ನಿತ್ಯ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರಿರಲಿಲ್ಲ. ಇನ್ನು ರವಿ ಬೆಳಗೆರೆ ಒಂದಷ್ಟು ಜನರ ವೈಯಕ್ತಿಕ ತೇಜೋವಧೆ ಮಾಡಿ ದುಡ್ಡು ಹೆಸರು ಮಾಡಿಕೊಂಡರೂ ಅದನ್ನು ಬೆಳಗೆರೆಯವರ ಚಾರಿತ್ರ್ಯದ ಮೇಲೆ ಜನ ವ್ಯಾಖ್ಯಾನಿಸಿ ಮಾತನಾಡಿಕೊಳ್ಳಬಲ್ಲರೇ ವಿನಃ ಅದರಿಂದ ಸಮಾಜಕ್ಕೆ ಸಾಮಾನ್ಯ ಜನರ ಬದುಕಿಗೆ ನೇರ ಪರಿಣಾಮ ಇರಲಿಲ್ಲ. ವಿಶ್ವವಾಣಿಯ ಸಂಪಾದಕರು ಬರೆದಂತೆ ಪಿ.ಲಂಕೇಶ್ ಮತ್ತು ರವಿ ಬೆಳಗೆರೆ ಅಷ್ಟು ಸುಲಭವಾಗಿ ಸುಟ್ಟುಹೋಗಬಲ್ಲ ತರಗಲೆಗಳಂತೂ ಅಲ್ಲ
ಆದರೆ ಇಂದು…..? ಈ ಯೂಟ್ಯೂಬು, ಡಿಜಿಟಲ್/ ಸೋಷಿಯಲ್ ಮೀಡಿಯಾಗಳ ಸುಳ್ಳುಸುದ್ದಿಗಳ ಸಾಗರದಲ್ಲಿ , ಪತ್ರಿಕಾಧರ್ಮವನ್ನೇ ಮರೆತು ಒಂದು ರಾಜಕೀಯ ಪಕ್ಷದ ತುತ್ತೂರಿಗಳಂತಾಗಿರುವ ನಮ್ಮ ಎಲೆಕ್ಟ್ರಾನಿಕ್ ಮೀಡಿಯಾಗಳ ಭರಾಟೆಯಲ್ಲಿ ಹೊರಬರುತ್ತಿರುವ ಜನರ ದಾರಿ ತಪ್ಪಿಸುತ್ತಿರುವ ಬಹುತೇಕ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿಯಲ್ಲವೇ….? ಜಾತಿ ಮತ ಧರ್ಮ ದ್ವೇಷಗಳ ಪ್ರಚೋದಕ ಸುದ್ದಿಗಳಿಂದ ಜನರ ನಿತ್ಯ ಬದುಕಿಗೆ ಹಾನಿಯಾಗುತ್ತಿಲ್ಲವೇ..? ಇದು ಯಾವ ಸಾಮಾಜಿಕ ಭಯೋತ್ಪಾದನೆಗಿಂತ ಕಡಿಮೆಯಿದೆ ?
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಅರಿವು ಮೂಡಿಸಿ ಮಾಧ್ಯಮಲೋಕದ ಘನತೆಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆಯನ್ನು ಹೇಳಬೇಕಾದ ವಿಶ್ವವಾಣಿಯ ಹಿರಿಯ ಪತ್ರಕರ್ತರು ಆದನ್ನು ಲಂಕೇಶ್ ಮತ್ತು ಬೆಳಗೆರೆಯವರ ಮೇಲಿದ್ದ ತಮ್ಮೊಳಗಿನ ಈರ್ಷ್ಯೆಯನ್ನೋ ಅಸಹನೆಯನ್ನೋ ಹೊರಹಾಕಲು ಬಳಸಿಕೊಂಡಿದ್ದು ಸಿನಿಕತನದ ಸಂಕೇತದಂತಿತ್ತು.
ಅವರು ಇದ್ದಿದ್ದರೂ ಅಥವಾ ಇವರು ಇಲ್ಲದಿದ್ದರೂ ಯಾವುದು ಏನಾಗಬೇಕೋ ಅದು ಆಗಿಯೇ ತೀರುತ್ತದೆ. ಒಬ್ಬ ವ್ಯಕ್ತಿ ತನ್ನನ್ನು ತಾನು ವೈಭವೀಕರಿಸಿಕೊಳ್ಳುವುದು ತಪ್ಪಲ್ಲ. ಆದರೆ ಆ ನಿಟ್ಟಿನಲ್ಲಿ ನಮ್ಮೆದುರು ಜೀವಂತವಾಗಿಲ್ಲದ ವ್ಯಕ್ತಿಗಳ ಬಗ್ಗೆ ಕ್ಷುಲ್ಲಕವಾಗಿ ಕಾಲೆಳೆಯುವುದು ತಪ್ಪು.
ಅವನೆಂಥಾ ಸೆಲೆಬ್ರಿಟಿ ಜರ್ನಲಿಸ್ಟೇ ಆಗಿರಲೀ, ಪತ್ರಕರ್ತನ ಅತಿ ಬುದ್ದಿವಂತಿಕೆಗಿಂತ, ಅವನಲ್ಲಿನ ವಸ್ತುನಿಷ್ಠತೆಯನ್ನು ಜನ ಬಯಸುತ್ತಾರೆ ಎಂಬ ಸಣ್ಣ ಅರಿವು ಈ ಮನಃಸ್ಥಿತಿಯವರಲ್ಲಿ ಇರಬೇಕಾಗಿರುವುದು ಮುಖ್ಯ.
ಇಂದಿನ ಬಹುತೇಕ ಸೋಷಿಯಲ್ ಮೀಡಿಯಾಗಳು, ಡಿಜಿಟಲ್ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ಲುಗಳು ಮತ್ತು ಟೀವಿ ನ್ಯೂಸ್ ಚಾನೆಲ್ಲುಗಳವರು ಹಿಡಿದಿರುವ ಹಾದಿ ನೋಡಿದಾಗ , ಅಧಿಕಾರದಲಿರುವವರಿಗೆ ಅಥವಾ ಕೆಲವು ರಾಜಕೀಯ ಪಕ್ಷಗಳಿಗೆ ತಮ್ಮನ್ನೇ ತಾವು ಮಾರಿಕೊಂಡಿರುವ ಕೆಲವು ಮಾಧ್ಯಮಲೋಕದ ಮುಖವಾಡಗಳನ್ನು ಕಂಡಾಗ , ವೃತ್ತಿಬದ್ದತೆಯನ್ನೇ ಮರೆತು ಯಾವುದೋ ಪಕ್ಷದ ಮುಖವಾಣಿಯಂತೆ ಒದರಿ ಬೂಟು ನೆಕ್ಕುವ ಮನಃಸ್ಥಿತಿಯ , ಇಲ್ಲವೇ ಗಾಳಿ ಬಂದಾಗ ತೂರಿಕೋ ಎಂಬ ನೀತಿಯಡಿಯಲ್ಲಿ ಪತ್ರಿಕಾಧರ್ಮವನ್ನೇ ಗಾಳಿಗೆ ತೂರಿ ಎಲ್ಲ ಸಿದ್ದಾಂತಗಳಿಗೂ ಬೀಸಣಿಕೆ ಬೀಸುತ್ತಾ ಓಲಾಡುವ ಅಡ್ನಾಡಿ ಪತ್ರಕರ್ತರಿಗಿಂತ….ಇದನ್ನು ಓದಿ –“ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
ನಮಗೇನೋ ಅವರ ವೈಯಕ್ತಿಕ ತಪರಾಕಿಗಳ ಹೊರತಾಗಿಯೂ ಲಂಕೇಶ್ ಮತ್ತು ರವಿಬೆಳಗೆರೆಯವರೇ ಸಮಾಜಕ್ಕೆ ಕಡಿಮೆ ಅಪಾಯಕಾರಿಯಾಗಿದ್ದರೆಂದು ಅನಿಸಿದರೆ ಅಚ್ಚರಿಯೇನಲ್ಲ.

ಹಿರಿಯೂರು ಪ್ರಕಾಶ್.








