ಬೆಳಿಗ್ಗೆ ಬೆಂಗಳೂರಿನ ನಮ್ಮಮೆಟ್ರೋ ರೈಲಿನಲ್ಲಿ ಯಶವಂತಪುರದಿಂದ ಜಯನಗರದೆಡೆಗೆ ಪ್ರಯಾಣ ಮಾಡುತ್ತಿದ್ದಾಗ ನಾ ಗಮನಿಸಿದ ಒಂದು ಚಿಕ್ಕ ಸನ್ನಿವೇಶ ಹೀಗಿತ್ತು ನೋಡಿ.
ಬೆಂಗಳೂರಿನಲ್ಲಿ ಎಲ್ಲೋ ಕೆಲ ಸುಡುಮಧ್ಯಾಹ್ನದ ಸಮಯ ಬಿಟ್ಟರೆ ಮಿಕ್ಕೆಲ್ಲಾ ಸಮಯದಲ್ಲೂ ಮೆಟ್ರೋಗಳಲ್ಲಿನ ಜನಸಂದಣಿ ವರ್ಣನೆಗೆ ನಿಲುಕದು. ಕಷ್ಟಪಟ್ಟು ನಿಂತು ನೇತಾಡಿಕೊಂಡು ಪಯಣಿಸಲೂ ಒದ್ದಾಡಬೇಕಾದ ಸ್ಥಿತಿ ಇರುವಾಗ ಇನ್ನು ಮೆಟ್ರೋರೈಲಿನಲ್ಲಿ ಕುಳಿತು ಪಯಣಿಸುವುದಕ್ಕೆ ಅದೃಷ್ಟ ಇರಬೇಕು. ನಾನಿದ್ದ ಭೋಗಿಯಲ್ಲಿ ಎಂದಿನಂತೆ ನಾನು ನಿಂತು ಪಯಣಿಸುತ್ತಿದ್ದ ಭೋಗಿಯಲ್ಲಿನ ಜಾಗದ ಎದುರು ಬದುರು ಸೀಟುಗಳಲ್ಲಿ ಎರಡು ಜೋಡಿಗಳು ಆಸೀನರಾಗಿ ಸಂಭಾಷಣೆಯಲ್ಲಿ ತೊಡಗಿದ್ದರು.
ಜೀನ್ಸು ಟೀ ಷರ್ಟು ತೊಟ್ಟ ಒಂದು ಜೋಡಿ ಸುಮಾರು ಮುವ್ವತ್ತರಿಂದ ಮುವ್ವತ್ತೈದರ ಆಸುಪಾಸಿನಲ್ಲಿದ್ದು ಹಿಂದಿಯಲ್ಲಿ , ಅವರ ಸಹಜವಾದ ಜೋರಾದ ಧ್ವನಿಯಲ್ಲಿ ಖುಷಿಯಿಂದ ಮಾತನಾಡುತ್ತಾ ಕೂತಿದ್ದರು. ಅವರನ್ನು ಕಂಡಾಗ ಉತ್ತರಭಾರತದ ರಾಜ್ಯದವರೆಂದು ಸುಲಭಕ್ಕೆ ಗುರುತಿಸಬಹುದಿತ್ತು.
ಅವರ ಎದುರಿಗೆ ಮತ್ತೊಂದು ಹಿರಿಯ ಜೋಡಿ ಬಹುಶಃ ೫೫ ರಿಂದ ೬೦ ರ ಪ್ರಾಯದವರಾಗಿದ್ದು ಪರಿಶುದ್ಧವಾದ ಕನ್ನಡದಲ್ಲಿ ಸೌಮ್ಯವಾಗಿ ಮಾತನಾಡುತ್ತಿದ್ದರು. ಅವರನ್ನು ಕರ್ನಾಟಕದವರೆಂದು ಹೇಳುವ ಅಗತ್ಯವಿಲ್ಲವಲ್ಲವೇ..!
ರೈಲು ರಾಜಾಜಿನಗರ ನಿಲ್ದಾಣದಕ್ಕೆ ಬಂದಾಗ ಅಲ್ಲಿ ನಾಲ್ಕು ಜನರ ಒಂದು ಕುಟುಂಬ ನಾವಿದ್ದ ಭೋಗಿಯನ್ನು ಏರಿದರು. ಅವರೆಲ್ಲರೂ ಅನ್ಯರಾಜ್ಯದ ಮಹಿಳೆಯರೇ ಆಗಿದ್ದು ಒಬ್ಬ ಮಹಿಳೆ ತನ್ನ ಚಿಕ್ಕ ಮಗುವನ್ನು ಎತ್ತಿಕೊಂಡೇ ನಿಂತಿದ್ದರು. ಅವರೆಲ್ಲಾ ಸರಿಯಾಗಿ ಈ ಉತ್ತರದ ಹಿಂದಿ ಮಾತನಾಡುವ ಜೋಡಿಯೆದುರು ನಿಂತಿದ್ದರು. ಆಕೆ ಮಗುವನ್ನೆತ್ತಿಕೊಂಡು ನಿಂತಿರುವ ಪಡಿಪಾಟಲನ್ನು ನೋಡಿಯೂ ನೋಡದಂತೆ ಈ ಜೋಡಿ ತಮ್ಮ ಸಂಭಾಷಣೆಯಲ್ಲಿ ಮುಳುಗಿದ್ದರು.
ಆಕೆಯ ಕಷ್ಟಕ್ಕೆ ಸ್ಪಂದಿಸುವ ಲಕ್ಷಣ ಇವರಲ್ಲಿ ಕಂಡುಬರದಾದಾಗ ಇನ್ನೇನು ಮಗು ಎತ್ತಿಕೊಂಡಿರುವ ಆ ಮಹಿಳೆಗೆ ಜಾಗ ಕೊಡಿ ಎಂದು ನಾನು ಹೇಳಬೇಕೆಂದುಕೊಳ್ಳುವಷ್ಟರಲ್ಲಿಯೇ , ಆಕೆಯನ್ನು ನೋಡಿದ ಎದುರು ಸೀಟಿನಲ್ಲಿ ಕುಳಿತಿದ್ದ ನಮ್ಮ ಕನ್ನಡದ ಆ ಹಿರಿಯ ಜೋಡಿಯ ವ್ಯಕ್ತಿ ಮೇಲೆದ್ದು ಮಗುವನ್ನೆತ್ತಿಕೊಂಡಿದ್ದ ಆ ಮಹಿಳೆಗೆ ಕರೆದು ತನ್ನ ಜಾಗದಲ್ಲಿ ಕೂರುವಂತೆ ಹೇಳಿ ಅವರಿಗೆ ಸೀಟು ಬಿಟ್ಟುಕೊಟ್ಟು ಎದ್ದು ಬಂದು ನನ್ನ ಪಕ್ಕದಲ್ಲಿಯೇ ನಿಂತು ಪಯಣಿಸಿದರು.
ಸೀಟು ಬಿಟ್ಟುಕೊಟ್ಟರೂ ಆ ಹಿರಿಯರ ಮುಖದಲ್ಲಿ ಯಾವ ನೋವಾಗಲೀ, ಭಾವನೆಯಾಗಲೀ ವಿಶೇಷವಾಗಿ ಕಾಣಲಿಲ್ಲ. ಬದಲಿಗೆ ಇದು ಸಹಜ ವರ್ತನೆ ಎಂಬಂತೆ ಸಲೀಸಾಗಿ ನಿಂತಿದ್ದರು . ಮತ್ತೇ ಈ ದೃಶ್ಯವನ್ನು ಗಮನಿಸಿದ ಉತ್ತರದ ಆ ಜೋಡಿ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡಿನಿಂದ ತಮ್ಮ ಮಾತುಕತೆಯಲ್ಲಿ ತಲ್ಲೀನರಾಗಿದ್ದರು.
ಇಡೀ ಈ ಸನ್ನಿವೇಶದಲ್ಲಿ ನನಗೆ ಕಂಡಿದ್ದು. ನಮ್ಮ ಕನ್ನಡಮಣ್ಣಿನವರ ಸಹಜ ಸದ್ಗುಣ ಹಾಗೂ ಸೌಜನ್ಯ ಹಾಗೂ ಇತರರ ಸಂಕಷ್ಟಕ್ಕೆ ಹಿಂದೆ ಮುಂದೆ ನೋಡದೇ ಸಹಾಯಹಸ್ತ ಚಾಚುವ ಔದಾರ್ಯತನ.
ಹಾಗಂತ ಕೇವಲ ಇದೊಂದು ಘಟನೆಯ ಆಧಾರದಿಂದ ಹಿಂದಿ ಮಾತನಾಡುವವರು ಅಥವಾ ಉತ್ತರಭಾರತದವರು ಎಲ್ಲರೂ ಹೀಗೆಯೇ ಕಲ್ಲು ಹೃದಯದವರೆಂದು ಅಥವಾ ನಿರ್ಭಾವುಕರೆಂದು ಆರೋಪಿಸುವ ದುರುದ್ದೇಶವಾಗಲೀ , ಸಿನಿಕತನವಾಗಲೀ ನನ್ನದಲ್ಲ. ಅವರಲ್ಲೂ ಸಜ್ಜನಿಕೆ ಸಹೃದಯವುಳ್ಳವರು ಸಾಕಷ್ಟು ಇರುತ್ತಾರೆ. ಇವರ್ಯಾರೋ ಅಂದು ಹಾಗಿದ್ದಿರಬಹುದು.
ಮೇಲಾಗಿ ಅಶಕ್ತರಿಗೆ, ಅಸಹಾಯಕರಿಗೆ ಸೀಟು ಬಿಟ್ಟುಕೊಡುವುದು ಬಿಡುವುದು ಅವರವರ ಮನಃಸ್ಥಿತಿಗೆ ಸಂಬಂಧಿಸಿದ ವಿಚಾರ. ನಮ್ಮಲ್ಲೂ ಬಸ್ಸುಗಳಲ್ಲಿ ರೈಲುಗಳಲ್ಲಿ ಹಿರಿಯನಾಗರಿಕರು, ಅಶಕ್ತರು ನಿಂತೇ ಪಯಣಿಸುತ್ತಿರುವುದನ್ನು ನೋಡಿಯೂ ಸಹಾಯ ಮಾಡದೇ ಇರುವ ಸಾಕಷ್ಟು ಸನ್ನಿವೇಶಗಳಿವೆ. ಅದರಲ್ಲೂ ಬಸ್ಸುಗಳಲ್ಲಿ ಹಿರಿಯನಾಗರಿಕರಿಗೆ ಮೀಸಲಾಗಿರುವ ಸೀಟುಗಳಲ್ಲಿ ಅವರಿಗೆ ಜಾಗವೇ ಸಿಗದು. ಆ ಮಾತು ಬೇರೆ .
ಇವೆಲ್ಲದರ ಹೊರತಾಗಿಯೂ, ತಾವೇ ಹಿರಿಯರಾಗಿದ್ದು ಒಬ್ಬ ಮಹಿಳೆ ತನ್ನ ಚಿಕ್ಕಮಗುವನ್ನು ಎತ್ರಿಕೊಂಡು ನಿಲ್ಲಲು ಪಡುತ್ತಿದ್ದ ಕಷ್ಟವನ್ನು ಕಂಡು ಇತರರ ಬಗ್ಗೆ ಯೋಚಿಸದೇ ಅದು ತನ್ನ ಸಹಜ ಕರ್ತವ್ಯವೆಂದೇ ಭಾವಿಸಿ ತಕ್ಷಣಕ್ಕೆ ಎದ್ದು ಸೀಟು ಬಿಟ್ಟ ಆ ಹಿರಿಯರು ತಾವು ನಿಂತೇ ಪಯಣಿಸಿದರಲ್ಲಾ…….ಆ ಗುಣ ಬಹುತೇಕ ಕನ್ನಡಿಗರ ರಕ್ತದಲ್ಲಿ ಬೆಸೆದುಕೊಂಡೇ ಬಂದಿದೆ, ಕರುನಾಡ ಮಣ್ಣಲ್ಲೇ ಬೆರೆತು ಹೋಗಿದೆ.
“ಇದೊಂದು ಚಿಕ್ಕ ಸಹಾಯ, ಇದಕ್ಕೇಕೆ ಇಷ್ಟುದ್ದ ಬಿಲ್ಡಪ್ಪು”.. ಎಂದು ಕೆಲವರಿಗೆ ಅನಿಸಬಹುದು. ಆದರೆ ಅಸಹಾಯಕರಿಗೆ ಸಹಾಯ ಹಸ್ತ ಚಾಚುವುದು, ಇಲ್ಲಿನ ಭಾಷೆ ಬಾರದವರಿಗೆ ಅವರ ಭಾಷೆಯಲ್ಲೇ ಸಂವಹನ ಮಾಡಿ ಅವರಿಗೆ ಉಪಕಾರ ಮಾಡುವುದು, ಇತರರನ್ನೂ ತಮ್ಮಂತೆಯೇ ಕಂಡು ಗೌರವಿಸುವುದು, ಅನ್ಯಭಾಷಿಕರು ತಮ್ಮೊಂದಿಗೆ ಸಮಾನವಾಗಿ ಹೊಂದಾಣಿಕೆಯಿಂದ ಜೀವಿಸಲು ಔದಾರ್ಯದಿಂದ ಅನುವು ಮಾಡಿಕೊಡುವುದು…ಇವೆಲ್ಲವೂ ಕನ್ನಡಿಗರ ಹುಟ್ಟುಗುಣ.
ಬಹಳಷ್ಟು ಸಾರಿ, ಕನ್ನಡಿಗರ ಈ ಗುಣಸ್ವಭಾವಗಳೇ ಕನ್ನಡಿಗರ ಹಿತಕ್ಕೆ ಧಕ್ಕೆಯಾಗುವಂತಹ ಸಂದರ್ಭಗಳು ಉದ್ಭವಿಸಿರುವುದುಂಟು . ಆದರೂ ಇತರರ ನೋವಲ್ಲಿ ಭಾಗಿಯಾಗುವ ಕನ್ನಡಿಗರ ಔದಾರ್ಯಕ್ಕೆ ದೇಶದಲ್ಲೇ ಯಾರೂ ಸಾಟಿಯಿಲ್ಲ.
ಕನ್ನಡಿಗನು ನೀನೆಂಬ ಅಭಿಮಾನ ಹೆಮ್ಮೆಯಿರಲಿ. ಅದೇ ಸಮಯದಲ್ಲಿ ಕನ್ನಡತನವನ್ನು ಅಭಿಮಾನಪೂರ್ವಕವಾಗಿ ಗಟ್ಟಿಯಾಗಿ ನಮ್ಮಲ್ಲೇ ಉಳಿಸಿಕೊಳ್ಳುವ ಕನ್ನಡಪ್ರಜ್ಞೆಯೂ ಸದಾ ಎಚ್ಚರವಾಗಿರಲಿ.
ನಾನೂ ಸಹಾ ದೇಶದ ಅನೇಕ ರಾಜ್ಯಗಳಲ್ಲಿ ಅದರಲ್ಲೂ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಅಲ್ಲಿನ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡಿದ್ದೇನೆ , ವ್ಯವಹರಿಸಿದ್ದೇನೆ.
ಆದರೆ ಇತರೆ ಭಾಷಿಕರಿಗೆ ಇಲ್ಲಿ ನಮ್ಮ ಕನ್ನಡಿಗರು ತೋರುವಷ್ಟು ಸಹಜ ಔದಾರ್ಯ , ಅಲ್ಲಿನ ಬಹುತೇಕರು ಹೊರಗಿನವರ ಬಗ್ಗೆ ತೋರುವುದು ವಿರಳ .
ಬಹುಶಃ ಈ ಕಾರಣಕ್ಕಾಗಿಯೇ ಇತರೆ ರಾಜ್ಯಗಳವರು ಅಥವಾ ಅನ್ಯಭಾಷಿಕರಿಗೆ ಕರ್ನಾಟಕವೆಂದರೆ ತಮ್ಮ ತವರುಮನೆಗಿಂತಲೂ ಹೆಚ್ಚು ಸುಖಕರ. ನನ್ನಲ್ಲೇ ಅನೇಕ ಅನ್ಯಭಾಷಿಕ ಸ್ನೇಹಿತರು ಹೇಳಿಕೊಂಡಿರುವಂತೆ ಅವರಿಗೆ ಇಲ್ಲಿಂದ ಅವರ ರಾಜ್ಯಕ್ಕೆ ವಾಪಾಸು ಹೋಗಲು ಮನಸೇ ಬಾರದಂತೆ ! ಹಾಗಾಗಿಯೇ ವೃತ್ತಿ ಕಾರಣಕ್ಕೋ ಅಥವಾ ವ್ಯವಹಾರಿಕ ಕಾರಣಕ್ಕೋ ಬೆಂಗಳೂರಿಗೆ ಬಂದು ನೆಲೆಸಿರುವ ಬಹುತೇಕ ಅನ್ಯ ರಾಜ್ಯದವರು ಇಲ್ಲಿಯೇ ಶಾಶ್ವತವಾಗಿ ನೆಲೆಯೂರಿ ಬದುಕು ಕಟ್ಟಿಕೊಳ್ಳುತ್ತಿರುವುದು.
ಇದರ ಕಾರಣ ,ಪರಿಣಾಮ- ದುಷ್ಪರಿಣಾಮಗಳ ಗಂಭೀರ ಚರ್ಚೆಯನ್ನು ಪಕ್ಕಕ್ಕಿಟ್ಟು ಸರಳವಾಗಿ ನೋಡುವುದಾದರೆ, ಅನ್ಯ ಭಾಷಿಕರು ಬೆಂಗಳೂರನ್ನು ಇಷ್ಟಪಡಲಿಕ್ಕೆ ಕನ್ನಡಿಗರ ಔದಾರ್ಯ, ಮಾಧುರ್ಯ, ಸೌಂದರ್ಯ ಹಾಗೂ ಮತ್ತೊಬ್ಬರ ಸಂಕಷ್ಟಕ್ಕೆ ಸಹಜವಾಗಿ ಸಹಾಯಹಸ್ತ ಚಾಚುವ ಸಹೃದಯತೆಗಳೇ ಬಹುಮಟ್ಟಿಗೆ ಕಾರಣ ಎಂಬುದಂತೂ ಸುಳ್ಳಲ್ಲ.
ಈ ಔದಾರ್ಯತೆಯ ಹೆಮ್ಮೆಯಲ್ಲಿ ತನ್ನನ್ನು, ತನ್ನ ಪರಂಪರೆಯನ್ನು, ತನ್ನ ಅಸ್ಮಿತೆಯನ್ನೂ ತನಗೆ ಅರಿವಿಲ್ಲದೇ ಕಳೆದುಕೊಳ್ಳುತ್ತಿರುವ ಬಗ್ಗೆಯೂ ಕನ್ನಡಿಗ ಎಚ್ಚರವಹಿಸಬೇಕಾದ , ತಾಯ್ನುಡಿ ತಾಯ್ನೆಲದ ಬಗ್ಗೆ ಜಾಗೃತಿವಹಿಸಬೇಕಾದ ತುರ್ತು ಅಗತ್ಯ ಇಂದಿನ ದಿನಗಳಲ್ಲಿ ಸ್ವಲ್ಪ ಹೆಚ್ವಿಗೆಯೇ ಇದೆ.
ಅದನ್ನು ಕನ್ನಡಿಗರಾರೂ ಮರೆಯಬಾರದು.

ಹಿರಿಯೂರು ಪ್ರಕಾಶ್.








