ಬೆಂಗಳೂರು: ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಶೇ. 10ರಿಂದ 30ರವರೆಗೆ ಹೆಚ್ಚಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. ಪರಿಷ್ಕೃತ ದರಗಳು ಶುಕ್ರವಾರ ರಾತ್ರಿ 12ರಿಂದ ಜಾರಿಗೆ ಬರಲಿವೆ.
ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಮತ್ತು ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಬಸ್‌ಗಳಿಗೆ ಈ ದರ ಏರಿಕೆ ಅನ್ವಯವಾಗಲಿದೆ.
ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ಮಾತನಾಡಿ, ‘ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಏಪ್ರಿಲ್ 1ರಿಂದ ಟೋಲ್ ಶುಲ್ಕವೂ ಹೆಚ್ಚಾಗಿದೆ. ಈಗ ಡೀಸೆಲ್ ದರ ಏರಿಕೆಯಿಂದ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.
ಟೋಲ್ ಶುಲ್ಕ ಕಡಿಮೆ ಇರುವ ಮಾರ್ಗಗಳಲ್ಲಿ ದರ ಏರಿಕೆ ಕಡಿಮೆ ಇರಲಿದ್ದು, ಟೋಲ್ ಹೆಚ್ಚು ಇರುವ ಮಾರ್ಗಗಳಲ್ಲಿ ಹೆಚ್ಚಳದ ಪ್ರಮಾಣವೂ ಹೆಚ್ಚು ಇರಲಿದೆ ಎಂದು ಅವರು ತಿಳಿಸಿದರು.
ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ
ಮುಂಬೈ: ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ವಹಿವಾಟಿನ ವೇಳೆ 96.14ಕ್ಕೆ ಕುಸಿದು ನಂತರ ಚೇತರಿಸಿಕೊಂಡು 95.81ರಲ್ಲಿ ಅಂತ್ಯಗೊಂಡಿದೆ. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.
ಈ ವರ್ಷದ ಆರಂಭದಿಂದ ಇದುವರೆಗೆ ರೂಪಾಯಿ ಮೌಲ್ಯವು ಸುಮಾರು ಶೇ. 6ರಷ್ಟು ಕುಸಿದಿದೆ. ಕಳೆದ ಆರು ವಹಿವಾಟು ದಿನಗಳಲ್ಲಿ ಮಾತ್ರವೇ ಶೇ. 2ರಷ್ಟು ಇಳಿಕೆಯಾಗಿದೆ.ಇದನ್ನು ಓದಿ –ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಲಿ: ಸಿದ್ದರಾಮಯ್ಯ
ಷೇರುಪೇಟೆ ಕುಸಿತ
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 160 ಅಂಶ ಇಳಿದು 75,237ರಲ್ಲಿ ಅಂತ್ಯಗೊಂಡಿದೆ. ನಿಫ್ಟಿ 46 ಅಂಶ ಕುಸಿದು 23,643ಕ್ಕೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 109.23 ಡಾಲರ್‌ಗೆ ತಲುಪಿದೆ.








