ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
2023ರಲ್ಲಿ ಸರ್ಕಾರ ರಚನೆಯಾಗುವ ವೇಳೆ ಲೋಕಸಭೆ ಚುನಾವಣೆಯವರೆಗೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರಲಿದ್ದಾರೆ ಎಂದು ಹೈಕಮಾಂಡ್ ತಿಳಿಸಿತ್ತು. ಆದರೆ ಅಧಿಕಾರ ಹಸ್ತಾಂತರದ ಗೊಂದಲ ನಿವಾರಣೆಯಾಗುವವರೆಗೆ ಅಧ್ಯಕ್ಷ ಸ್ಥಾನ ಬಿಡುವುದಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದರು.
ಇನ್ನೊಂದೆಡೆ, ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಅಧ್ಯಕ್ಷ ಸ್ಥಾನ ಸಿಕ್ಕರೆ ಸಚಿವ ಸ್ಥಾನ ತ್ಯಜಿಸುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರಂತೆ.
ರಾಜ್ಯದಲ್ಲಿ ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯೂ ಚರ್ಚೆಗೆ ಬಂದಿದೆ. ಲಿಂಗಾಯತ, ಮುಸ್ಲಿಂ, ದಲಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಸಭೆಗೆ ಹೋಗುವ ಸಾಧ್ಯತೆಗಳೂ ಕೇಳಿಬರುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆಯಾಗುವ ಸಾಧ್ಯತೆ ಇದೆ. ಬಿ.ಕೆ. ಹರಿಪ್ರಸಾದ್ ಹಾಗೂ ಅಂಜಲಿ ನಿಂಬಾಳಕರ ಹೆಸರುಗಳೂ ಚರ್ಚೆಯಲ್ಲಿವೆ.








