- ಸಿದ್ದರಾಮಯ್ಯರ ಅಂತಿಮ ನಿರ್ಧಾರ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮೊದಲು ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಈ ನೇಮಕ ರಾಜ್ಯ ರಾಜಕೀಯದಲ್ಲಿ ಪಕ್ಷಪಾತದ ಆರೋಪಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಕೆಲವೇ ದಿನಗಳ ಮೊದಲು ಮೇ 22 ರಂದು ದೇಸಾಯಿ ಅವರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿತ್ತು.
ಮುಖ್ಯಮಂತ್ರಿ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ಪಡೆದ ನಿವೇಶನ ಸಂಬಂಧ, ಭೂ ಮಂಜೂರಾತಿ ಪ್ರಕರಣದ ತನಿಖೆ ನಡೆಸಿದ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವವನ್ನು ನ್ಯಾಯಮೂರ್ತಿ ದೇಸಾಯಿ ವಹಿಸಿದ್ದರು. ಮುಡಾದಿಂದ ಪರ್ಯಾಯ ನಿವೇಶನಗಳ ಹಂಚಿಕೆ ಕಾನೂನುಬಾಹಿರವಲ್ಲ ಎಂದು ಆಯೋಗವು ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತ್ತು. ಈ ವರದಿಯನ್ನು ಸೆಪ್ಟೆಂಬರ್ 2025ರಲ್ಲಿ ರಾಜ್ಯ ಸಚಿವ ಸಂಪುಟ ಅಂಗೀಕರಿಸಿತ್ತು.
ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ರಾಜ್ಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮುಡಾ ಪ್ರಕರಣ ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ನಿಯಮಗಳನ್ನು ಉಲ್ಲಂಘಿಸಿ ಪಾರ್ವತಿ ಸಿದ್ದರಾಮಯ್ಯ ಅವರು ತಮ್ಮ ಭೂಮಿಗೆ ಬದಲಾಗಿ ಮೈಸೂರಿನ ಪ್ರಮುಖ ಬಡಾವಣೆಯಲ್ಲಿ 14 ಪರಿಹಾರ ನಿವೇಶನಗಳನ್ನು ಪಡೆದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು.ಇದನ್ನು ಓದಿ –ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿ ಆಯ್ಕೆ
ಪ್ರಕರಣದಲ್ಲಿ ತಮಗೆ ಅನುಕೂಲಕರ ವರದಿಯನ್ನು ನೀಡಿದ ನ್ಯಾಯಾಧೀಶರನ್ನು ರಾಜ್ಯದ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿರುವುದು, ಅದು ಕೂಡ ಮುಖ್ಯಮಂತ್ರಿ ಸ್ವತಃ ನಿರ್ಗಮಿಸುವ ಮುನ್ನಾದಿನ ತೆಗೆದುಕೊಂಡಿರುವ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.








