- ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಅಧೀನ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಧೀನ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನಿನ ಆದೇಶದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ರದ್ದುಪಡಿಸುವಂತೆ ಆದೇಶ ನೀಡಿದೆ.
ಆದಾಗ್ಯೂ, ಸ್ವಾಮೀಜಿಗೆ ಮೂರು ವಾರಗಳೊಳಗೆ ಸಂಬಂಧಿತ ಅಧೀನ ನ್ಯಾಯಾಲಯದಲ್ಲಿ ನಿಯಮಿತ (ರೆಗ್ಯುಲರ್) ಜಾಮೀನಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಬಂಧನದಿಂದ ರಕ್ಷಣೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಕೀಲರು, ದೂರು ದಾಖಲಾದ ಬಳಿಕ ಸ್ವಾಮೀಜಿಯಿಂದ ಬೆದರಿಕೆ ಹಾಕಲಾಗಿದೆ ಹಾಗೂ ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಜಾಮೀನು ಪಡೆಯುವವರೆಗೆ ಪ್ರಕರಣದ ಕುರಿತು ಯಾವುದೇ ರೀತಿಯ ಹೇಳಿಕೆ ನೀಡಬಾರದು. ಯಾಕೆ ಬೆದರಿಕೆ ಹಾಕಿದ್ದೀರಿ?” ಎಂದು ಸ್ವಾಮೀಜಿ ಪರ ವಕೀಲರಿಗೆ ತೀವ್ರ ಎಚ್ಚರಿಕೆ ನೀಡಿತು.
ಪ್ರಕರಣದ ವಿವರದ ಪ್ರಕಾರ, ಸಂತ್ರಸ್ತ ಬಾಲಕನ ತಾಯಿ 2026ರ ಮೇ 7ರಂದು ವಚನಾನಂದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದರು. ಮೇ 8ರಂದು ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಇದನ್ನು ಓದಿ -13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ
ಆದರೆ, ದೂರು ದಾಖಲಾಗುವ ಮುನ್ನವೇ, ಅಂದರೆ ಮೇ 6ರಂದು ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಿದೆ.








