ಬೆಂಗಳೂರು: ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ವೇತನ ಹೆಚ್ಚಳದ ಸಿಹಿ ಸುದ್ದಿ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ನೌಕರರ ಮೂಲ ವೇತನವನ್ನು ಶೇ.12.5ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಜುಲೈ ತಿಂಗಳ ವೇತನದಿಂದಲೇ ಪರಿಷ್ಕೃತ ವೇತನ ಜಾರಿಗೆ ಬರಲಿದ್ದು, ಹೊಸ ವೇತನ ಪರಿಷ್ಕರಣೆ 2025ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಇದರಿಂದ ಬಾಕಿ ಉಳಿದಿದ್ದ ವೇತನದ ಮೊದಲ ಕಂತಿನ ಮೊತ್ತವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ.
ಈ ನಿರ್ಧಾರದಿಂದ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ನೌಕರರಿಗೆ ನೇರ ಪ್ರಯೋಜನವಾಗಲಿದೆ. ವೇತನ ಹೆಚ್ಚಳದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 72.80 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅವಧಿಯಲ್ಲಿ ಈ ವೇತನ ಪರಿಷ್ಕರಣೆಗೆ ಅನುಮೋದನೆ ದೊರೆತಿದ್ದು, ಇಂದಿನಿಂದ ಸಾರಿಗೆ ನೌಕರರ ಬ್ಯಾಂಕ್ ಖಾತೆಗಳಿಗೆ ಪರಿಷ್ಕೃತ ವೇತನ ಜಮೆಯಾಗಲಿದೆ.








