ಕೊಪ್ಪಳ: ಸುಮಾರು ₹72 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಕೆಆರ್‌ಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಹಾಗೂ ಗುತ್ತಿಗೆದಾರ ದೇವರಾಜ್ ಅವರನ್ನು ಬಂಧಿಸಿದ್ದಾರೆ.
ನಿವೃತ್ತಿಗೆ ಕೇವಲ 15 ದಿನ ಬಾಕಿ ಇರುವಾಗಲೇ ಅಧಿಕಾರಿಯ ಬಂಧನವಾಗಿರುವುದು ಪ್ರಕರಣಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ನಕಲಿ ಬಿಲ್‌ಗಳ ಮೂಲಕ ಹಣ ದುರುಪಯೋಗ ಆರೋಪ
ಸುಮಾರು ಐದು ವರ್ಷಗಳ ಹಿಂದೆ 339 ಕಾಮಗಾರಿಗಳನ್ನು ಕೈಗೊಳ್ಳದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸುಮಾರು ₹72 ಕೋಟಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಗಳಿಗೆ ಪೂರಕ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಅವರನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ದೇವರಾಜ್ ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಜಿಎಸ್‌ಟಿ ದುರುಪಯೋಗದ ಆರೋಪ
ಕಾಮಗಾರಿ ನಡೆಸದೇ ಬಿಲ್‌ಗಳನ್ನು ಸಲ್ಲಿಸಿ ಹಣ ಪಡೆದಿರುವುದಲ್ಲದೆ, ₹20 ಕೋಟಿಗೂ ಅಧಿಕ ಜಿಎಸ್‌ಟಿ ಹಣದ ದುರುಪಯೋಗ ನಡೆದಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧವೂ ಲೋಕಾಯುಕ್ತದಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದ ಅಧಿಕಾರಿ
ಕಳೆದ ವರ್ಷವೇ ಚಿಂಚೋಳ್ಕರ್ ವಿರುದ್ಧ ಕೆಆರ್‌ಡಿಎಲ್ ಅಧಿಕಾರಿಗಳು ಹಾಗೂ ಇತರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿಂದೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತಾದರೂ, ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದು ಸೇವೆಯಲ್ಲಿ ಮುಂದುವರಿದಿದ್ದರು ಎಂದು ತಿಳಿದುಬಂದಿದೆ.ಇದನ್ನು ಓದಿ –ಭಾರತ–ಬ್ರಿಟನ್ ವ್ಯಾಪಾರ ಒಪ್ಪಂದ: ಪ್ರೀಮಿಯಂ ಮದ್ಯದ ಬೆಲೆ ಮತ್ತಷ್ಟು ಇಳಿಕೆ
ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರಿಸಿದ್ದಾರೆ. ಅಗತ್ಯವಿದ್ದಲ್ಲಿ ಚಿಂಚೋಳ್ಕರ್ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ .








