ಚಾಮರಾಜನಗರ: ರಸ್ತೆ ಕಾಮಗಾರಿಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ಕರ್ತವ್ಯ ಲೋಪ ಹಾಗೂ ಆರ್ಥಿಕ ಅಕ್ರಮ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಅಮಾನತುಗೊಂಡವರಲ್ಲಿ ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪುರುಷೋತ್ತಮ (ಪ್ರಸ್ತುತ ಆನೇಕಲ್ ಉಪ ವಿಭಾಗ) ಹಾಗೂ ಕೊಳ್ಳೇಗಾಲ ಉಪ ವಿಭಾಗದ ಪ್ರಸ್ತುತ ಎಇಇ ಎನ್. ಸುರೇಂದ್ರ ಕುಮಾರ್ ಸೇರಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ, ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ಅನುಮೋದನೆ ನೀಡಿರುವುದು, ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸದಿರುವುದು ಹಾಗೂ ಅಳತೆಗಳಲ್ಲಿ ವ್ಯತ್ಯಾಸವಿದ್ದರೂ ₹88.83 ಲಕ್ಷ ಮೊತ್ತದ ಬಿಲ್ ಪಾವತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಆರೋಪದ ಮೇರೆಗೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಹನೂರು ತಾಲೂಕಿನ ಕೊರಮನಕತ್ರಿ–ಟಿಬೇಟಿಯನ್ ಸೆಟಲ್‌ಮೆಂಟ್ ಸಂಪರ್ಕಿಸುವ 4.20 ಕಿಲೋಮೀಟರ್ ರಸ್ತೆ ಕಾಮಗಾರಿಗೆ ಪೂರ್ವಾನುಮೋದನೆ ಪಡೆಯದೇ ಟೆಂಡರ್ ಆಹ್ವಾನಿಸಿ ಮಂಜೂರು ಮಾಡಲಾಗಿತ್ತು ಎನ್ನಲಾಗಿದೆ.ಇದನ್ನು ಓದಿ –ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಸೆರೆ
ಇದಲ್ಲದೆ, ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸದಿರುವುದು, ಅಳತೆ ಪುಸ್ತಕದಲ್ಲಿನ ದಾಖಲೆಗಳು ಮತ್ತು ಕಾಮಗಾರಿ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದರ ನಡುವೆಯೇ ಚಾಲ್ತಿ ಬಿಲ್ ಮೂಲಕ ₹88.83 ಲಕ್ಷ ಪಾವತಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.








