ಮೈಸೂರು: ಚಲನೆಯಿಲ್ಲದ ಜಾತಿವ್ಯವಸ್ಥೆ ಇರುವವೆರೆಗೂ ಬಸವಣ್ಣನವರ ತತ್ವಗಳು ಪ್ರಸ್ತುತವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ಜಿಲ್ಲಾ ಬಸವ ದಳಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, “2026ರ ಬಸವಶ್ರೀ” ಪ್ರಶಸ್ತಿ ಪ್ರಧಾನ ಮಾಡಿದರು. ಬಸವಣ್ಣನವರ ಆದರ್ಶಗಳನ್ನು ಪಾಲಿಸಿದ ಡಾ.ಸಿದ್ಧರಾಮ ಶರಣರು 2025-26ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಭಾಜನರಾಗಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಬಸವಣ್ಣನವರು ಸಮಾಜದಲ್ಲಿ ಜಾತಿವರ್ಣ ವ್ಯವಸ್ಥೆಗಳ ವಿರುದ್ಧ ಹೋರಾಡಿದರು. ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಕರ್ಮ ಸಿದ್ಧಾಂತವನ್ನು ಅಲ್ಲಗಳೆದಿದ್ದರು. ಸಾವಿರಾರು ವರ್ಷಗಳಿಂದ ಶೋಷಿತ ವರ್ಗಗಳು ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿತ್ತು. ಬಸವಾದಿಶರಣರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮಕ್ಕೆ ನಾಂದಿ ಹಾಡಿದರು. ವೈದಿಕ ಧರ್ಮದಲ್ಲಿ ಚರ್ತುವರ್ಣ ವ್ಯವಸ್ಥೆಯಿತ್ತು. ಆದ್ದರಿಂದ ಹನ್ನರೆಡನೇ ಶತಮಾನದಲ್ಲಿ ಸಮಾನತೆ, ಮಾನವೀಯತೆಯಿಂದ ಕೂಡಿದ ಲಿಂಗಾಯತ ಧರ್ಮವನ್ನು ಸ್ಥಾಪಿಸಲಾಯಿತು ಎಂದರು.
ವೈರುಧ್ಯತೆಯ ಸಮಾಜದಲ್ಲಿ ಬದಲಾವಣೆ ತರಲು ಬುದ್ಧಬಸವಾದಿ ಶರಣರು ಶ್ರಮಿಸಿದ್ದರು. ಆದರೂ ಇಂದಿಗೂ ಜಾತಿವ್ಯವಸ್ಥೆ ಪ್ರಚಲಿತವಾಗಿದೆ. ಭಾರತದ ಜಾತಿವ್ಯವಸ್ಥೆಗೆ ಚಲನೆಯಿಲ್ಲ. ಆರ್ಥಿಕ ಸಾಮಾಜಿಕ ಶೈಕ್ಷಣಿಕ ಶಕ್ತಿ ದೊರಕಿದಾಗ ಮಾತ್ರ ಚಲನೆಯಿಲ್ಲದ ಜಾತಿವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ‘ಇವನಾರವ ಇವನಾರವ’ ಎನ್ನುವ ಬದಲು ಇವ ‘ಇವ ನಮ್ಮವ’ಎನ್ನುವ ವ್ಯವಸ್ಥೆ ಬರುವವರೆಗೂ ಬಸವ ವಿಚಾರಗಳು ಪ್ರಸ್ತುತವಾಗಿರುತ್ತವೆ. ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವವನ್ನು ವಿಶ್ವಕ್ಕೆ ಪರಿಚಯಿಸಿ, ಎಲ್ಲಾ ವೃತ್ತಿಗಳೂ ಘನತೆಯುಳ್ಳದ್ದು ಎಂದಿದ್ದರು. ಉತ್ಪಾದನೆಯಾದ ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳುವುದೇ ಕಾಯಕ ಮತ್ತು ದಾಸೋಹದ ಮೂಲಮಂತ್ರ. ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಜಾರಿಗೆ ಬರುವ ಮುಂಚೆ ಮನುಶಾಸ್ತ್ರ ಜಾರಿಯಲ್ಲಿತ್ತು. ಆದ್ದರಿಂದ ಅವರು’ಹಿಂದು ಧರ್ಮವನ್ನು ಸುಧಾರಿಸಲು ಸಾಧ್ಯವಾಗಲಿಲ್ಲ’ ವೆಂದು ಮನುಶಾಸ್ತ್ರವನ್ನು ಸುಡುತ್ತೇನೆ ಎಂದಿದ್ದರು. ಅಸಮಾನತೆಯ ಸಮಾಜದಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ವಾತಂತ್ರ್ಯ ಅಗತ್ಯ ವೆಂದು ತಿಳಿಸಿದ್ದರು. ಸಮಾಜದ ಅಶಕ್ತರ ಮೇಲೆ ನಡೆದ ಅನ್ಯಾಯಗಳ ಇತಿಹಾಸದ ಬಗ್ಗೆ ಅರಿವಿಲ್ಲದವರು ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲವೆಂದರು.
ಸಮಾಜದಲ್ಲಿ ಅಸಮಾನತೆಯನ್ನು ನಿರಂತರಗೊಳಿಸಲು ಪಟ್ಟಭದ್ರಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಜಾತಿವ್ಯವಸ್ಥೆ ನಿರ್ಮೂಲನೆಗೆ ವೈಚಾರಿಕ ವೈಜ್ಞಾನಿಕ ಶಿಕ್ಷಣ ಅಗತ್ಯ. ಆದ್ದರಿಂದ ಯುವಜನತೆ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಮನುವಾದಿಗಳು ಮೂಢನಂಬಿಕೆಗಳನ್ನು ಬೆಳೆಸುತ್ತಾರೆ ಎಂದರು. ಬಸವ ಭವನಕ್ಕೆ ಐದು ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ದೊರೆಯಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ಇದನ್ನೇ ಬಸವ, ಬುದ್ಧ, ಅಂಬೇಡ್ಕರ್ ಹೇಳಿದ್ದು ಎಂದರು. ಬಸವಣ್ಣಪಥದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಬಗ್ಗೆ ಶಪಥ ಮಾಡಬೇಕು. ನಮ್ಮ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋಗಳನ್ನು ಕಡ್ಡಾಯ ಮಾಡಿದ್ದಲ್ಲದೆ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಸವಣ್ಣನವರ ಕರ್ಮ ಭೂಮಿ ಅನುಭವ ಮಂಟಪದ ಪುನ: ಸ್ಥಾಪನೆಗೆ ಗೋ.ರು.ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅದರ ವರದಿಯನ್ವಯ ಅನುದಾನ ನೀಡಲಾಗಿದೆ. ಈ ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳುವ ಬಗ್ಗೆ ಭರವಸೆಯಿದೆ ಎಂದರು.
ಬಸವಣ್ಣನವರ ವಿಚಾರಗಳನ್ನು ನಮ್ಮ ಸರ್ಕಾರ ಅನುಸರಿಸುತ್ತಿದೆ. ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಗ್ಯಾರಂಟಿ ಯೋಜನೆಗಳು ಎಲ್ಲಾ ಧರ್ಮದವರಿಗೆ ತಲುಪುತ್ತಿದೆ. ಚಲನರಹಿತ ಜಾತಿ ವ್ಯವಸ್ಥೆಯಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ದೊರೆತರೆ ಮಾತ್ರ ಚಾಲನೆ ದೊರೆಯುತ್ತದೆ. ಎಲ್ಲಾ ಧರ್ಮಗಳೂ ಮತ್ತೊಬ್ಬರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ.ಎಲ್ಲರೂ ಪರಸ್ಪರ ಪ್ರೀತಿಸಬೇಕು ಹಾಗೂ ಮನುಷ್ಯರಾಗುವ ಪ್ರಯತ್ನ ಮಾಡಬೇಕು, ಬಸವಣ್ಣವನರೂ ಇದನ್ನೇ ಪ್ರತಿಪಾದಿಸಿದ್ದರು ಎಂದರು. ಸರಳವಾಗಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ ಬಸವ ಜಯಂತಿ ಕಾರ್ಯಕ್ರಮವು ಕಲ್ಯಾಣದಲ್ಲಿ ಬಸವನಣ್ಣ ಅವರು ನಡೆಸಿದ ಎಲ್ಲಾ ಕ್ರಾಂತಿಯ ವಿಚಾರ ಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಒಂದು ಪ್ರಯತ್ನವಾಗಿದೆ. ಈ ಕಾರ್ಯಕ್ರಮದ ಮೂಲಕ ಬಸವಣ್ಣ ನವರ ವಿಚಾರಗಳು ಎಲ್ಲರ ಮನೆ ಬಾಗಿಲಿಗೆ ತಲುಪಬೇಕು. ಬಸವಣ್ಣ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಲಿಂಗ ತಾರತಮ್ಯದ ಬಗ್ಗೆ ಅವರು ತಮ್ಮ ಕುಟುಂಬದವರ ವಿರುದ್ಧವೇ ನಿಂತರು. ಲಿಂಗ ಧಾರಣೆ ಎಲ್ಲರೂ ಮಾಡಿ ದೇಹವೇ ದೇಗುಲ, ಕಾಯಕವೇ ಕೈಲಾಸ ಎಂದು ಸಾರಿದರು. ತೆರಿಗೆ ಹಣವನ್ನು ಜನರ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬ ನಿಲುವು ಹೊಂದಿದ್ದರು, ಸಮ ಸಮಾಜದ ನಿರ್ಮಾಣ ಬಗೆಗಿನ ಅವರ ನಿಲುವು ಅಪಾರವಾಗಿದೆ ಎಂದು ತಿಳಿಸಿದರು.
ಬಸವಣ್ಣ ಅವರು 12 ನೇ ಶತಮಾನದಲ್ಲಿ ವರ್ಣಾಶ್ರಮವನ್ನು ವಿರೋಧಿಸಿ ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸಿದರು. ಸಮಾಜದಲ್ಲಿ ಬುದ್ಧರ ನಂತರ ಸಮ ಸಮಾಜ ನಿರ್ಮಾಣದ ಬಗ್ಗೆ ಜನಸಮಾನ್ಯರಿಗೆ ವಚನಗಳ ಮೂಲಕ ತಿಳಿಸಿದ ಮಹಾನ್ ವ್ಯಕ್ತಿ ಬಸವಣ್ಣನವರಾಗಿದ್ದಾರೆ. ಬಸವಣ್ಣ ಒಬ್ಬ ಸಾಂಸ್ಕೃತಿಕ ನಾಯಕ ಬಸವಣ್ಣ ನವರ ಅದ್ಬುತವಾದ ಕಲ್ಪನೆ ಎಂದರೆ ಅವರ ಅನುಭವ ಮಂಟಪದವಾಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸ್ಥಾಪನೆಯನ್ನು ಮಾಡಲಾಯಿತು.ದೇಗುಲದಲ್ಲಿ ದೇವರನ್ನು ಕಾಣುವ ಬದಲು ಮನದಲ್ಲಿ ಆತ್ಮಲಿಂಗವನ್ನು ಪೂಜಿಸಬೇಕು ಎಂದು ಲೋಕಕ್ಕೆ ಸಾರಿದ ಮಹಾನ್ ವ್ಯಕ್ತಿ ಬಸವಣ್ಣ. ಬುದ್ಧ, ಬಸವ, ಅಂಬೇಡ್ಕರ್ ಅವರು ದೊಡ್ಡ ಪ್ರಜಾಪ್ರಭುತ್ವದ ಮಹಾನ್ ಹೋರಾಟಗಾರರು. ಅಂತಹ ಪ್ರಜಾಪ್ರಭುತ್ವಕ್ಕೆ ಬುನಾದಿ ಆದವರು ಬಸವಣ್ಣನವರು.ಕತ್ತಲಿನಿಂದ ಬೆಳಕಿಗೆ ನಡೆಸುವ ಬಸವ ಜಯಂತಿಯನ್ನು ಆಚರಿಸುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬಸವಣ್ಣನವರು ಮಾನವ ಘನತೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದವರು. ಜಾತಿ ಭೇದವನ್ನು ಕಿತ್ತೊಗೆದು ಸರ್ವ ಸಮಾಜಕ್ಕೂ ಸಮಾನವಾದ ಸಮಾಜವನ್ನು ನಿರ್ಮಾಣ ಮಾಡಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸಿದವರು. ದೇಹವನ್ನೇ ದೇಗುಲ ಮಾಡಿ ಅಂಗೈ ಮೇಲೆ ಇಷ್ಟಲಿಂಗ ಇರಿಸಿ ಜೀವಾತ್ಮನು, ಪರಮಾತ್ಮನು ಕೂಡುವ ಸ್ಥಳವನ್ನು ಸಂಗಮ ಸ್ಥಳವನ್ನಾಗಿ ಮಾಡಿದರು. ಮಡಿ ಮೈಲಿಗೆ ಗಳಂತಹ ಮೌಡ್ಯತೆಯನ್ನು ಒಡೆದು ಹಾಕಿ ಇಷ್ಟ ಲಿಂಗ ಪೂಜೆಯನ್ನು ಸಮಾಜಕ್ಕೆ ಸಾರಿದವರು, ಬಸವೇಶ್ವರ ದೇವರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವರಾಜ್ ತಂಗಡಗಿ ಮಾತನಾಡಿ, ಬಸವಣ್ಣನವರು ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿಕೊಟ್ಟ ಮಹಾನ್ ಕ್ರಾಂತಿಕಾರಿ ಮತ್ತು ಮಾನವ ಸಮಾನತೆಯ ಹರಿಕಾರ ಅವರ ತತ್ವಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲು ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಹಿಂದೆ ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದ ಬಸವ ಜಯಂತಿಯನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ಪರಿವರ್ತಿಸಿ, ಅದಕ್ಕೆ ವೈಭವವನ್ನು ನೀಡಲಾಗುತ್ತಿದೆ. ಮೊದಲಿಗೆ ವಿಧಾನ ಸೌಧದಲ್ಲಿ, ನಂತರ ಕೂಡಲಸಂಗಮದಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಈ ಬಾರಿ ಮೈಸೂರಿನಲ್ಲಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕಳೆದ 29 ವರ್ಷಗಳಿಂದ ಮೈಸೂರಿನಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಒಗ್ಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ.ಇಂತಹ ಒಕ್ಕೂಟ ವ್ಯವಸ್ಥೆಯು ರಾಜ್ಯಕ್ಕೇ ಮಾದರಿಯಾಗಿದೆ. ಸಾಮಾಜಿಕ ಸಮಾನತೆಯ ಸಂದೇಶವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಜಾತಿ, ಮತ, ಪಂಥಗಳನ್ನು ಮೀರಿ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಅವರ ತತ್ವಾದರ್ಶಗಳಾದ ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಯಂತಹ ವಿಚಾರಗಳು ಇಂದಿನ ದಿನಮಾನಗಳಿಗೂ ಅತ್ಯಂತ ಪ್ರಸ್ತುತ. ಮಾನವತಾವಾದದ ಪ್ರತಿಪಾದನೆ ಅಂತಹ “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಬಸವಣ್ಣನವರ ನುಡಿಯಂತೆ, ಜಗತ್ತಿನಲ್ಲಿ ಎಲ್ಲರೂ ಸಮಾನರು. ಭಗವಂತನ ದೃಷ್ಟಿಯಲ್ಲಿ ಯಾರೂ ಮೇಲಲ್ಲ, ಕೀಳಲ್ಲ ಎಂಬ ಸಮಾನತೆಯ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ತನ್ವೀರ್‌ಸೇಠ್,ವಿಜಯಾನಂದ ಕಾಶ್ಯಪ್ ನವರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಯತೀಂದ್ರ ಸಿದ್ದರಾಮಯ್ಯ, ಶಿವಕುಮಾರ್, ಸಂಸದರಾದ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕರ್ನಾಟಕ ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಂಜುನಾಥ್ ಸ್ವಾಮಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳು ಸಮಾಜಿಕ ನ್ಯಾಯದ ಕನಸಿನ ಕೂಸು
ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ತಾರತಮ್ಯವಿಲ್ಲದೇ, ಬಡವರು ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ಗ್ಯಾರಂಟಿ ಯೋಜನೆಗಳು ವಿಶ್ವ ಗುರು ಬಸವಣ್ಣ ನವರು ನೀಡಿದ ಸಮಾಜಿಕ ನ್ಯಾಯದ ಕನಸಿನ ಕೂಸು ಎಂದು 2025-26 ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ ಪುರಸ್ಕೃತರಾದ ಸಿದ್ದರಾಮ ಶರಣರು ಬೆಲ್ದಾಳ ತಿಳಿಸಿದರು.ಇದನ್ನು ಓದಿ –ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ, ಬಸವಣ್ಣ ನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅನಾವಣಗೊಳಿಸಬೇಕು ಹಾಗೂ ಅನುಭವ ಮಂಟಪದ ಪುನಶ್ಚೇತನಕ್ಕೆ ಯೋಜನೆ ರೂಪಿಸಿ ಅನೇಕ ಅನುದಾನ ಬಿಡುಗಡೆ ಮಾಡಿದರು ಎಂದರು.








