ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ರಾಜಕೀಯ ಹಿನ್ನಡೆ ಎದುರಾಗಿದ್ದು, ರಾಘವ್ ಚಡ್ಡಾ ಸೇರಿದಂತೆ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ಘೋಷಿಸಿರುವುದಾಗಿ ತಿಳಿದುಬಂದಿದೆ.
ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ 7 ಮಂದಿ ರಾಜ್ಯಸಭಾ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದು, ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ಸದಸ್ಯರು ಬೆಂಬಲ ನೀಡಿರುವುದಾಗಿ ರಾಘವ್ ಚಡ್ಡಾ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿರುವ ನಾವು ಸಂವಿಧಾನದ ನಿಯಮಾವಳಿಗಳ ಪ್ರಕಾರ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ. ನಾನು ನನ್ನ ಯೌವನದ 15 ವರ್ಷಗಳನ್ನು ಎಎಪಿಗಾಗಿ ಸಮರ್ಪಿಸಿದ್ದರೂ, ಈಗ ಪಕ್ಷವು ತನ್ನ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ದೂರವಾಗಿದೆ ಎಂದು ರಾಘವ್ ಚಡ್ಡಾ ಆರೋಪಿಸಿದರು.
ರಾಷ್ಟ್ರ ಹಿತಾಸಕ್ತಿಗಾಗಿ ಕೆಲಸ ಮಾಡುವ ಬದಲು ವೈಯಕ್ತಿಕ ಲಾಭಕ್ಕಾಗಿ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಾನು ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಭಾವನೆ ಇತ್ತು. ಆದ್ದರಿಂದ ಇಂದು ಎಎಪಿಯಿಂದ ದೂರ ಸರಿದು ಸಾರ್ವಜನಿಕರ ಹತ್ತಿರ ಬರುತ್ತಿದ್ದೇನೆ ಎಂದು ಅವರು ಹೇಳಿದರು.
ರಾಜ್ಯಸಭಾ ಸದಸ್ಯರಾದ ಸ್ವಾತಿ ಮಲಿವಾಲ್ ಮತ್ತು ಹರ್ಭಜನ್ ಸಿಂಗ್ ಕೂಡ ನಮ್ಮೊಂದಿಗಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನು ಓದಿ –ಮೆಟ್ರೋ ಬಳಸುವ ಉದ್ಯೋಗಿಗಳಿಗೆ ತಿಂಗಳಿಗೆ ಪ್ರೋತ್ಸಾಹಧನ
ರಾಜ್ಯಸಭೆಯಲ್ಲಿ ಎಎಪಿಗೆ ಒಟ್ಟು 10 ಸದಸ್ಯರಿದ್ದು, ಅವರಲ್ಲಿ 2/3 ಸದಸ್ಯರು ನಮ್ಮ ಬೆಂಬಲದಲ್ಲಿದ್ದಾರೆ. ಈ ಬಗ್ಗೆ ಸಭಾಪತಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.








