ಕಿಸಾ ಗೌತಮಿ.
ಇದೊಂದು ಗೌತಮ ಬುದ್ಧರ ಜೀವನದಲ್ಲಿ ಸಂಭವಿಸಿದ ಚಮತ್ಕಾರಿ ಘಟನೆ. ಈ ಕಥೆ ಸುಮಾರಾಗಿ ಎಲ್ಲರಿಗೂ ಗೊತ್ತಿರುವಂತದ್ದೇ.
ತಾಯಿಯೊಬ್ಬಳಿಗೆ , ತನ್ನ ಸರ್ವಸ್ವ ಎಂಬಂತಿದ್ದ , ತನ್ನ ಒಬ್ಬನೇ ಮಗ ತೀರಿಕೊಂಡಾಗ, ಆಕೆಗೆ ದಿಕ್ಕೇ ತೋಚದಂತಾಯಿತು. ಇದಕ್ಕೆ ಮೊದಲೇ ಆಕೆಯ ಪತಿ , ಇನ್ನೆರಡು ಮಕ್ಕಳು ತೀರಿಹೋಗಿದ್ದರು. ಆಕೆ ದುಃಖ ತಡೆಯಲಾರದೇ, ಸಿಕ್ಕ ಸಿಕ್ಕವರೊಂದಿಗೆ, ಯಾರಾದರೂ ನನ್ನ ಮಗನನ್ನು ಹೇಗಾದರೂ ಬದುಕಿಸಿಕೊಡಿ, ಇವನನ್ನು ಬದುಕಿಸಿ ಕೊಡುವಂತವರು ಯಾರಾದರೂ ಇದ್ದರೆ ದಯವಿಟ್ಟು ನನಗೆ ತಿಳಿಸಿ, ನನಗೀಗ ಇವನಲ್ಲದೇ , ಇನ್ಯಾರೂ ದಿಕ್ಕಿಲ್ಲ. ನನಗೆ ಇವನಿಲ್ಲದೇ , ಬದುಕುವ ಆಸೆ ಇಲ್ಲವಾಗಿದೆ. ಯಾರಾದರೂ ನನ್ನ ಈ ಒಂದು ಕುಡಿಯನ್ನು ಬದುಕಿಸುವಂಥ ಮಹಾತ್ಮರು ಎಲ್ಲಿದ್ದಾರೆ ಎಂಬುದನ್ನು ತಿಳಿಸಿ, ಎಂದು ದುಃಖದಿಂದ ಯಾಚಿಸುತ್ತಾ, ಅಲೆದಾಡುತ್ತಿದ್ದಳು.
ಆಗ ಅವಳಿಗೆ ಯಾರೋ ಒಬ್ಬರು, ಗೌತಮ ಬುದ್ಧರು, ತಮ್ಮ ಹಳ್ಳಿಗೆ ಆಗಮಿಸಿ ಒಂದು ಮಾವಿನ ತೋಪಿನಲ್ಲಿ ತಮ್ಮ ಶಿಷ್ಯರೊಂದಿಗೆ ತಂಗಿದ್ದಾರೆ, ನೀನು ಅವರ ಬಳಿಗೆ ಹೋಗಿ, ನಿನ್ನ ಸತ್ತ ಮಗನನ್ನು ಅವರ ಪಾದದ ಬಳಿಗೆ ಇಡು, ಅವರಿಂದ ಇವನನ್ನು ಬದುಕಿಸಲು ಸಾಧ್ಯವಾಗಬಹುದು,ಎಂದು ಹೇಳಿದರು.
ಈ ಮಾತನ್ನು ಕೇಳಿದ ಅವಳು ಬಹಳ ಹಂಬಲದಿಂದ, ತಕ್ಷಣ ತನ್ನ ಮಗನ ಶವವನ್ನು ಹೊತ್ತುಕೊಂಡು ಬುದ್ಧರ ಬಳಿಗೆ ಓಡಿ ಹೋಗಿ,ಅವರ ಪಾದದ ಬಳಿಗೆ ಇಡುತ್ತಾ, ಹೇ ಪ್ರಭುವೇ, ಹೇಗಾದರೂ ಮಾಡಿ ನನ್ನ ಮಗನನ್ನು ಜೀವಂತವಾಗಿ ಉಳಿಸಿ ಎಂದು ಬೇಡಿಕೊಂಡಳು.
ಆಗ ಬುದ್ಧರು, ತಾಯಿ, ಇದೇನು ಅಷ್ಟು ಕಷ್ಟದ ವಿಷಯವಲ್ಲ, ಆದರೆ ನೀನೊಂದು ಚಿಕ್ಕ ನಿಯಮವನ್ನು ಪಾಲಿಸಬೇಕಾಗುತ್ತದೆ ಅಷ್ಟೇ, ಎಂದರು.
ನಿಮ್ಮ ನಿಯಮ ಏನೇ ಇದ್ದರೂ, ನನ್ನ ಮಗನಿಗಾಗಿ ಅದನ್ನು ನಾನು ಪಾಲಿಸುತ್ತೇನೆ, ದಯವಿಟ್ಟು ತಿಳಿಸಿ ಎಂದಳು ತಾಯಿ. ಅದೇನು ಅಷ್ಟು ದೊಡ್ಡ ನಿಯಮವಲ್ಲಾ, ಈ ಹಳ್ಳಿಯಲ್ಲಿ ಹೇರಳವಾಗಿ ಸಾಸಿವೆಯನ್ನು ಬೆಳೆಯುತ್ತಾರೆಂದು ಕೇಳಿದ್ದೇನೆ, ನೀನು ಹೋಗಿ ,ಯಾರ ಮನೆಯಲ್ಲಿ ಅವರ ಕುಟುಂಬದ ಯಾರೊಬ್ಬರೂ ಕೂಡ ಸತ್ತಿಲ್ಲವೋ ಅಂಥವರ ಮನೆಯಲ್ಲಿ ಒಂದು ಮುಷ್ಟಿ ಸಾಸವೆ ಕಾಳುಗಳನ್ನು ತೆಗೆದುಕೊಂಡು ಬಾ, ಆಗ ನಿನ್ನ ಮಗ ಬದುಕುತ್ತಾನೆ ಎಂದು ಹೇಳಿದರು ಬುದ್ಧ.
ಆಕೆ ಮಗನ ಅಗಲುವಿಕೆಯಿಂದ ಬಹಳ ದುಃಖಿತಳಾಗಿ, ಹುಚ್ಚಿಯಂತಾಗಿದ್ದಳು.ಮಗ ಹೇಗಾದರೂ ಬದುಕಿದರೆ ಸಾಕೆಂದು ಯಾರು ಏನು ಹೇಳಿದರೂ ಅದನ್ನು ಕೇಳುತ್ತಿದ್ದಳು.ಆಕೆಗೆ ಬುದ್ಧರ ಮಾತಿನ ಗುಟ್ಟು ಅವಳ ಅರಿವಿಗೆ ಬರಲೇ ಇಲ್ಲ. ತಕ್ಷಣ ಅಲ್ಲಿಂದ ಓಡುತ್ತಾ , ಪ್ರತಿಯೊಂದು ಮನೆ ಮನೆಗೂ ಹೋಗಿ ಸಾಸಿವೆ ಬೇಡಲಾರಂಭಿಸಿದಳು. ಆಗ ಅವಳಿಗೆ , ಜನರು, ನಾವು ನಿನಗೆ ಸಾಸಿವೆಕಾಳನ್ನು ಎಷ್ಟು ಬೇಕಾದರೂ ಕೊಡಬಹುದು, ಆದರೆ ಅದು ನಿನಗೆ ಉಪಯೋಗಕ್ಕೆ ಬರುವುದಿಲ್ಲ, ಏಕೆಂದರೆ ನಮ್ಮ ಮನೆಗಳಲ್ಲಿ ಅನೇಕರು ಸಾವನ್ನಪ್ಪಿದ್ದಾರೆ, ಸಾವಿಲ್ಲದ ಯಾವ ಕುಟುಂಬವೂ ಇಲ್ಲ ತಾಯಿ, ಎಂದು ಹೇಳಿದರು.
ಪ್ರತಿಯೊಂದು ಕುಟುಂಬದಲ್ಲೂ ಬದುಕಿರುವವರಿಗಿಂತ ಸತ್ತಿರುವವರೇ ಜಾಸ್ತಿ. ತಂದೆ ತಾಯಿ, ಅಜ್ಜಿ ,ತಾತಂದಿರು ಲೆಕ್ಕವಿಲ್ಲದಷ್ಟು ಮಂದಿ ಸತ್ತಿರುವರು. ಪ್ರತಿಯೊಬ್ಬ ಮನುಷ್ಯನ ಮನೆಯಲ್ಲೂ ಬದುಕಿರುವವರಿಗಿಂತ ಅಳಿದು ಹೋದವರೇ ಜಾಸ್ತಿ ಇದ್ದರು.ಈಕೆ ಸಂಜೆಯ ತನಕ ಮನೆ ಮನೆಗೆ ಹೋಗಿ ಸಾಸಿವೆ ಬೇಡಿದಳು. ಬಹಳ ದಣಿದಳು.ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲೂ ಅವಳಿಗೆ ಸಿಗಲೇ ಇಲ್ಲ .
ಆಗ ಆಕೆಗೆ ಬುದ್ಧರ ಮಾತಿನ ಅರ್ಥವಾಯಿತು, ಆಕೆಯ ಕಣ್ಣೀರೆಲ್ಲಾ ಬತ್ತಿ ಹೋಗಿದ್ದವು. ಆಕೆ ಬುದ್ಧರ ಬಳಿಗೆ ಹಿಂತಿರುಗಿ ಬಂದು ಅವರ ಪಾದಕ್ಕೆರಗಿದಳು. ನಂತರ ಹೇಳಿದಳು, ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ, ಒಂದಲ್ಲ ಒಂದು ದಿನ ಸಾಯಲೇಬೇಕು, ನನ್ನ ಮಗನೂ ಅಷ್ಟೇ, ನಾಳೆ ನಾನೂ ಅಷ್ಟೇ, ಅದರ ಬಗ್ಗೆ ಚಿಂತಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಇದನ್ನು ನೀವು ನನಗೆ ಅರ್ಥ ಮಾಡಿಸಿದ್ದೀರಿ.ನೀವೀಗ ನನಗೆ ದಯವಿಟ್ಟು ಸನ್ಯಾಸ ದೀಕ್ಷೆಯನ್ನು ನೀಡಿ, ಯಾವುದು ಶಾಶ್ವತವೂ, ಅಮರವೊ, ಆದಿ ಅಂತ್ಯ ರಹಿತವಾಗಿ ಇರುವಂತದ್ದೊ, ಅದರ ಅನುಭವವನ್ನು ಹೊಂದುವ ಪಥದಲ್ಲಿ ನಾನೀಗ ಸಾಗುವೆ ,ಎಂದು ಹೇಳಿದಳು.
ಬುದ್ಧರು, ಆಕೆಗೆ, ತಾಯೇ, ನೀನೊಬ್ಬ , ಪ್ರತಿಭಾವಂತೆ, ನಿನಗೆ ಬಲು ಬೇಗನೆ ನನ್ನ ಮಾತಿನ ಇಂಗಿತ ಅರ್ಥವಾಗಿರುವುದು, ಎಂದು ಹೇಳಿ ಅವಳನ್ನು ಹರಸಿದರು. ಮುಂದೆ ಆಕೆ ಸನ್ಯಾಸಿನಿಯಾದಳು, ಆಕೆ ಏನು ಸಾಮಾನ್ಯ ಸನ್ಯಾಸಿನಿ ಅಲ್ಲ! ಬುದ್ಧರು ಜೀವಂತವಾಗಿದ್ದಾಗಲೇ ಸಂಬುದ್ಧತ್ವವನ್ನು ಹೊಂದಿದಂತ ಮಹಿಳೆ . ಬುದ್ಧರ ಮಹಿಳಾ ಸನ್ಯಾಸಿನಿಯರಲ್ಲಿ ಸಂಬುದ್ಧತ್ವವನ್ನು ಹೊಂದಿದ ಮೊದಲ ಮಹಿಳೆ ಈಕೆ. ಈಕೆಯ ಹೆಸರು, “ಕಿಸಾ ಗೌತಮಿ” ಎಂದು.
ಹೀಗೆ ಜನರು ತಮ್ಮ ತಮ್ಮ ಅಂತರಾಳಕ್ಕೆ ಯಾತ್ರಿಸಿದಾಗ ತಮ್ಮ ಮೂಲಕ್ಕೆ ತಲುಪುವರು. ತಮ್ಮ ತಮ್ಮ ಸ್ವಯಂ ಅನ್ನು ಕಂಡುಕೊಳ್ಳುವುದೇ ಒಂದು ಉತ್ಕೃಷ್ಟವಾದ ಚಮತ್ಕಾರ. ಇಂಥಹ ಕ್ಷಣದಲ್ಲಿ ದೈವತ್ವದ, ಭಗವತ್ತತೆಯ ಬಾಗಿಲುಗಳು ತೆರೆಯುತ್ತವೆ. ಈ ಸಮಯದಲ್ಲಿ ನಾನು ಎಂಬುದು ಅಳಿದು, ಅಸ್ತಿತ್ವದ ಇರುವಿಕೆಯ ಒಂದು ಭಾಗವೇ ನಾವಾಗಿ ಬಿಡುತ್ತೇವೆ.
ವಂದನೆಗಳು,

ಸುವರ್ಣಾ ಮೂರ್ತಿ.