By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ನಮ್ಮ ಮಕ್ಕಳ ಶಿಕ್ಷಣ
    April 20, 2026
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
    ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    April 18, 2026
    ಅಪ್ರತಿಮ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
    April 14, 2026
  • Sports
  • National
  • International
  • Crime
Reading: ನಮ್ಮ ಮಕ್ಕಳ ಶಿಕ್ಷಣ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ನಮ್ಮ ಮಕ್ಕಳ ಶಿಕ್ಷಣ
Articles

ನಮ್ಮ ಮಕ್ಕಳ ಶಿಕ್ಷಣ

Team Varthaman
Last updated: April 20, 2026 5:47 PM
Team Varthaman
Published: April 20, 2026
Share
SHARE
  • (ಬ್ಯಾಂಕರ್ಸ್ ಡೈರಿ)

ಎಂದಿನAತೆಯೇ ಬ್ಯಾಂಕಿನಲ್ಲಿ ಭಾರೀ ರಶ್ಶು. ಆ ಉಪನ್ಯಾಸಕಿ ಸ್ಟೇಟ್ಮೆಂಟ್ ಬೇಕು ಎಂದು ನನ್ನ ಬಳಿಗೆ ಬಂದಿದ್ದರು. ಆಕೆ ಬಹಳ ವರ್ಷಗಳಿಂದ ನನಗೆ ಪರಿಚಿತರಾದ್ದರಿಂದ ನಗದು ಹೊರತಾಗಿ ಬಹುತೇಕ ಕೆಲಸಗಳಿಗೆ ನನ್ನ ಬಳಿಗೆ ಬರುತ್ತಿದ್ದರು.  ಇವರೊಬ್ಬರು ಎಂತಲ್ಲ; ಬಹುತೇಕ ಪರಿಚಿತರು ಒಂದಲ್ಲಾ ಒಂದು ಕೆಲಸ ಎಂದು ನನ್ನ ಬಳಿ ಬರುವುದು ವಾಡಿಕೆ. ಅದು ಅವರ ಪ್ರೀತಿ ವಿಶ್ವಾಸ ಮತ್ತು ಅಭಿಮಾನ.  ಈ ಪ್ರೀತಿ ವಿಶ್ವಾಸ ಅಭಿಮಾನಗಳೇ ನಾ ನನ್ನ ಸೇವಾವಧಿಯಲ್ಲಿ ಸಂಪಾದಿಸಿರುವ ಬಹುದೊಡ್ಡ ಆಸ್ತಿ.
ಸರಿ ವಿಷಯಕ್ಕೆ ಬರುತ್ತೇನೆ. ಆಕೆಯ ಸ್ಟೇಟ್ಮೆಂಟ್ ಪ್ರಿಂಟ್ ಆಗುವಷ್ಟರಲ್ಲಿ ‘ಏನು ಬೇಸಿಗೆ ರಜವಾ? ನಿಮಗೇನು ಬಿಡಿ ಎರಡು ತಿಂಗಳು ಆರಾಮಾಗಿ ಇರುತ್ತೀರಾ’ ಎಂದೆ.  

ಆಕೆ ‘ಅದೇನು ಆರಾಮವೋ ಕಾಣೆ’ ಎಂದರು. ಶಿಕ್ಷಕ ವೃತ್ತಿ ಎಂದರೆ ನಮ್ಮಷ್ಟು ಕಷ್ಟದ್ದೇನಲ್ಲ ಎಂದು ಭಾವಿಸಿಯೇ ಇದ್ದೆ.  ಅಲ್ಪಸ್ವಲ್ಪ ಲೆಕ್ಕಾಚಾರ ವ್ಯತ್ಯಾಸವಾದರೂ ಅಥವಾ ಹಣ ಎಣಿಸುವುದರಲ್ಲಿ ವ್ಯತ್ಯಾಸವಾದರೂ ಅಥವಾ ಒಂದು ಅಂಕಿ ವ್ಯತ್ಯಾಸವಾಗಿ ಯಾರಿಗೋ ಹೋಗುವುದು ಮತ್ತಾರಿಗೋ ಹೋಗಿ  ಕೈಯಿಂದ ಹಣ ಕಳೆದುಕೊಂಡ ಬಹಳಷ್ಟು ಜನರನ್ನು ಕಂಡಿದ್ದೇನೆ.

Join WhatsApp Group


ಬಹುತೇಕ ಎಲ್ಲರಿಗೂ ಶಿಕ್ಷಕರ ರಜೆಯ ಮೇಲೆಯೇ ಕಣ್ಣು. ಕ್ರಿಸ್ಮಸ್ ರಜೆ, ನವರಾತ್ರಿ ರಜೆ, ಬೇಸಿಗೆ ರಜೆ ಎಂದು ಬೇಕಾದಷ್ಟು ರಜೆ ಇರುತ್ತದೆ ಅವರಿಗೆ. ರಜಾ ಕಾಲದ ಮಜವೋ ಮಜ ಎಂಬ ಅನಿಸಿಕೆ. ಆ ಭಾಗ್ಯ ನಮಗಿಲ್ಲವಲ್ಲಾ ಎಂದು ಬ್ಯಾಂಕರ್ ಗಳು ಹೊಟ್ಟೆ ಉರಿದುಕೊಂಡಿದ್ದೂ ಇದೆ ಅನ್ನಿ.

ಕಾಲಕ್ರಮೇಣ ಸೆನ್ಸೆಸ್ ಡ್ಯೂಟಿಗೆ, ಎಲೆಕ್ಷನ್ ಡ್ಯೂಟಿಗೆ ಶಿಕ್ಷಣ ಇಲಾಖೆಯ ಎಲ್ಲರನ್ನೂ ಕರೆಯುತ್ತಾರೆ ಹಾಗೂ ಪ್ರೌಢಶಾಲಾ ವಿಭಾಗ ಮತ್ತು ಕಾಲೇಜಿನ ವಿಭಾಗದಲ್ಲಿ ವ್ಯಾಲ್ಯೂಯೇಷನ್ ಗೆ ಕರೆಯುತ್ತಾ ಇರುತ್ತಾರೆ ಎಂದು ತಿಳಿದ ಮೇಲೆ ಸ್ವಲ್ಪವಾದರೂ ಪಾಪ ಎನಿಸಿತ್ತು.  ಪಾಪ ಏಕೆ ಎಂದರೆ ನಮಗೆ ನಾವು ಹಾಕಿಕೊಳ್ಳಬಹುದಾದ ರಜೆಯ ಸಂಖ್ಯೆ ಜಾಸ್ತಿ ಅವರಿಗಿಂತ (ಹಾಕಿಕೊಳ್ಳಲು ಆಗುತ್ತದೆ ಇಲ್ಲವೋ ಅದು ಬೇರೆ ವಿಷಯ).  ಅವರಿಗಾದರೆ ಹೇಗೂ ಕ್ರಿಸ್ಮಸ್ ರಜೆ, ನವರಾತ್ರಿ ರಜೆ, ಬೇಸಿಗೆ ರಜೆ ಎಂದು ಕೊಡುತ್ತಾರಲ್ಲ ಎಂದು ಅವರು ಹಾಕಿಕೊಳ್ಳುವ ರಜೆಯನ್ನು ಕಡಿತ ಮಾಡಿರುತ್ತಾರೆ.  ಆ ರಜೆಯಲ್ಲೂ ಒಂದು ೧೫ ದಿನವೂ ಕೂಡ ಅವರಿಗೆ ಪುರುಸೊತ್ತು ಎಂಬುದು ಸಿಗುವುದಿಲ್ಲ ಎಂಬುದು ನನಗೆ ತಿಳಿದಿದ್ದು ಇತ್ತೀಚಿಗೆ.


‘ಮೇಡಂ ರಜೆ ವಿಷಯ ಹಾಗಿರಲಿ; ಆ ಮಕ್ಕಳು ಕಲಿಯುವ ರೀತಿ ನೋಡಿದರೆ ನಮ್ಮ ಮುಂದಿನ ಭವಿಷ್ಯ ಹೇಗೋ ಎಂದು ಭಯವಾಗುತ್ತದೆ.  ಸಿರಿವಂತರ ಮಕ್ಕಳು ಮತ್ತು ಅತಿ ಹೆಚ್ಚು ನಂಬರ್ ತೆಗೆದುಕೊಂಡ ಮಕ್ಕಳು ಸರ್ಕಾರಿ ಕಾಲೇಜಿಗೆ ಬರುವುದಿಲ್ಲ, ಅವರೆಲ್ಲ ಪ್ರೈವೇಟ್ ಕಾಲೇಜಿಗೆ ಹೋಗುತ್ತಾರೆ. ಸರಕಾರಿ ಶಾಲೆಗೆ ಬರುವ ಮಕ್ಕಳು ಸಾಮಾನ್ಯ ಮನೆತನದಿಂದ ಬಂದವರು ಅಥವಾ ೧೦ನೇ ತರಗತಿಯಲ್ಲಿ ಕಡಿಮೆ ಅಂಕಿ ತೆಗೆದುಕೊಂಡವರು. ಕನ್ನಡವನ್ನು ಹೇಗಾದರೂ ಪಾಸ್ ಮಾಡುತ್ತಾರೆ.

ದೊಡ್ಡ ಕಷ್ಟ ಎಂದರೆ ಇಂಗ್ಲಿಷ್ ಪಾಸ್ ಮಾಡುವುದು. ಬೆಂಗಳೂರಿನಲ್ಲಿ ಓದಿದಂತಹ ಮಕ್ಕಳಿಗೆ ಇಂಗ್ಲಿಷ್ ಸಾಮಾನ್ಯವಾಗಿ ಬೇಗ ಬಂದು ಬಿಟ್ಟಿರುತ್ತದೆ, ಆದರೆ ನಮ್ಮ ಮಂಡ್ಯದಲ್ಲಿ – ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಎನ್ನುವುದು ಕಬ್ಬಿಣದ ಕಡಲೆ. ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ತೆಗೆದುಕೊಂಡ ಮಕ್ಕಳು ಅಲ್ಪಸ್ವಲ್ಪವಾದರೂ ಮುಂದಕ್ಕೆ ಹೆಜ್ಜೆ ಇಡುತ್ತಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ವಿಜ್ಞಾನವನ್ನು ತೆಗೆದುಕೊಂಡವರ ಪಾಡು ಹೇಳತೀರದು. ತಂದೆ ತಾಯಿಯರಿಗೆ ತಮ್ಮ ಮಕ್ಕಳು ವಿಜ್ಞಾನ ವಿಷಯವನ್ನು ಓದಿ ಇಂಜಿನಿಯರಿAಗ್ ಅಥವಾ ಮೆಡಿಕಲ್ ಮಾಡಲಿ ಎಂಬ ದೊಡ್ಡ ಕನಸು ಇರುತ್ತದೆ, ಅದಕ್ಕಾಗಿ ಸೇರಿಸಿ ಬಿಟ್ಟಿರುತ್ತಾರೆ. ಆದರೆ ಎಲ್ಲ ಮಕ್ಕಳಿಗೂ ಆ ಹಂತ ತಲುಪುವುದು ಕಷ್ಟ. ಭೌತಶಾಸ್ತ್ರ ರಸಾಯನಶಾಸ್ತ್ರ ಮತ್ತು ಗಣಿತ ಈ ಮೂರು ವಿಷಯಗಳನ್ನು ಪಾಠ ಮಾಡುವ ಮೇಷ್ಟುçಗಳ ತಲೆ ಎಷ್ಟು ಕೆಟ್ಟಿರುತ್ತದೆ ಎಂದರೆ ಯಾವಾಗ ನಿವೃತ್ತಿಯಾಗಿ ಮನೆಗೆ ಬರುತ್ತೇವೋ ಎನ್ನುವಷ್ಟು ಅಥವಾ ಯಾಕಾದರೂ ಈ ವಿಷಯವನ್ನು ಕಲಿತೆವೋ ಎನುವಷ್ಟು’ ಎಂದು ನಿಟ್ಟುಸಿರು ಬಿಟ್ಟರು. ನನಗೆ ನಿಜಕ್ಕೂ ಆಶ್ಚರ್ಯ.

Join WhatsApp Group


ನಿಜಾ ಯಾವುದೇ ವಿಷಯವನ್ನು ತಿಳಿದುಕೊಳ್ಳಲು ಅವರವರ ಕ್ಷೇತ್ರದಲ್ಲೇ ಪಳಗಿರುವವರ ಅನುಭವವನ್ನು ಕೇಳಿ ತಿಳಿದುಕೊಳ್ಳಬೇಕು.

ಆ ಉಪನ್ಯಾಸಕಿ ಮುಂದುವರೆಸುತ್ತಾ ‘ನಾವೆಲ್ಲ ರೇಗಿಸುತ್ತಾ ಇರುತ್ತೇವೆ ಮಕ್ಕಳಿಗೆ. ಈ ಮೂರು ಸಬ್ಜೆಕ್ಟ್ಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಯಾರ್ಯಾರು ಎಷ್ಟೆಷ್ಟು ಮಾರ್ಕ್ಸ್ ತೆಗೆದುಕೊಳ್ಳುತ್ತೀರಾ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ.  ಯಾವ ಸಬ್ಜೆಕ್ಟ್ ನಲ್ಲಿ ನೀವುಗಳು ಕಡಿಮೆ ನಂಬರ್ ತೆಗೆದುಕೊಳ್ಳುತ್ತಿರೋ ಆ ಮಾಸ್ಟ್ರು ನಮ್ಮ ಕಾಲೇಜಿನ ಮರದ ಮೇಲೆ ಇರುವ ದೊಡ್ಡ ಕೊಂಬೆಯಲ್ಲಿ  ಮೊದಲ ಹಗ್ಗದಲ್ಲಿ ಕೆಳಗೆ ನಿಂತಿರುತ್ತಾರೆ, ಅದಕ್ಕಿಂತ ಸ್ವಲ್ಪ ಜಾಸ್ತಿ ನಂಬರ್ ತೆಗೆದುಕೊಂಡ ವಿಷಯದ ಮೇಷ್ಟುç ಅದಕ್ಕಿಂತ ಸ್ವಲ್ಪ ಕೆಳಗಿನ ಹಗ್ಗದ ಕೆಳಗೆ ನಿಂತಿರುತ್ತಾರೆ.

ಹಾಗೆ ನಾವು ನಾಲ್ವರೂ ರಿಸಲ್ಟ್ ಬರುವ ದಿನ ಮರದ ರೆಂಬೆಗೆ ಕಟ್ಟಿರುವ  ಇರುವ ಹಗ್ಗದ ಕೆಳಗೆ ನಿಂತಿರುತ್ತೇವೆ. ನಿಮ್ಮ ರಿಸಲ್ಟ್ ಬಂದ ತಕ್ಷಣ ನಾವು ಯಾವ ಯಾವ ಹಗ್ಗಕ್ಕೆ ನೇತು ಹಾಕಿಕೊಳ್ಳಬೇಕು ಎಂಬುದು ನಿಮ್ಮ ಮೇಲೆ ನಿರ್ಧಾರವಾಗಿದೆ. ನಮ್ಮ ಸಾವು ಬದುಕು ನಿಮ್ಮ ಕೈಲಿ ಇದೆ ಕಣ್ರೋ ಎಂದು ತಮಾಷೆ ಮಾಡುತ್ತಾ ಇರುತ್ತೇವೆ’ ಎಂದರು. ನನ್ನ ಮುಖದ ಮೇಲಿನ ಪ್ರಶ್ನೆಯನ್ನು ಕಂಡು ‘ಮೇಡಂ ಅದು ತಮಾಷೆಗೆ ಮಾತ್ರ ಹೇಳೋದು. ಆದ್ರೆ ನಾವು ಮಕ್ಕಳಿಗೆ ಸದಾ ಹೇಳುತ್ತಾ ಇರುತ್ತೇವೆ  ಆತ್ಮಹತ್ಯೆ ಮಾಡಿಕೊಳ್ಳುವುದು ಯಾವುದಕ್ಕೂ ಪರಿಹಾರವಲ್ಲ.

ನೀವು ಫೇಲಾದರೆ ನಾವು ಫೇಲಾದಂತೆ ಎನ್ನುವುದಕ್ಕಾಗಿ ಹೇಳುತ್ತೇವೆ. ನಾವು ಹೀಗೆ ಹೇಳಿದ್ವಿ ಅಂತ ನೀÃವೆಲ್ಲಾದರೂ ನೇಣುÀÄ ಹಾಕಿಕೊಂಡು ನಮ್ಮ ಕುತ್ತಿಗೆಗೆ ತರಬೇಡ್ರೋ. ನೀವು ಚೆನ್ನಾಗಿ ಬದುಕಬೇಕು ಕಣ್ರಪ್ಪಾ.  ಬದುಕು ದೊಡ್ಡದು ಎಂದು ಕೂಡ ಹೇಳುತ್ತೇವೆ. ನಾ ಹಾಗಂದೆ ಅಂತ ನೀವು ತಪ್ಪಾಗಿ ತಿಳ್ಕೋಬೇಡಿ’ ಎಂದರು.

‘ನನ್ನದು ಭೌತಶಾಸ್ತ್ರ ಮೇಡಂ. ನಾನು ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಹೋದಾಗ ಅಚ್ಚುಕಟ್ಟಾಗಿ ತಲೆ ಬಾಚಿಕೊಂಡು ಹೂ ಮುಡಿದುಕೊಂಡು ಹೋಗಿರುತ್ತೇನೆ. ಮಕ್ಕಳಿಗೆ ಪಾಠ ಮಾಡಿ ಅವರಿಗೆ ಅರ್ಥ ಮಾಡಿಸುವಷ್ಟರಲ್ಲಿ ಮಕ್ಕಳೇ ತಮಾಷೆ ಮಾಡ್ತಾ ಇರ್ತಾರೆ “ಬೆಳಗ್ಗೆ ಬರುವಾಗ ಮೇಡಂ ಎಷ್ಟು ಚೆನ್ನಾಗಿರುತ್ತಾರೆ, ವಾಪಸ್ ಹೋಗುವಾಗ  ತಲೆ ಕೆದರಿಕೊಂಡು ನಾಗವಲ್ಲಿ ತರಹ ಆಗಿರುತ್ತಾರೆ”. ಇಂಥ ಪರಿಸ್ಥಿತಿ ಮೇಡಂ, ನಿಜಕ್ಕೂ ಈಗಿನ ಕಾಲದಲ್ಲಿ ಉಪನ್ಯಾಸಕರಾಗುವುದು ಸುಲಭವಲ್ಲ. ನಾವು ಕಲಿಯುವುದು ಸುಲಭ, ಪಾಠ ಮಾಡುವುದು ಸುಲಭ, ಆದರೆ ಮಕ್ಕಳ ತಲೆಯೊಳಗೆ ಅದನ್ನು ತುಂಬುವುದು ಬಲು ಕಷ್ಟ. ಅದಕ್ಕಾಗಿ ಸರದಿ ಪಾಳಿಯಲ್ಲಿ ರಾತ್ರಿ ತರಗತಿಗಳನ್ನೂ ಮಾಡುತ್ತೇವೆ’ ಎಂದರು. ಹಳ್ಳಿಯಿಂದ ರಾತ್ರಿ ವೇಳೆ ಹೆಣ್ಣುಮಕ್ಕಳು ಗಾಡಿಯಲ್ಲಿ ಒಬ್ಬರೇ ಬರುವುದು ಎಷ್ಟು ಸುರಕ್ಷಿತ ಮೇಡಂ? ಏನಾದರೂ ವ್ಯವಸ್ಥೆ ಮಾಡಿದ್ದಾರಾ?’ ಎಂದು ಕೇಳಿದೆ. ‘ಏನೂ ಇಲ್ಲ ಮೇಡಂ. ಸಂಜೆ ಏಳರ ಮೇಲೆ ಹೆಣ್ಣುಮಕ್ಕಳು ಕಛೇರಿಯಿಂದ ಹೊರಟರೆ ಯಾರೇ ಆಗಿದ್ದರೂ ಆ ಉದ್ಯೋಗದಾತರು ಸುರಕ್ಷತೆಯ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಹೇಳಿದೆ.

ಆದರೆ ಸರ್ಕಾರೀ ನೌಕರರಾದ ನಮಗೇ ಯಾರ ಸುರಕ್ಷತೆಯೂ ಇಲ್ಲ. ನಮಗೆ ಅಷ್ಟು ಭಯ ಆದರೆ ನಮ್ಮ ಗಂಡನನ್ನೋ, ಮಗನನ್ನೋ, ಅಣ್ಣ ತಮ್ಮಂದಿರನ್ನೋ ಜೊತೆಗೆ ಬನ್ನಿ ಎಂದು ಕೇಳಿಕೊಳ್ಳಬೇಕು. ಕೆಲಸ ಮಾಡುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ. ಇದರ ಜೊತೆ ಹೆಣ್ಣುಮಕ್ಕಳಿಗೆ ಅಡುಗೆಮನೆಯ ಕೆಲಸ ಬೇರೆ’  ಎಂದು ಹೇಳುತ್ತಾ ಹಣೆಯ ಮೇಲೆ ಕೈ ಹೊತ್ತು ಕುಳಿತರು.

ಆಗ ನನಗೆ ನನ್ನ ಕಾಲೇಜಿನ ಗೆಳತಿ ಆಗಾಗ ನಮ್ಮ ಬ್ಯಾಂಕಿನ ಕೆಲಸಕ್ಕೆ ಬರುವಾಗ ತನ್ನ ಅನುಭವವನ್ನು ಕೂಡ ನನ್ನೊಂದಿಗೆ ಹಂಚಿಕೊAಡಿದ್ದು ನೆನಪಿಗೆ ಬಂದಿತು.


‘ಶುಭಾ ಈ ಎಡಬಿಡಂಗಿ ವಯಸ್ಸಿನ ಪಿಯುಸಿ ಮಕ್ಕಳಿಗೆ ಪಾಠ ಮಾಡುವುದೆಂದರೆ ನಿಜಕ್ಕೂ ಅನಂತ ತಾಳ್ಮೆ ಬೇಕು. ಬೆಂಚಿನ ಮೇಲೆ ಕುಳಿತುಕೊಳ್ಳಲು ಕೂಡ ಇಷ್ಟಪಡುವುದಿಲ್ಲ ಅವರನ್ನು ಮೊಳೆ ಹೊಡೆದಂತೆ ಕೂಡಿಸಬೇಕು. ಆದರೆ ಅವರು ಮೊಳೆ ಹೊಡೆದ ಬೆಂಚಿನ ಮೇಲೆ ಕುಳಿತಂತೆ ಮಿಲುಕಾಡುತ್ತಾ ಇರುತ್ತಾರೆ.  ಅವರಿಗೆ ಟಿವಿ ಮತ್ತು ಮೊಬೈಲ್ ಮಾತ್ರವೇ ಪ್ರಪಂಚ. ಕಾಲೇಜಿನಲ್ಲಿ ಟಿವಿ ಇಲ್ಲ ಮೊಬೈಲ್ ಕೂಡ ಇಲ್ಲ, ಹಾಗಾಗಿ ಯಾವಾಗ ಮನೆಗೆ ಹೋಗುತ್ತೇವೋ, ಮೊಬೈಲ್ ಮುಟ್ಟುತ್ತೇವೋ ಎಂದು ಮನಸ್ಸೆಲ್ಲಾ ಆ ಕಡೆ ಸುಳಿದಾಡುತ್ತಾ ಇರುತ್ತದೆ.

ಗಮನವೆಲ್ಲಾ ಆ ಕಡೆ ಇರುವುದರಿಂದ ಕಾಲೇಜಿನ ಪಾಠದ ಕಡೆಗೆ ಅವರ ಕಿವಿ, ಮನಸ್ಸು, ಒಲವು ಯಾವುದೂ ಇರುವುದಿಲ್ಲ. ಬೇಡವಾದದ್ದನ್ನೆಲ್ಲ ನೋಡಿ ತಲೆಗೆ ತುಂಬಿಕೊಳ್ಳುವುದರಿAದ ನೆನಪಿನ ಶಕ್ತಿಯೂ ತುಂಬಾ ಕಡಿಮೆ. ನೆನಪಿನ ಶಕ್ತಿಯ ಕೊರತೆಯ ಜೊತೆಗೆ ಕಲ್ಪನಾ ಶಕ್ತಿಯ ಕೊರತೆಯೂ ಇದೆ. ಹಿಂದೆಲ್ಲಾ ಕಥೆ ಕೇಳಿದರೆ ಕಾವ್ಯ ಓದಿದರೆ ಅದನ್ನು ಕಣ್ಮುಂದೆ ಕಲ್ಪಿಸಿಕೊಳ್ಳುವ ಶಕ್ತಿ ಇರುತ್ತಿತ್ತು. ಈಗ ಎಲ್ಲವೂ ಕಣ್ಮುಂದೆ ಸಿಗುವುದರಿಂದ ಸಿಕ್ಕಷ್ಟು ಮಾತ್ರ ತಲೆಗೆ ಹೋಗುವುದು. ಅದನ್ನು ಹೊರತಾಗಿ ದೊಡ್ಡದಾಗಿ ಕಲ್ಪಿಸಿಕೊಳ್ಳುವ ಶಕ್ತಿಯನ್ನು ಮಕ್ಕಳು ಕಳೆದುಕೊಂಡಿದ್ದಾರೆ.  

ಇನ್ನು ಕ್ರಿಯೇಟಿವಿಟಿ ಅಂತೂ ಇಲ್ಲವೇ ಇಲ್ಲ. ಸೃಜನಾತ್ಮಕವಾದ ಯಾವುದರ ಕಡೆಗೂ ಗಮನ ಕೊಡದೆ ಕೈಗೆ ಸಿಕ್ಕಷ್ಟನ್ನು ಮಾತ್ರ ಅನುಭವಿಸುತ್ತಾ ಮೊಬೈಲೇ ಬದುಕು ಎಂದು ಭ್ರಮಿಸಿಕೊಂಡು ಬಿಟ್ಟಿರುತ್ತಾರೆ. ಶೇಕಡ ನೂರರಷ್ಟು ರಿಸಲ್ಟ್ ಕೊಡಬೇಕು ಎಂದು ಶಿಕ್ಷಣ ಇಲಾಖೆ ಬಯಸುತ್ತದೆ.

Join WhatsApp Group


ಒಂದು ಮಗುವಂತೂ ಇಡೀ ವರ್ಷದಲ್ಲಿ ಕಾಲೇಜಿಗೆ ಎಲ್ಲೋ ಒಮ್ಮೊಮ್ಮೆ ಬಂದು ಹೋಗುತ್ತಿತ್ತು. ದೊಡ್ಡವರ ಇನ್ಫ್ಲುಯೆನ್ಸ್ನಲ್ಲಿ ಅವನಿಗೆ ಅಟೆಂಡೆನ್ಸ್ ಕೂಡ ಕೊಟ್ಟಾಗಿತ್ತು.  ಹೇಗೋ ಕೊನೆಯ ಹದಿನೈದು ದಿನವಾದರೂ ಚೆನ್ನಾಗಿ ತಯಾರಿ ಮಾಡಿ ಮುವ್ವತ್ತೆöÊದು ನಂಬರ್ ಆದರೂ ತೆಗೆದುಕೊಳ್ಳಲಿ ಎಂದರೆ ಅದಕ್ಕೂ ಆ ಹುಡುಗ ಮನಸ್ಸು ಮಾಡಲಿಲ್ಲ. ಈ ಬಾರಿ ಅವನು ಗ್ಯಾರೆಂಟಿ ಫೇಲ್ ಆಗುತ್ತಾನೆ. ಅವನು ಫೇಲಾದರೆ ನಾವೂ ಫೇಲ್’ ಎಂದಳು.


‘ಅವನು ಫೇಲಾದರೆ ನೀವು ಯಾಕೆ ಫೇಲು?’ ಎಂದು ನನ್ನ ಪ್ರಶ್ನೆ. ‘ನೂರಕ್ಕೆ ನೂರರಷ್ಟು ರಿಸಲ್ಟ್ ತೆಗೆದುಕೊಳ್ಳದಿದ್ದರೆ ನಮ್ಮ ಕಾಲೇಜು ಫೇಲಾಗಿದೆ ಎನ್ನುತ್ತಾರೆ. ಕಾಲೇಜಿಗೆ ಮಕ್ಕಳು ಹೆಚ್ಚಾಗಿ ಬರದಿದ್ದರೆ ಕಾಲೇಜು ಮುಚ್ಚುತ್ತೇವೆ ಎನ್ನುತ್ತಾರೆ. ಎಲ್ಲರೂ ಒಂದೊAದು ಮಕ್ಕಳು ಮಾಡಿಕೊಂಡು ತುಂಬಾ ಮುಚ್ಚಟ್ಟೆಯಿಂದ ಬೆಳೆಸಿ ಅವರನ್ನೆಲ್ಲ ಪ್ರೈವೇಟ್ ಕಾಲೇಜಿಗೆ ಕಳಿಸುತ್ತಾರೆ. ಎಲ್ಲೋ ಬಡವರ ಮಕ್ಕಳು ಕೆಲವರು ಮಾತ್ರ ಸರ್ಕಾರಿ ಶಾಲೆಗೆ ಬರುತ್ತಾರೆ. ಇನ್ನೂ ಹಳ್ಳಿಗಳ ಕಡೆ ೧೦ನೇ ತರಗತಿ ಮುಗಿದರೆ ಸಾಕು ಹೆಣ್ಣು ಮಕ್ಕಳಿಗೆ ವಿದ್ಯೆ ಬೇಕು ಎನ್ನುವ ಸಂಖ್ಯೆ ಶೇಕಡಾ ೫೦.  ಇನ್ನ ೫೦ ಶೇಕಡಾ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಕುರಿಸಿಕೊಳ್ಳುತ್ತಾರೆ.


ಕಡೆಯ ಪಕ್ಷ ದೂರ ಹೋಗುವುದು ಬೇಡ, ಮನೆಗೆ ಬಾಗಿಲಲ್ಲಿ ಇರಲಿ ಎಂದು ಕೆಲವರು ಮನೆ ಮುಂದಿನ ಸರ್ಕಾರಿ ಕಾಲೇಜಿಗೆ ಮಕ್ಕಳನ್ನು ಕಳಿಸುತ್ತಾರೆ.  ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಕೆಲವರು ಪ್ರೈವೇಟ್ ಕಾಲೇಜಿಗೆ ಕಳಿಸುತ್ತಾರೆ.  ಹಾಗಾಗಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆ. ಹಾಗೂ ಹೀಗೂ ಹತ್ತನೇ ತರಗತಿ ಪಾಸಾದ ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದರೂ ಅವರ ತಲೆಯಲ್ಲಿ ನಾಲ್ಕನೇ ಕ್ಲಾಸಿನ ಮಕ್ಕಳಷ್ಟು ಬುದ್ಧಿ ಕೂಡಾ ಇರುವುದಿಲ್ಲ. ಎಲ್ಲರೂ ಹಾಗೆ ಅಂತಲ್ಲ. ತುಂಬಾ ಬುದ್ಧಿವಂತ ಮಕ್ಕಳು ಅನುಕೂಲ ಇಲ್ಲದ್ದಿದ್ದರೆ ಸರ್ಕಾರೀ ಕಾಲೇಜುಗಳಿಗೆ ಬರುತ್ತಾರೆ ಅನ್ನು. ಕಾಲೇಜಿಗೆ ಬಂದರೂ ಕನ್ನಡವನ್ನು ಕಾಗುಣಿತ ತಪ್ಪಿಲ್ಲದಂತೆ ಬರೆಯಲೂ ಅನೇಕರಿಗೆ ಬರುವುದಿಲ್ಲ. ಇವರಿಂದ ನಾವು ನೂರಕ್ಕೆ ನೂರರಷ್ಟು ರಿಸಲ್ಟ್ ತರಿಸಬೇಕು.  ಅದು ಏನು ತಲೆಕೆಚ್ಚಿಕೊಳ್ಳಬೇಕೋ ನಾನು ಕಾಣೆ’ ಎಂದು ಅಲವತ್ತುಕೊಂಡಿದ್ದಳು.

Join WhatsApp Group


ನನಗೆ ಪಕ್ಕದ ವಿಭಾಗದಲ್ಲಿ ಸಾಲಕ್ಕಾಗಿ ಎಂದು ಕಾಯುತ್ತಿದ್ದ ಇದನ್ನು ಕೇಳಿಸಿಕೊಳ್ಳುತ್ತಿದ್ದ ಮಾಧ್ಯಮಿಕ ಶಾಲೆಯ ಶಿಕ್ಷಕಿ ಒಬ್ಬರು ‘ಮೇಡಂ ಇವರದ್ದಾದರೂ ಎಷ್ಟೋ ಪರವಾಗಿಲ್ಲ. ಮಕ್ಕಳು ಒಂದು ಹಂತವನ್ನು ದಾಟಿ ಬಂದಿರುತ್ತಾರೆ. ಕಾಲೇಜು ಮಕ್ಕಳು ದೊಡ್ಡವರ ಮಾತನ್ನು ಕೇಳುವುದಿಲ್ಲ ಎಂಬುದು ಸತ್ಯವಾದರೂ ಶ್ರದ್ಧೆ ಇರುವ ಮಕ್ಕಳು ಅಲ್ಪಸ್ವಲ್ಪವಾದರೂ ಕಲಿಯುತ್ತಾರೆ.  ನಮ್ಮ ಶಾಲೆಯಲ್ಲಂತೂ ಇನ್ನು ಕಷ್ಟ.  ನಾವು ಕಲಿಸಿದರೆ ಅವರು ಕಲಿಯುತ್ತಾರೆ ಎಂಬುದು ನಿಜ. ಈ ವಯಸ್ಸಿನಲ್ಲಿ ಸ್ವಲ್ಪವಾದರೂ ಗುರು ಹಿರಿಯರ ಭಯವಿರುತ್ತದೆ.  ಆದರೆ ಪಾಠ ಮಾಡಲು ನಮಗೆ ಪುರುಸೊತ್ತಿಲ್ಲ. ಮಕ್ಕಳ ಭವಿಷ್ಯವನ್ನು ಚಿಗುರಿನಲ್ಲಿ ಚಿವುಟು ಹಾಕುತ್ತಿದ್ದೇವೆ ಎನ್ನುವ ಅಪಾರ ನೋವಿದೆ ನನಗೆ’ ಎಂದರು.  ‘ಹೌದಾ? ಅದು ಹೇಗೆ ಮೇಡಂ?’ ಎನ್ನುವ ನನ್ನ ಪ್ರಶ್ನೆಗೆ ‘ಮಕ್ಕಳ ಬಿಸಿಊಟದ ಜವಾಬ್ದಾರಿ ಇದೆ ನಮಗೆ. ಇನ್ನೂ ಬೆಳೆಯುವ ಮಕ್ಕಳು ಹಾಗಾಗಿ ಅವರಿಗೆ ಹೊಟ್ಟೆ ತುಂಬಾ ಕೊಡಬೇಕಾದದ್ದು ನಮ್ಮ ಕರ್ತವ್ಯ.  ಜೊತೆಗೆ ಊಟದ ಖರ್ಚಾದರೂ ಕಡಿಮೆಯಾಗುತ್ತದೆ; ಮಕ್ಕಳಿಗೆ ಹೊಟ್ಟೆ ತುಂಬ ಊಟ ಸಿಗುತ್ತದೆ ಎಂದು ಶಾಲೆಗೆ ಕಳಿಸುವ ಎಷ್ಟೋ ಬಡ ತಂದೆ ತಾಯಿಗಳು ಇದ್ದಾರೆ.  ಮನೆಯಲ್ಲಿ ಏನೋ ತಿಂದು ಬಂದರೂ ಶಾಲೆಯ ಬಿಸಿ ಊಟದಿಂದಲೇ ಮಕ್ಕಳಿಗೆ ವಾಂತಿಯಾಗಿದ್ದು ಭೇದಿಯಾಗಿದ್ದು ಜ್ವರ ಬಂದಿದ್ದು ಎನ್ನುತ್ತಾರೆ.  ಅದಕ್ಕಾಗಿ ಅಡುಗೆಯವರ ಮುಂದೆ ಕಣ್ಗಾವಲಿನಲ್ಲಿ ನಿಂತು ಮಾಡಿಸಬೇಕು. ಖರ್ಚು ವೆಚ್ಚಗಳ ಲೆಕ್ಕ ಬರೆಯಬೇಕು, ಅಡುಗೆ ಸಾಮಾನು ತರಬೇಕು, ತರಕಾರಿ ತರಬೇಕು.


ಇದರ ಜೊತೆಗೆ ನೂರಕ್ಕೆ ನೂರರಷ್ಟು ರಿಸಲ್ಟ್ ತರಬೇಕು. ಮಕ್ಕಳು ಶಾಲೆ ಬಿಟ್ಟರೆ ಮತ್ತೆ ಶಾಲೆಗೆ ಕರೆ ತರುವ ಕಾರ್ಯಕ್ರಮ ಬೇರೆ.   ರಜೆಯಲ್ಲಿ ಅವರ ಮನೆಗೆ ಹೋಗಿ ಕೈ ಮುಗಿದು ಮಕ್ಕಳನ್ನು ಮತ್ತೆ ಕಳಿಸಿ ಶಾಲೆಗೆ ಎಂದು ಬೇಡಬೇಕು.  ಹಳ್ಳಿಗಾಡಿನಲ್ಲಿ ಕೆಲವರಂತೂ ಮನೆಯಲ್ಲಿ ಕುರಿ ಆಡು ಹಸು ದನ ಕೊಟ್ಟಿಗೆ ನೋಡಿಕೊಳ್ಳಲು ಜನಬೇಕು ತಂದೆ-ತಾಯಿ ಇಬ್ಬರೂ ಕೂಲಿ ಕೆಲಸಕ್ಕೆ ಹೋದರೆ ಇದನ್ನು ನೋಡಿಕೊಳ್ಳುವವರು ಯಾರು ಎಂದು ಮಕ್ಕಳನ್ನು ಈ ಕೆಲಸಕ್ಕೆ ಹಾಕುವವರು ಇದ್ದಾರೆ.   ಅವರನ್ನು ಕಾಡಿಬೇಡಿ ಮತ್ತೆ ಶಾಲೆಗೆ ತರುವಷ್ಟರಲ್ಲಿ ನಮಗೆ ಮತ್ತೊಂದು ಜನ್ಮ ಬಂದAತಾಗುತ್ತದೆ.


ಇದು ಅಪ್ಪ ಅಮ್ಮನ ಕಥೆ ಮಕ್ಕಳು.  ಶಾಲೆಗೆ ಹೋಗಲಿ ಎಂದು ಆಸೆ ಪಡುವ ಅಪ್ಪ ಅಮ್ಮನ ಮಕ್ಕಳಿಗೆ ಶಾಲೆಗೆ ಬರುವುದಕ್ಕೇ ಇಷ್ಟ ಇರುವುದಿಲ್ಲ ನಾವೇನಾದರೂ ಅವರನ್ನು ಮತ್ತೆ ಶಾಲೆಗೆ ಕರೆತರಬೇಕು ಎಂದು ಹೋದರೆ ಗದ್ದೆಬಯಲಲ್ಲಿ ಎಲ್ಲೋ ಆಟವಾಡುತ್ತಿದ್ದ ಮಕ್ಕಳು ನಮ್ಮನ್ನು ಕಂಡ ಕೂಡಲೇ ಎದ್ನೋ ಬಿದ್ನೋ ಎಂದು ಎಲ್ಲೋ ಓಡಿ ಹೋಗಿಬಿಡುತ್ತಾರೆ. ಆ ಮಕ್ಕಳಿಗೆ ಓಡಲು ಕಾಲಿನಲ್ಲಿ ಶಕ್ತಿ ಇರುತ್ತದೆ. ನಮಗೆ ಈ ವಯಸ್ಸಿನಲ್ಲಿ ಅವರ ಹಿಂದೆ ಓಡಿ ಹೋಗುವುದು ತುಂಬಾ ಕಷ್ಟ ನಮ್ಮಲ್ಲಿ ಕೆಲವರು ಹಾಗೆ ಓಡಲು ಹೋಗಿ ಎದ್ದು ಬಿದ್ದು ಕೈ ಕಾಲು ಏಟು ಮಾಡಿಕೊಂಡವರು ಇದ್ದಾರೆ.


ಹೋದ ಬಾರಿ ೩೦ ಮಕ್ಕಳಿದ್ದರೆ ಸದ್ಯ ಈ ಬಾರಿ ಹೆಚ್ಚಾಗದಿದ್ದರೂ ಪರವಾಗಿಲ್ಲ ಮೂವತ್ತು ಮಕ್ಕಳಾದರೂ ಶಾಲೆಗೆ ಬರುತ್ತಿದ್ದಾರಲ್ಲಾ ಎಂದು ಅವರಿಗೆ ಆರತಿ ಎತ್ತಿ ಶಾಲೆಯ ಮುಂದೆ ರಂಗೋಲಿ ಇಟ್ಟು ತೋರಣ ಕಟ್ಟಿ ಬರಮಾಡಿಕೊಳ್ಳುವಷ್ಟರ ಮಟ್ಟಿಗೆ ನಮಗೆ ತಲೆಬೇನೆ ಇದೆ.


ಈಗ ಜನಗಣತಿ ಬೇರೆ ಇದೆ, ಎಲೆಕ್ಷನ್ ಬಂದರೆ ಅದಕ್ಕೂ ಹೋಗಬೇಕು.  ಇವೆಲ್ಲ ಏನಾದರೂ ಆಗಲಿ ನಮ್ಮ ದೇಶದ ಮುಂದಿನ ಭವಿಷ್ಯ ಎಂದರೆ ಇಂಥ ಮಕ್ಕಳು. ಆ ಮೀಟಿಂಗ್ ಈ ಪ್ರಾಜೆಕ್ಟ್ ಈ ಊಟ ಆ ಆಟ ಎಂದೆಲ್ಲಾ ಸಮಯ ಕೊಟ್ಟು ಕಲಿಯುವ ವಯಸ್ಸಿನ ಈ ಎಳೆಯ ಮಕ್ಕಳಿಗೆ ನಾವು ಸರಿಯಾಗಿ ಪಾಠ ಮಾಡಿ ಅವರನ್ನು ಸರಿಯಾಗಿ ತಿದ್ದರೂ ಕೂಡ ಸಮಯ  ಆಗುವುದಿಲ್ಲ ಎನ್ನುವ ನೋವು ತುಂಬಾ ಕಾಡುತ್ತದೆ.


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎನ್ನುವ ಮಾತು ನಮಗೆ ಎಷ್ಟರಮಟ್ಟಿಗೆ ಒಪ್ಪುತ್ತದೆ ಎಂದು ನಮಗೇ ನಾಚಿಕೆಯಾಗುತ್ತದೆ.  ಮನೆಯಲ್ಲಿ ತಂದೆ ತಾಯಿಗಳ ನಂತರ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಬಹಳ ದೊಡ್ಡದು. ಆದರೆ ಹೊಸ ಹೊಸ ಶಿಕ್ಷಣ ನೀತಿಯಿಂದಾಗಿ ನಾವು ಹರಿದು ಹಂಚಿ ಹೋಗಿ ಮಕ್ಕಳಿಗೆ ಏನು ಕಲಿಸಬೇಕೋ ಅದನ್ನು ಕಲಿಸಲು ಸಾಧ್ಯವಾಗದೆ ಒಳಗೊಳಗೆ ನೋವು ಪಡುತ್ತಿದ್ದೇವೆ.  ತಾಯಿ ಶಾರದೆಗೆ ಇದು ನಾವು ಮಾಡುವ ದೊಡ್ಡ ಅಪಮಾನ ಎಂದು ಎಷ್ಟೋ ಬಾರಿ ನನಗೆ ಕಣ್ಣೀರು ಬಂದಿದೆ’ ಎಂದು ತಲೆತಗ್ಗಿಸಿಬಿಟ್ಟರು.

Join WhatsApp Group


ಇವರೆಲ್ಲರ ಮಾತುಗಳು ನನ್ನ ಮನಸ್ಸನ್ನು ಕಲಕಿಬಿಟ್ಟವು. ಮತ್ತೆ ಮತ್ತೆ ಅವರ ಮಾತುಗಳನ್ನು ಮೆಲುಕುಹಾಕತೊಡಗಿತು.
ನಮ್ಮ ಗುರುಕುಲ ಪದ್ಧತಿ ಅದೆಷ್ಟು ಸೊಗಸಾಗಿತ್ತು, ಬದುಕನ್ನು ನಡೆಸಲು ಬೇಕಾದ ಮತ್ತು ಮನಸ್ಸನ್ನು ಸಂಸ್ಕರಿಸಲು ಬೇಕಾದ ಶಿಕ್ಷಣವನ್ನು ಕೊಡುತ್ತಿದ್ದರು. ಶಿಷ್ಯರನ್ನು ವರ್ಷಗಟ್ಟಲೆ ತಮ್ಮ ಮನೆಯಲ್ಲಿ ಇಟ್ಟುಕೊಂಡು ತಮ್ಮ ಮನೆಯ ಮಕ್ಕಳಂತೆ ಸಾಕುತ್ತಿದ್ದರು. ಹನ್ನೊಂದು ವರ್ಷ ಆಗುವ ತನಕ ಆಟೋಟ ಆಡಿಕೊಂಡು ಮನೆಯ ಹಿರಿಯರೊಡನೆ ಕಾಲ ಕಳೆದು ಪ್ರಕೃತಿಯ ನಡುವೆ ಪ್ರಕೃತಿಯ ಶಿಶುಗಳಾಗಿ ಬೆಳೆದು ಕೇವಲ ನೀತಿ ಪಾಠವನ್ನೋ, ರಾಮಾಯಣ ಮಹಾಭಾರತವನ್ನೋ ಕೇಳಿಕೊಂಡು ಬೆಳೆಯುತ್ತಿದ್ದರು. ಆನಂತರ ಉಳಿದ ಬದುಕಿನ ಪಾಠ.  ಯಾವಾಗ ಬ್ರಿಟಿಷರ ಆಗಮನವಾಯಿತೋ ನಮ್ಮ ಶಿಕ್ಷಣ ಪದ್ಧತಿ ಬದಲಾಯಿತು. ಈಗೆಲ್ಲಾ ಅಂಕಿ ಸಂಖ್ಯೆಗಳಿಗೆ ಹೆಚ್ಚಿನ ಮಹತ್ವ.


ನಿಜ… ನಮಗೆ ವಿಜ್ಞಾನವೂ ಬೇಕು ಕಲೆಯೂ ಬೇಕು. ವಿಜ್ಞಾನದೊಡನೆ ಕಲೆ ಮೇಳವಿಸೆ ಜಸವು ಜನ ಜೀವನಕೆ ಮಂಕುತಿಮ್ಮ ಎಂದು ಡಿ.ವಿ.ಜಿ ಅವರುಹೇಳಿದ್ದಾರೆ.ಆದರೆ ಕೇವಲ ಬ್ರಿಟಿಷರ ಶಿಕ್ಷಣ ಪದ್ಧತಿಯಷ್ಟೇ ನಮಗೆ ಸಾಕೇ? ಅಥವಾ ಕೇವಲ ಗುರುಕುಲ ಪದ್ದತಿಯಷ್ಟೇ ಸಾಕೇ? ಎಂದು ನಮ್ಮನ್ನು ಪ್ರಶ್ನಿಸಿಕೊಂಡರೆ ಇವೆಲ್ಲದರ ಹದವಾದ ಮೇಳೈಕೆ ನಮಗೆ ಬೇಕು. ಜೊತೆಗೆ ಪ್ರತಿನಿತ್ಯ ಬದುಕಲು ನಮಗೆ ಅವಶ್ಯಕವಾಗಿರುವ ಅಡುಗೆ ಮಾಡುವುದು, ಹೊಲಿಗೆ ಕಲಿಯುವುದು, ನಲ್ಲಿ ರಿಪೇರಿಯೋ, ವಿದ್ಯುತ್ ಕೆಲಸವೋ, ಬಣ್ಣ ಬಳಿಯುವುದೋ, ಸಿಮೆಂಟ್ ಮೆತ್ತುವುದೋ,  ಸೈಕಲ್ ರಿಪೇರಿ, ದ್ವಿಚಕ್ರ ವಾಹನ ರಿಪೇರಿ, ಮರಗೆಲಸ, ಸ್ವರಕ್ಷಣಾ ಪದ್ಧತಿ, ಈಜುವುದು ಎಲ್ಲವೂ ಗೊತ್ತಿರಬೇಕು. ಆಗ ಒಂದು ಪರಿಪೂರ್ಣವಾದ ವಿದ್ಯೆ ಕಲಿತಂತಾಗುತ್ತದೆ.
ಇದಕ್ಕೆ ಪೂರಕವಾದ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಬೇಕು. ಹೊಸ ದಿಕ್ಕಿನೆಡೆ ನಮ್ಮ ಕನಸು. ಮನಸು. ಕೈಗಳು ಮತ್ತು ಅಧಿಕಾರ ವ್ಯವಸ್ಥೆ ಕೆಲಸ ಮಾಡಬೇಕು.

-ಡಾ. ಶುಭಶ್ರೀ ಪ್ರಸಾದ್, ಮಂಡ್ಯ

  • ಜಾತಿವ್ಯವಸ್ಥೆ ಇರುವವರೆಗೆ ಬಸವ ತತ್ವಗಳು ಪ್ರಸ್ತುತ: ಸಿಎಂ ಸಿದ್ದರಾಮಯ್ಯ
    by Team Varthaman
  • ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ
    by Team Varthaman
  • ನಮ್ಮ ಮಕ್ಕಳ ಶಿಕ್ಷಣ
    by Team Varthaman
  • ಮಧ್ಯಪ್ರಾಚ್ಯ ಸಂಘರ್ಷ : ದೇಶದಲ್ಲಿ LPG ಬಳಕೆ 13% ಕುಸಿತ
    by Team Varthaman
  • ಪಟಾಕಿ ಕಾರ್ಖಾನೆ ಸ್ಫೋಟ: 22 ಮಂದಿ ಸಾವು, ಹಲವರಿಗೆ ಗಂಭೀರ ಗಾಯ
    by Team Varthaman
ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
ಹೆಣ್ಣು ಮಕ್ಕಳ ವ್ಯಥೆ
ದಸರಾ ಅಥವಾ ನವರಾತ್ರಿ ಹಬ್ಬದ ಮಹತ್ವ
“ಹಾಸನಾಂಬ ದೇವಿ” ದರ್ಶನ
ಶೋಷಣೆಯ ಮತ್ತೊಂದು ಮುಖ 
TAGGED:bankers dairyEducationkids
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

KSRTC ಪ್ರತಿಷ್ಠಿತ ಬಸ್‌ಗಳ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿ

Team Varthaman
Team Varthaman
January 8, 2026
ಲೋಕಾಯುಕ್ತ ದಾಳಿ: ಪರಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಸೇರಿ ಐವರು ಬಂಧನ
ಅವೈಜ್ಞಾನಿಕವಾಗಿ ವಾಹನ ತಡೆಯಬಾರದು: ಗೃಹ ಸಚಿವ ಜಿ. ಪರಮೇಶ್ವರ್ ಸೂಚನೆ
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೊಸ ಸ್ವಯಂಸೇವಾ ಟಿಕೆಟ್ ಯಂತ್ರಗಳ ವ್ಯವಸ್ಥೆ
ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ಮತ್ತು ಲೆನ್ಸ್ ವಿತರಣೆಗೆ ಸರ್ಕಾರದ ಮಹತ್ವದ ಹೆಜ್ಜೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?