ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾಧಾನದ ಮಾತುಗಳನ್ನಾಡಿದ್ದಾರೆ. “ನಮ್ಮ ಕುಟುಂಬದ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ರಾಮಲಿಂಗಾರೆಡ್ಡಿ ಅವರೊಂದಿಗೆ ಶುಕ್ರವಾರ ತಡರಾತ್ರಿವರೆಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ನಾನು ಮುಖ್ಯಮಂತ್ರಿ, ಅವರು ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಪಕ್ಷದ ಹಿರಿಯ ನಾಯಕರು. ಬೆಂಗಳೂರಿನಲ್ಲಿ ಪಕ್ಷವನ್ನು ಉಳಿಸಿ ಬೆಳೆಸುತ್ತಿರುವ ಪ್ರಮುಖ ವ್ಯಕ್ತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಲಿಂಗಾರೆಡ್ಡಿ ಅವರ ಅಸಮಾಧಾನ ನಿವಾರಣೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಿಎಂ, ಪಕ್ಷದೊಳಗಿನ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದರು.
ಖಾತೆ ಬದಲಾವಣೆ ಕುರಿತು ಪ್ರಶ್ನಿಸಿದಾಗ, “ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ, ಬೇರೆ ಯಾವ ವಿಚಾರ ಚರ್ಚಿಸಿದ್ದೇವೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.
ರಾಮಲಿಂಗಾರೆಡ್ಡಿ ಅವರೊಂದಿಗೆ ನಡೆದ ಮಾತುಕತೆ ಬಳಿಕ ಕಾಂಗ್ರೆಸ್ ವಲಯದಲ್ಲಿ ಉಂಟಾಗಿದ್ದ ಅಸಮಾಧಾನ ಶಮನವಾಗುವ ನಿರೀಕ್ಷೆ ಮೂಡಿದೆ.



