ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ಇದೀಗ ಸಾಮಾನ್ಯ ಜನರ ಅಡುಗೆ ಮನೆಗಳಿಗೂ ತಲುಪಿದೆ. ಕಳೆದ ಒಂದು ವಾರದಿಂದ ಅಡುಗೆ ಎಣ್ಣೆ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ
ಈಗಾಗಲೇ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ಹೆಚ್ಚಾಗಿದೆ.
ಇದಕ್ಕೂ ಮೊದಲು 750 ಮಿ.ಲೀ. ರುಚಿ ಗೋಲ್ಡ್ ಅಡುಗೆ ಎಣ್ಣೆ ಪ್ಯಾಕೆಟ್ ಬೆಲೆ 108 ರೂ. ಇತ್ತು. ಇದೀಗ ಅದರ ದರ ಸುಮಾರು 120 ರೂ.ಗೆ ಏರಿಕೆಯಾಗಿದೆ. ಮುಂದಿನ ಒಂದು ತಿಂಗಳೊಳಗೆ ಈ ದರ 140 ರಿಂದ 150 ರೂ.ವರೆಗೆ ಏರಿಕೆಯಾಗಬಹುದು ಎಂದು ಅಂಗಡಿ ಮಾಲೀಕರು ಅಂದಾಜಿಸಿದ್ದಾರೆ.
ರಷ್ಯಾ–ಉಕ್ರೇನ್ ಯುದ್ಧದ ಸಮಯದಲ್ಲೂ ಅಡುಗೆ ಎಣ್ಣೆ ದರ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಸಂಗ್ರಹಿಸಲು ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಸಣ್ಣ ಹೋಟೆಲ್‌ಗಳಲ್ಲಿ ಪೂರಿ, ವಡೆ, ಬಜ್ಜಿ ಮೊದಲಾದ ತಿಂಡಿಗಳ ತಯಾರಿಕೆಗೆ ಅಡುಗೆ ಎಣ್ಣೆ ಅತ್ಯಗತ್ಯವಾಗಿರುವುದರಿಂದ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.ಇದನ್ನು ಓದಿ –ಡಿಕೆಶಿ ಪರವಾಗಿ ನಾವಿದ್ದೇವೆ: ಸತೀಶ್ ಜಾರಕಿಹೊಳಿ
ರೋಣ ಪಟ್ಟಣದ ಹೋಟೆಲ್ ಮಾಲೀಕ ವೀರೇಶ್ ಪಟ್ಟಾರ ಮಾತನಾಡಿ, “ಮುಂದಿನ ದಿನಗಳಲ್ಲಿ ಎಣ್ಣೆ ಬೆಲೆ ಇನ್ನಷ್ಟು ಏರಬಹುದು ಎಂಬ ಕಾರಣಕ್ಕೆ ವ್ಯಾಪಾರಿಗಳು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಖರೀದಿಸುತ್ತಿದ್ದಾರೆ. ಉಕ್ರೇನ್ ಯುದ್ಧದ ಸಮಯದ ಅನುಭವದಿಂದ ನಾವು ಕೂಡ ಎಣ್ಣೆ ಸಂಗ್ರಹಿಸಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.








