- ಮುಂದಿನ ತಿಂಗಳಿಂದ ಜಾರಿ ಸಾಧ್ಯತೆ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣದ ದುರುಪಯೋಗ ತಡೆಯುವ ಉದ್ದೇಶದಿಂದ ಫಲಾನುಭವಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವ್ಯವಸ್ಥೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರುವ ಸಾಧ್ಯತೆ ಇದೆ.
ಹೊಸ ನಿಯಮದ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುವ 2,000 ರೂ. ನೆರವು ಪಡೆಯಲು ಫಲಾನುಭವಿಗಳು ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಬಯೋಮೆಟ್ರಿಕ್ ಮಾಡಿಸದಿದ್ದರೆ ಯೋಜನೆಯ ಹಣ ಖಾತೆಗೆ ಜಮೆಯಾಗುವುದಿಲ್ಲ.
ಬಯೋಮೆಟ್ರಿಕ್ ನೋಂದಣಿಗಾಗಿ ಪ್ರತಿ ಫಲಾನುಭವಿಯಿಂದ 5 ರೂ. ಸೇವಾ ಶುಲ್ಕ ಪಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಆ್ಯಪ್ ಸಿದ್ಧಪಡಿಸುತ್ತಿದೆ.
ಇದರ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಯ ಸದಸ್ಯತ್ವಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಸದಸ್ಯತ್ವ ಪಡೆಯಲು ಆಸಕ್ತರು 1,250 ರೂ. ಪಾವತಿಸಬೇಕಾಗುತ್ತದೆ. ಸದಸ್ಯತ್ವ ಕಡ್ಡಾಯವಲ್ಲ. ಸದಸ್ಯತ್ವ ಬೇಡವೆಂದರೆ ಕೇವಲ ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಂಡರೆ ಸಾಕು.
ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೇವಾಸಿಂಧು ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ನೋಂದಣಿ ವೇಳೆ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು.ಇದನ್ನು ಓದಿ –ಉಜ್ವಲ ಯೋಜನೆ :ಸಬ್ಸಿಡಿ ಸಿಲಿಂಡರ್ ಸಂಖ್ಯೆ 4ಕ್ಕೆ ಇಳಿಕೆ
ಒಮ್ಮೆ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಂಡ ಬಳಿಕ ಫಲಾನುಭವಿಯ ಗುರುತು ಖಚಿತಗೊಂಡು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಯಮಿತವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








