ಹಲವು ಸತ್ವಯುತ ಆಹಾರ ಪದಾರ್ಥಗಳು ನಮ್ಮ ಸುತ್ತಮುತ್ತಲೇ ಇದ್ದರೂ ಅದರ ಮಹತ್ವ ಅರಿಯದೆ ಅದರತ್ತ ಉದಾಸೀನ ತೋರುತ್ತೇವೆ. ಇಂತಹ ಆಹಾರ ಪದಾರ್ಥಗಳ ಪೈಕಿ ಕೂವೆ ಅರ್ಥಾತ್ ಆರಾರೂಟ್ ಕೂಡ ಒಂದಾಗಿದೆ. ಇದು ಆರೋರೂಟ್! ಇದರ ಕುರಿತು ಹೆಚ್ಚಿಗೆ ಹೇಳಬೇಕಾಗಿಲ್ಲ ಬಿಡಿ! ಇದೊಂದು ಮನೆಯಲ್ಲಿ ಇರಬೇಕಾದ ದಿವ್ಯ ಔಷಧದಂತಹ ವಸ್ತು ಎಂದೇ ಹೇಳಬಹುದು! ಗಿಡಗಳು ಅರಶಿನ ಗಿಡದಂತಿದ್ದರೆ, ಗೆಡ್ಡೆಗಳು ಶುಂಠಿಯನ್ನು ಹೋಲುತ್ತವೆ. ಕೂವೆಯನ್ನು ಮುಖ್ಯ ಬೆಳೆಯಾಗಿ ಬೆಳೆಯದಿದ್ದರೂ ಹಳ್ಳಿ ಪ್ರದೇಶದಲ್ಲಿ ಇತರ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿ ಬೆಳೆಯುವುದು ಕಂಡು ಬರುತ್ತದೆ. ಆಂಗ್ಲ ಭಾಷೆಯಲ್ಲಿ ಕರಕ್ಯೂಮ್ ಸ್ಟಾರ್ಚ್ ಅಥವಾ ಆರಾರೂಟ್ ಎಂದು ಕರೆಯುವ ಈ ಪೌಡರ್ ಅನ್ನು ನೆಲದಲ್ಲಿ ಬೆಳೆಯುವ ಒಂದು ಗಡ್ಡೆಯಿಂದ ತಯಾರಿಸುತ್ತಾರೆ.
ಗೆಡ್ಡೆ ಗೆಣಸು ಸೇವಿಸಿಯೇ ಜೀವನ ಮಾಡುತ್ತಿದ್ದ ಕಾಲವೂ ಇತ್ತು. ಆ ಕಾಲದಲ್ಲಿ ಹಲವು ಗೆಡ್ಡೆ ಗೆಣಸುಗಳನ್ನು ತಿಂದು ಜೀವಿಸುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಈ ಆರೋರೂಟ್ ನ್ನು ಸೇವಿಸುತ್ತಿದ್ದರು. ಇದು ಹೊಟ್ಟೆ ತಣಿಸುವ ಮತ್ತು ದೇಹಕ್ಕೆ ಬೇಕಾದ ವಿಟಮಿನ್ ಒದಗಿಸುವ ಪ್ರಮುಖ ಆಹಾರ ಪದಾರ್ಥವಾಗಿತ್ತು. ಇವತ್ತಿಗೂ ಮಲೆನಾಡುಗಳಲ್ಲಿ ತಮ್ಮ ಮನೆಯ ಹಿತ್ತಲಲ್ಲಿ ಇದನ್ನು ಬೆಳೆಸುವುದನ್ನು ನಾವು ಕಾಣಬಹುದಾಗಿದೆ. ಅಲ್ಲದೆ ಗೆಡ್ಡೆಯನ್ನು ಬೇಯಿಸಿ ತಿನ್ನುತ್ತಾರೆ. .
ಸಿಹಿ ಗುಣದ ಇದು ಹಲವರಿಗೆ ಇಷ್ಟದ ತಿನಿಸಾಗಿದೆ. ಹಿಂದೆ ಅನಾರೋಗ್ಯದ ಸಂದರ್ಭ ಇದನ್ನು ಔಷಧಿಯಾಗಿಯೂ, ಆಹಾರವಾಗಿಯೂ ನೀಡುತ್ತಿದ್ದರು. ಗೆಡ್ಡೆಗಳು ರುಚಿಯಾಗಿರುವುದರಿಂದ ಅದನ್ನು ತೊಳೆದು ನೀರಿನಲ್ಲಿ ಬೇಯಿಸಿ ತಿನ್ನುತ್ತಿದ್ದರು. ಇದು ಇತರೆ ಗೆಡ್ಡೆ ಗೆಣಸುಗಳಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಇದಕ್ಕೆ ಇದರಲ್ಲಿ ಹಲವು ರೀತಿಯ ಔಷಧಿ ಗುಣಗಳೇ ಕಾರಣವಾಗಿದೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಶುದ್ಧ ಆರೋರೂಟ್ ಪುಡಿಯನ್ನು ಆರೋಗ್ಯಕರ ಆಹಾರವಾಗಿ ಬಳಸಬಹುದು.
ಆರೋರೂಟ್ (Arrowroot) ಎನ್ನುವುದು Maranta arundinacea ಸಸ್ಯದ ಗೆಡ್ಡೆಯಿಂದ ಪಡೆಯಲಾಗುವ ಅತ್ಯಂತ ಪೌಷ್ಟಿಕಾಂಶಯುಕ್ತ, ಗ್ಲುಟನ್ ಮುಕ್ತ ಪಿಷ್ಟವಾಗಿದೆ. ಇದು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದ್ದು,
ಅತ್ಯಧಿಕ ಪ್ರೋಟೀನ್ ಭರಿತವಾಗಿ ಕಡಿಮೆ ಕ್ಯಾಲರಿ ಹೊಂದಿರುವ ಈ ಪದಾರ್ಥವು ಸುಲಭವಾಗಿ ಜೀರ್ಣವಾಗುವ ಕಾರಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲವಾರು ರೀತಿಯಲ್ಲಿ ಉಪಯೋಗಿಸಬಹುದು.! ಇದರಲ್ಲಿರುವ ಔಷಧೀಯ ಗುಣಗಳು ಮತ್ತು ಆರೋಗ್ಯಕಾರಿ ಪದಾರ್ಥವೂ ಆಗಿರುವುದರಿಂದ ಇದನ್ನು ಮಲೆನಾಡಿನಲ್ಲಿ ಮನೆಯ ಹಿತ್ತಲಿನಲ್ಲಿಯೇ ಬೆಳೆಸಿ ಬಳಸುತ್ತಿದ್ದರು. ಇದರ ಗೆಡ್ಡೆಯನ್ನು ಬೇಯಿಸಿ ತಿನ್ನಬಹುದು, ಪುಡಿ ಮಾಡಿ (Arrowroot powder) ದೋಸೆ, ಹಲ್ವಾ, ದೂದ್ ಪೇಡಾ, ಸೂಪ್‌ಗಳಲ್ಲಿ, ಸಾಸ್, ಪುಡ್ಡಿಂಗ್ ಮತ್ತು ವಿವಿಧ ತಿನಿಸುಗಳನ್ನು ದಪ್ಪವಾಗಿಸಲು ಬಳಸಲಾಗುತ್ತದೆ. ಇದರ ಮಹತ್ವ ಅರಿತು ಬಳಕೆ ಮಾಡಿದ್ದೇ ಆದರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.
ಬಳಕೆ ಮಾಡುವುದು ಹೇಗೆ ಗೊತ್ತಾ?

ಗೆಡ್ಡೆಗಳನ್ನು ಗಿಡದಿಂದ ಬೇರ್ಪಡಿಸುವ ಸಂದರ್ಭ ಗೆಡ್ಡೆಗಳಲ್ಲಿರುವ ಮೊಳಕೆ ಕಣ್ಣುಗಳನ್ನು ಒಂದೆಡೆ ರಾಶಿ ಹಾಕಿಟ್ಟುಕೊಂಡಿದ್ದೇ ಆದರೆ ಮುಂದಿನ ವರ್ಷಕ್ಕೆ ಅವುಗಳಿಂದ ಸಸಿ ತಯಾರಿಸಲು ಅನುಕೂಲವಾಗುವುದು. ಗೆಡ್ಡೆಗಳನ್ನು ಪ್ರತಿವರ್ಷ ಕೀಳುವ ಅಗತ್ಯವಿಲ್ಲ. ಬೇಸಿಗೆಯಲ್ಲಿ ಗಿಡ ಒಣಗಿದರೂ ಗೆಡ್ಡೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮಳೆ ಬಿದ್ದೊಡನೆಯೇ ಮತ್ತೆ ಗೆಡ್ಡೆಯಿಂದ ಮೊಳಕೆಯೊಡೆದು ಚಿಗುರಿ ಬಲಿಷ್ಠವಾಗಿ ಬೆಳೆಯುವುದು. ಎರಡು ವರ್ಷಗಳ ಕಾಲದ ಗೆಡ್ಡೆಗಳಲ್ಲಿ ಆಹಾರವು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ ಇದನ್ನು ಉಪಯೋಗಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
ಎರಡು ರೀತಿಯ ಪದ್ಧತಿಯನ್ನು ಅನುಸರಿಸುವುದರ ಮೂಲಕ ಈ ಗೆಡ್ಡೆಯಿಂದ ಹಿಟ್ಟನ್ನು ಪಡೆಯಬಹುದು. ಬಲಿತ ಗೆಡ್ಡೆಗಳನ್ನು ತೊಳೆದು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಆ ನಂತರ ಈ ಚೂರುಗಳನ್ನು ರುಬ್ಬಿ ತೆಗೆದು ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಬಟ್ಟೆಯಲ್ಲಿ ಹಾಕಿ ಸೋಸಬೇಕು. ಸೋಸಿ ಉಳಿದ ಜಿಗುಟನ್ನು ಚೆನ್ನಾಗಿ ಹಿಂಡಿ ಹಿಟ್ಟಿನ ದ್ರಾವಣವನ್ನು ಹಲವು ಗಂಟೆಗಳ ಕಾಲ ಇಡಬೇಕು. ಹೀಗೆ ಇಟ್ಟಾಗ ಅಡಿಯಲ್ಲಿ ಹಿಟ್ಟು ನಿಲ್ಲುತ್ತದೆ. ಹಿಟ್ಟಿನ ಮೇಲೆ ನಿಂತ ತಿಳಿ ನೀರನ್ನು ಬಸಿದು ತೆಗೆದು ಈ ಹಿಟ್ಟಿನ ಮಿಶ್ರಣಕ್ಕೆ ಮತ್ತೆ ಮೂರರಿಂದ ನಾಲ್ಕು ಬಾರಿ ಹೊಸ ನೀರನ್ನು ಹಾಕಿ ಬಸಿಯುವುದರ ಮೂಲಕ ಕಲ್ಮಶಗಳು ಸಂಪೂರ್ಣವಾಗಿ ಹೋದ ಬಳಿಕ ಹಿಟ್ಟನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು.
ಏನೆಲ್ಲ ಔಷಧೀಯ ಗುಣಗಳಿವೆ?

ಹೆಚ್ಚಿನವರು ಗೆಡ್ಡೆಯನ್ನು ಬೇಯಿಸಿ ಸೇವಿಸುವುದನ್ನು ನಾವು ಕಾಣಬಹುದಾಗಿದೆ.ಇನ್ನು ಇದರಲ್ಲಿ ಏನೇನು ಪೌಷ್ಠಿಕಾಂಶಗಳಿವೆ ಎನ್ನುವುದನ್ನು ನೋಡುವುದಾದರೆ ಪಿಷ್ಠ, ಸಕ್ಕರೆ, ಮೇದಸ್ಸು, ಲವಣಗಳು ಸಾಕಷ್ಟು ಪ್ರಮಾಣದಲ್ಲಿದೆ. ಆಮಶಂಕೆ, ಉರಿಮೂತ್ರ, ಗೆನೋರಿಯಾ(ಶುಕ್ಲದೋಷ), ವಿಷಮ ಶೀತಜ್ವರ, ಅಲ್ಸರೇಶನ್, ಮೂಲವ್ಯಾಧಿ, ಜಠರಾಮ್ಲ ಮುಂತಾದ ಕಾಯಿಲೆಯಿಂದ ಬಳಲುವವರು ಬಾರ್ಲಿ ನೀರಿನಂತೆಯೇ ಇದನ್ನು ಸೇವಿಸಬಹುದು. ಅಥವಾ ಗಂಜಿ ಮಾಡಿ ಅದಕ್ಕೆ ಹಾಲು, ಸಕ್ಕರೆ, ಸೇರಿಸಿ ಊಟದ ಸಮಯದಲ್ಲಿ ರೋಗಿಗೂ ನೀಡಬಹುದಾಗಿದೆ. ಹೊಟ್ಟೆಯ ಅಸ್ವಸ್ಥತೆ, ಅತಿಸಾರ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದರಿಂದ ಮತ್ತು ಎದೆಹಾಲು ಬತ್ತಿದಾಗ ಪರ್ಯಾಯವಾಗಿ ಶಿಶುಗಳಿಗೆ ಬಳಸಬಹುದು. ಗೋಧಿ ಅಥವಾ ಇತರ ಧಾನ್ಯಗಳಿಗೆ ಅಲರ್ಜಿ ಇರುವವರಿಗೆ ಇದು ಅತ್ಯುತ್ತಮ ಪರ್ಯಾಯ ಆಹಾರ. ಇದರಲ್ಲಿ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್, ಪ್ರೋಟೀನ್, ಮತ್ತು ನಾರಿನಂಶಗಳಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.
ಏಲಕ್ಕಿಯೊಂದಿಗೆ ಮಿಶ್ರ ಮಾಡಿದ ಕೂವೆಯ/ ಅರೋರೊಟ್ ಪಾನೀಯ ಸೇವಿಸುವುದರಿಂದ ಹೊಟ್ಟೆಯನ್ನು ತಂಪಾಗಿಸುವುದಲ್ಲದೆ, ಆಹಾರದಂತೆಯೂ ವರ್ತಿಸುವುದು. ದೇಹದ ಉಷ್ಣತೆಯನ್ನು ಶಮನಗೊಳಿಸುವುದು. ಗೋಡಂಬಿ, ಏಲಕ್ಕಿ, ದ್ರಾಕ್ಷಿ ಹಾಕಿ ತಯಾರಿಸಿದ ಹಲ್ವಾ ಬಹಳ ರುಚಿಯಾಗಿರುತ್ತದೆ. ಇದನ್ನು ಮಕ್ಕಳಿಂದ ಮುದಕರವರೆಗೂ ಸೇವಿಸಬಹುದು. ಗೆಡ್ಡೆಯಿಂದ ಹಿಟ್ಟನ್ನು ಬೇರ್ಪಡಿಸುವ ಸಂದರ್ಭ ಉಳಿಯುವ ಜಿಗುಟನ್ನು ಗೊಬ್ಬರವಾಗಿಯೂ ಉಪಯೋಗಿಸಬಹುದು.
ಆರೋರೂಟ್ ಪುಡಿಯೊಂದಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಆರೋರೂಟ್ ಪುಡಿಯನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ; ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ಇದರ ಸೇವನೆಯ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಆರೋರೂಟ್ ಅಥವಾ ಯಾವುದೇ ಗಿಡಮೂಲಿಕೆ ಪೂರಕಗಳನ್ನು ತೆಗೆದುಕೊಳ್ಳುವ ಮೊದಲು ನೀವು ಅರ್ಹ ವೈದ್ಯರನ್ನು ಸಂಪರ್ಕಿಸಬೇಕು. ಅರ್ಹ ವೈದ್ಯರನ್ನು ಸಂಪರ್ಕಿಸದೆ ಆಧುನಿಕ ಔಷಧದ ನಡೆಯುತ್ತಿರುವ ಚಿಕಿತ್ಸೆಯನ್ನು ಆಯುರ್ವೇದ/ಗಿಡಮೂಲಿಕೆಗಳ ತಯಾರಿಕೆಯೊಂದಿಗೆ ನಿಲ್ಲಿಸಬೇಡಿ ಅಥವಾ ಬದಲಾಯಿಸಬೇಡಿ.ಆರೋರೂಟ್ ಪುಡಿಯನ್ನು ಸೇವಿಸಿದ ನಂತರ ನೀವು ಯಾವುದೇ ಅಡ್ಡಪರಿಣಾಮಗಳನ್ನು ಗಮನಿಸಿದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸ್ವಯಂ-ಔಷಧಿ ಮಾಡಬೇಡಿ.

ಸೌಮ್ಯ ಸನತ್








