ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನ ನಗರದ ರಕ್ಷಣಾಪುರಂ ಪ್ರದೇಶದಲ್ಲಿರುವ ಹಾಸನ ಮಹಾನಗರಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಎಂ.ಸಿ. ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಶಿಲ್ಪಾ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬೆಳಿಗ್ಗೆ ಸುಮಾರು 5.15ಕ್ಕೆ ಅಧಿಕಾರಿಗಳು ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಪ್ರಯತ್ನಿಸಿದರು. ಆದರೆ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಬಂದಿರುವುದನ್ನು ಗಮನಿಸಿದ ಬಳಿಕ ಮನೆಯ ಲೈಟ್‌ಗಳನ್ನು ಆಫ್ ಮಾಡಿ ಸತ್ಯನಾರಾಯಣ ಅವರು ಬಾಗಿಲು ತೆರೆಯದೆ ಅಧಿಕಾರಿಗಳಿಗೆ ಸತಾಯಿಸಿದ್ದಾರೆ ಎನ್ನಲಾಗಿದೆ.
ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳು ಮನೆಯ ಬಾಗಿಲು ತೆರೆಯಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಅಧಿಕಾರಿಗಳು ಕಟ್ಟಡದ ಮೇಲೆ ಹತ್ತಿ ಕಿಟಕಿಗಳನ್ನು ತಟ್ಟಿ ಕೂಗಿದರೂ ಸಹ ಸತ್ಯನಾರಾಯಣ ಅವರು ಬಾಗಿಲು ತೆರೆಯಲಿಲ್ಲ ಎಂದು ತಿಳಿದುಬಂದಿದೆ. ಮನೆಯ ಸುತ್ತಲೂ ತಿರುಗಿ ಹಲವು ಬಾರಿ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ಸತ್ಯನಾರಾಯಣ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಅಧಿಕಾರಿಗಳು ಮನೆಯ ಹೊರಗಡೆಯೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ಓದಿ –ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ ?
ಇನ್ನೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಲೋಕಾಯುಕ್ತ ಎಸ್‌ಪಿ ನಂದಿನಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ. ಪ್ರಕರಣದ ಮುಂದಿನ ಕ್ರಮಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.








