ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣ ಮಾಡುವವರಿಗೆ ಅರಣ್ಯ ಇಲಾಖೆ ಹೊಸ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ಅವಘಡಗಳು ಹಾಗೂ ಚಾರಣಿಗರು ನಾಪತ್ತೆಯಾಗುತ್ತಿರುವ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಚಾರಣಿಗರ ಸುರಕ್ಷತೆಗೆ ಸಂಬಂಧಿಸಿದ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಪ್ರಕಟಿಸಿದ್ದಾರೆ.
ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಅರಣ್ಯ ಇಲಾಖೆಯ ಅನುಮೋದಿತ ಚಾರಣ ಪಥಗಳಲ್ಲಿ ಸ್ಥಳೀಯ ನೇಚರ್ ಗೈಡ್ ಇಲ್ಲದೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಪ್ರತಿ 10 ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಒಬ್ಬನೇ ಚಾರಣಿಗನಿದ್ದರೂ ಗೈಡ್ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸುತ್ತದೆ.
ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಚಾರಣಿಗರ ಮೊಬೈಲ್‌ನಲ್ಲಿ ಟ್ರ್ಯಾಕಿಂಗ್ ಆಪ್ ಇರುವುದು ಕಡ್ಡಾಯವಾಗಿದ್ದು, ಇದು ದಾರಿ ತಪ್ಪಿದ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯಕವಾಗುತ್ತದೆ. ಜೊತೆಗೆ, ಗೈಡ್‌ಗಳ ಬಳಿ ಜಿಪಿಎಸ್ ಸೌಲಭ್ಯ ಹೊಂದಿದ ವಾಕಿ-ಟಾಕಿ ಇರಲಿದ್ದು, ಅವರು ಪ್ರತಿ ಅರ್ಧಗಂಟೆಗೊಮ್ಮೆ ಬೇಸ್ ಕ್ಯಾಂಪ್ ಜೊತೆ ಸಂಪರ್ಕದಲ್ಲಿರಬೇಕು.
ನಿಯಮಗಳು ಮತ್ತಷ್ಟು ಕಠಿಣವಾಗಿದ್ದು, ಒಂದು ಚಾರಣ ಪಥದಲ್ಲಿ ಒಂದೇ ಸಮಯದಲ್ಲಿ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅತಿಯಾದ ಶಬ್ದ ಮಾಡುವ ಸಾಧನಗಳು, ಹರಿತವಾದ ಆಯುಧಗಳು, ಏಕಬಳಕೆ ಪ್ಲಾಸ್ಟಿಕ್ ಮತ್ತು ಫ್ಲ್ಯಾಶ್ ಫೋಟೋಗ್ರಫಿ ನಿಷೇಧಿಸಲಾಗಿದೆ. ಕಾಡಿನೊಳಗೆ ಕ್ಯಾಂಪ್ ಫೈರ್ ಮಾಡುವುದಕ್ಕೂ ಅವಕಾಶ ಇರುವುದಿಲ್ಲ. ಚಾರಣಿಗರು ತಮ್ಮ ತ್ಯಾಜ್ಯವನ್ನು ತಾವೇ ವಾಪಸ್ ತೆಗೆದುಕೊಂಡು ಬಂದು ಬೇಸ್ ಕ್ಯಾಂಪ್‌ನಲ್ಲಿ ವಿಲೇವಾರಿ ಮಾಡಬೇಕು.
ವಯೋಮಿತಿಯ ನಿಯಮಗಳೂ ಜಾರಿಯಲ್ಲಿದ್ದು, ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಹಿರಿಯ ನಾಗರಿಕರು ತಮ್ಮ ದೈಹಿಕ ಸದೃಢತೆಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಚಾರಣಿಗರ ಅನುಕೂಲಕ್ಕಾಗಿ ಬೇಸ್ ಕ್ಯಾಂಪ್‌ಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚಾರಣ ಆರಂಭಕ್ಕೂ ಮುನ್ನ ವನ್ಯಜೀವಿಗಳನ್ನು ಎದುರಿಸುವ ಸಂದರ್ಭಗಳಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಇನ್ನು ಮುಂದೆ ಚಾರಣಕ್ಕೆ ತೆರಳುವವರು ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ aranyavihaara.karnataka.gov.in ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಿದೆ.ಇದನ್ನು ಓದಿ –IPL ಟಿಕೆಟ್ ದಂಧೆ : KSCA ಸದಸ್ಯ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್
“ಚಾರಣಿಗರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ,” ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.








