ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಕುರಿತು ಅನಿಶ್ಚಿತತೆ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ಕಚ್ಚಾ ತೈಲದ ಬೆಲೆಗಳು ಸುಮಾರು ಶೇ.1ರಷ್ಟು ಏರಿಕೆಯಾಗಿದೆ.
ಭಾರತೀಯ ಕಾಲಮಾನ ಬೆಳಗ್ಗೆ 7:25ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 84 ಸೆಂಟ್ಸ್ (1.02%) ಏರಿಕೆಯಾಗಿ 83.33 ಡಾಲರ್‌ಗೆ ತಲುಪಿದೆ. ಇದೇ ವೇಳೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 69 ಸೆಂಟ್ಸ್ (0.89%) ಏರಿಕೆಯಾಗಿ 77.98 ಡಾಲರ್‌ನಲ್ಲಿ ವಹಿವಾಟು ನಡೆಸಿದೆ.
ಅಮೆರಿಕ ಹಾಗೂ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಬಳಸುವುದನ್ನು ನಿರ್ಬಂಧಿಸುವ ಸಾಧ್ಯತೆಯಿರುವ ಕಾನೂನನ್ನು ಇರಾನ್ ಪರಿಶೀಲಿಸುತ್ತಿರುವ ವರದಿಗಳ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 3 ಡಾಲರ್‌ಗಿಂತ ಹೆಚ್ಚು ಏರಿಕೆ ಕಂಡಿದೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಸರಬರಾಜಿನ ಪ್ರಮುಖ ಮಾರ್ಗವಾಗಿದ್ದು, ಸಂಘರ್ಷ ಆರಂಭಕ್ಕೂ ಮುನ್ನ ವಿಶ್ವದ ಒಟ್ಟು ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಾಗಣೆಯ ಸುಮಾರು ಐದನೇ ಒಂದು ಭಾಗ ಇದೇ ಮಾರ್ಗದ ಮೂಲಕ ಸಾಗುತ್ತಿತ್ತು.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಒಳಗೊಂಡಿರುವ ಸಂಘರ್ಷ ಶೀಘ್ರದಲ್ಲೇ ಅಂತ್ಯಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇರಾನ್ ದೀರ್ಘಕಾಲ ಹೋರಾಟ ಮುಂದುವರಿಸಲು ಸಾಧ್ಯವಿಲ್ಲ. ಈ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಅವರು ಹೇಳಿದ್ದಾರೆ.



