ನಾಳೆ ವಿಶ್ವ ಮಾತೃ ಭಾಷೆ ದಿನಾಚರಣೆ ಕಾಲೇಜಿಗೆ ಬರಬೇಕು ಎಂದು ಫೋನ್ ಬುಲಾವ್ ಬಂದಿತು. ಮರು ದಿವಸ ಅಡುಗೆಮನೆ ಸೇರಿಕೊಂಡವಳಿಗೆ ಮತ್ತೆ ನೆನಪಾಗಿದ್ದು 12ರ ಹೊತ್ತಿಗೆ!! ಅಡುಗೆ ಅರಮನೆಯ ಪಾರಂಪರಿಕ ಸೇವೆಯನ್ನು ಮಾಡುವಷ್ಟು ಮಾಡಿ ಮುಗಿಯಲಾರದ ಕೆಲಸಗಳನ್ನು ಬದಿಗೆ ಸರಿಸಿ ಇಚ್ಛಾಶಕ್ತಿಯಿಂದ ದೇಹವನ್ನು ಹೊರಗೆ ದಬ್ಬಿ ಅಡುಗೆ ಮನೆಯ ಬಾಗಿಲಿಕ್ಕಿ,ರೂಮಿಗೆ ಬಂದೆ. ಯಾರಾದರೂ ನನಗೆ ಅಡುಗೆ ಕೆಲಸ ಮುಗಿತಾ ಎಂದು ಕೇಳಿದರೆ ನಾನು ಹೇಳುವುದು ನಾನೇ ಮುಗಿಸಿದೆ ಎಂದು, ಏಕೆಂದರೆ ಈ ಕೆಲಸಗಳು ಮುಗಿಯುವದೇ ಇಲ್ಲ ಅನಂತ ಆಕಾಶದಂತೆ ಸಾಗರದ ತುದಿಯಂತೆ ಅನಂತೋಪಾದಿಯಲ್ಲಿ ಅಸ್ತಿತ್ವದಲ್ಲೇ ಉಳಿದುಕೊಂಡಿರುವವು.
ಈ ಗಡಿಯಾರ ದಿನವೂ ಒಂದೇ ತರಹ ಓಡುತ್ತದೆಯಾ ಅಥವಾ ನನಗೆ ಎಲ್ಲಾದರೂ ಹೋಗುವದಿದ್ದರೆ ಬೇಕಂತ ಜೋರಾಗಿ ಓಡುತ್ತದೆ ಅಂತ ನನಗೆ ಸಂಶಯ!! ಆಗಲೇ ಕೊಕ್ಕರೆಯಂತೆ ಬಾಯಿ ತೆಗೆದು ಮುಳ್ಳು ಒಂದುವರೆ ಎಂದು ತೋರಿಸುತ್ತಿತ್ತು. ಅಡುಗೆಯ ಒಗ್ಗರಣೆಗೆ ಹಾಕಿದಷ್ಟೇ ಎಣ್ಣೆ ನನ್ನ ಮುಖದಲ್ಲೂ ಬಸಿಯುತ್ತಿತ್ತು. ಅದಕ್ಕೊಂದಿಷ್ಟು ಸೋಪ್ ಹಾಕಿ ತೊಳೆದುಕೊಂಡೆ. ಮುಖವನ್ನು ಹತ್ತಿಯ ಪಂಚೆಗೆ ಮುತ್ತಿಟ್ಟು ಲಗು ಬಗೆಯಿಂದ ಕಾಟನ್ ಸೀರೆ ಒಂದು ಕಪಾಟಿನಿಂದ ಎಳೆದುಕೊಂಡೆ..ತೇವಾಂಶಕ್ಕೆ ಮುಖಕ್ಕೆ ಒಂದಿಷ್ಟು ಕ್ರಿಮ್,ಮೇಲೆ ಒಂದು ಚಿಟಿಕೆ ಪೌಂಡ್ಸ( ಅರಿಷಿಣ ದ ಲೆಕ್ಕಕೆ ಹಾಕಿ ಅಭ್ಯಾಸಬಲ) ಪೌಡರ್ , ಬಳಿದುಕೊಂಡೆ!! ಅದು ಹಚ್ಚುವದು ಚಂದ ಕಾಣುವುದಕ್ಕೋ ಅಥವಾ ಅಭ್ಯಾಸ ಬಲವೋ… ಎಲ್ಲರೂ ಹಚ್ಚುತ್ತಾರೆ ನಾನು ಹಚ್ಚಬೇಕು ಎನ್ನುವ ಸಂಕಲ್ಪವೋ ಅರ್ಥವಾಗುವುದಿಲ್ಲ.
ಅದನ್ನು ಹಚ್ಚಿಕೊಂಡ ಮೇಲೂ ಅಂತಹ ಚಂದವೇನು ಕಂಡಿಲ್ಲ ನಾನು. ಅಲ್ಲಲ್ಲಿ ಹಣುಕಿ ಇಣುಕಿ ನೋಡುವ ಬೆಳ್ಳಿಯ ರೇಖೆಗಳನ್ನು ಮುಚ್ಚಿ ಮುಚ್ಚಿಟ್ಟು, ಉಳಿದ ನಾಲ್ಕು ಕೂದಲುಗಳನ್ನು ಬಾಚಿಕೊಂಡು ನೀವಾದರೂ ಬಿಟ್ಟು ಹೋಗದಿರಿ ನನ್ನ ಶಿರವನು ಎಂದು ಬೇಡಿಕೊಳ್ಳುತ್ತಾ….ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹಿಡಿಕೂದಲಿಗೆ ರಬ್ಬರ್ ಬ್ಯಾಂಡ್ ಸುತ್ತಿದೆ. ಬಾಚಣಿಕೆಗೆ ಅಂಟಿಕೊಂಡ ಉದುರಿದ ಕೂದಲುಗಳು, ನನ್ನದು ನಿನ್ನದು ಸಂಬಂಧ ಮುಗಿಯಿತು ಎಂದು ನಿರ್ದಯವಾದ ವಿದಾಯ ಹೇಳಿ ಡಸ್ಟ ಬೀನ್ ಸೇರಿದವು. ಬೇಕೆಂದರೂ ಅವುಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಒಮ್ಮೆ ಅಭ್ಯಾಸ ಬಲದಿಂದ ಕನ್ನಡಿಯಲ್ಲಿ ನೋಡಿಕೊಂಡೆ ಮತ್ತೆ ಅದೇ ನಾನು!! ನಾನು.. ನಾನೇ ಅಲ್ಲವೇ? ನನ್ನನ್ನು ನೋಡಿಕೊಂಡು, ನನಗೆ ನಾನೇ ಒಂದು ನಗು ನೀಡಿ ಮೆಚ್ಚುಗೆಯಲ್ಲಿ ಹೆಗಲು ಚೀಲವನ್ನು ಏರಿಸಿಕೊಂಡು ಹೊರಗೆ ಬಂದೆ. ಕಂಡ ಕಂಡ ಆಟೋಗಳಿಗೆ ಕೈ ಮಾಡಿದರು ಅವರಿಗೆಲ್ಲ ನಾನು ಹೋಗುವುದು ಬಿಟ್ಟು ಬೇರೆ ದಾರಿಗೆ ಹೋಗಬೇಕಿತ್ತು. ಒಂದೊಮ್ಮೆ ಅನಿಸುವುದು ಇವರದೆಲ್ಲರದು ಹುನ್ನಾರವೇ ನನ್ನ ವಿರುದ್ಧ ಎಂದು!! ಬಾರದು ಬಪ್ಪದು ಎಂಬುವಂತೆ , ಬರದವನನ್ನು ಒಪ್ಪಿಸಿ ಕಾಲೇಜಿಗೆ ಬಿಡಲು ಬೇಡಿಕೊಂಡೆ. ಹತ್ತು ರೂಪಾಯಿಗೆ ಚೌಕಾಸಿ ಮಾಡಿ ಹತ್ತು ರೂಪಾಯಿ ಕಡಿಮೆ ಮಾಡಿದ್ದಕ್ಕೆ ನಾನು ಗೆದ್ದೆ ಎಂಬ ಭಾವದಲ್ಲಿ ಆಟೋ ಹತ್ತಿ ಕುಳಿತೆ! ಆತ ಉಪಕರಿಸುವ ಎಂಬಂತೆ ನನ್ನನ್ನು ಹತ್ತಿಸಿಕೊಂಡು ದುಡ್ಡು ತೊಗೊಂಡರು ಫ್ರೀ ಬಿಟ್ಟವನಂತೆ ಮುಖ ಭಂಗಿಯಲಿ ಇದ್ದ. ಹತ್ತು ರೂಪಾಯಿ ಕಡಿಮೆ ಮಾಡಿದಕ್ಕೆ ಗೇಟಿನಮುಂದೆಯೇ ಇಳಿಸಿ ಆವರಣದೊಳಗೆ ನಡೆದುಕೊಂಡೇ ಹೊಗಲು ಹೇಳಿದ. ಮನೆಯ ಗಂಡದೇವರು ನೂರು ಸಾರಿ ಹೇಳಿದರು “ಚೌಕಾಶಿ ಬುದ್ಧಿ ಬಿಡು “ಎಂದು ಮನಸ್ಸು ಕೇಳಬೇಕಲ್ಲ…. ಅಷ್ಟಾಗಿ ಗಂಡ ಹೇಳಿದಂತೆ ಯಾವ ಹೆಂಡತಿ ಕೇಳುತ್ತಾಳೆ… ಮೂಲ ನಿಯಮಕೆ ವಿರುದ್ಧವಾದ ತತ್ವ.
ಅವಸರದಿ ಒಳಗೆ ಹೋದರೆ ಆಗಲೇ ಬಂದ ಇಬ್ಬರ ಅಥಿತಿಗಳ ಪರಿಚಯ ಆಯಿತು. ಕಾರ್ಯಕ್ರಮ ಕೂಡ ಶುರುವಾಯಿತು. ಮುಖ್ಯ ಅತಿಥಿಯಾಗಿ ಬಂದವನು ಭಾಷೆಗಳ ಉಗಮದಿಂದ ಹಿಡಿದು ಆಗಮ ನಿಗಮದ ವರೆಗೆ ಒಂದು ದೊಡ್ಡ ಇತಿಹಾಸಿಕ ಭಾಷಣವನ್ನು ಜಡಿಮಳೆಯಂತೆ ಸುರಿಸುತಿದ್ದ. ಒಮ್ಮೊಮ್ಮೆ ಸಮಯವನು ಕೊಲ್ಲುವದು ಕೂಡ ಕಷ್ಟ!! ಮಾತುಗಳೇ ಸಾಕು ಎನುವಷ್ಟು ಶಬ್ದಗಳು ಕಿವಿಗೆ ಅಪ್ಪಳಿಸುತ್ತಿದ್ದವು. ಪ್ರಶಿಕ್ಷಣಾರ್ಥಿಗಳು ಕೇಳುವಷ್ಟು ಕೇಳಿ ಸಾಕಾದೊಡನೆ ಬಸ್ಸಿನಲ್ಲಿ ಕೂತ ಪ್ರಯಾಣಿಕರಂತೆ ಅತ್ತ ಇತ್ತ ನೋಡುತ್ತಾ ಸಮಯವನು ದೂಡಲು ಯತ್ನಿಸುತ್ತಿದ್ದರು. ಎರಡೆರಡು ಬಾರಿ ಸೂಕ್ಷ್ಮವಾಗಿ ಹೇಳಿದ ಮೇಲೆ ತನ್ನ ಭಾಷಣಕ್ಕೆ ವಿದಾಯ ಹೇಳಿದ. ನನಗನಿಸಿತು ಎಲ್ಲರ ಪಾಲಿನದು ಇವನೇ ಮಾತಾಡಿಬಿಟ್ಟಿದ್ದಾನೆ ಇನ್ನು ಯಾರು ಮಾತನಾಡಲು ಏನಿದೆ ಎಂದು…ಆ ವಿಶೇಷ ಅತಿಥಿ ನನ್ನ ಪಕ್ಕಕ್ಕೆ ಕುಳಿತು ಮೊಬೈಲ್ ಸ್ಕ್ರೋಲ್ ಮಾಡುತ್ತಾ ಇನ್ನೂ ಎಷ್ಟೊಂದು ಪೇಜ್ ಗಳನ್ನು ಹೇಳುವುದಿತ್ತು ಸಮಯ ಸಾಲಲಿಲ್ಲ ಎಂದು ಗೊಣಗಿದ. ಯಾಕಾದರೂ ಝಂಡು ಬಾಮ್ ಬಾಟಲಿ ಪರ್ಸಿನಲ್ಲಿ ಇಟ್ಟುಕೊಳ್ಳುವುದು ಮರೆತುಬಿಟ್ಟೆ ಎನಿಸಿತು. ಅದಾದ ನಂತರ ಮತ್ತೊಬ್ಬಳು ಮಾತನಾಡಿದರು. ಪುಣ್ಯ!!ಹತ್ತೆ ನಿಮಿಷಕ್ಕೆ ಮುಗಿಸಿದ್ದಕ್ಕೆ ಎಲ್ಲರೂ ಸೇರಿ ಒಟ್ಟಿಗೆ ನಿಟ್ಟುಸಿರಿನೊಟ್ಟಿಗೆ ಚಪ್ಪಾಳೆ ತಟ್ಟಿದರು. ಇನ್ನು ನನ್ನ ಸರದಿ! ಇನ್ನೇನು ನಾನು ಹೇಳಬೇಕಿತ್ತು ಭಾಷೆ ಎಂದರೆ ಸಂಕೇತ ಶಬ್ದ ಮುಖ ಭಾವ ಎಂದು… ಆದರೆ ನಾವು ವಿಶ್ವ ಮಾತೃಭಾಷೆ ಎಂದು ಏಕೆ ಆಚರಿಸುತ್ತೇವೆ ಇದಕ್ಕೆ ಕಾರಣವೇನು? ಪಿತೃ ಭಾಷೆ ಆಗಬಹುದಿತ್ತಲ್ಲವೇ!? ಏಕೆಂದರೆ, ಒಂದು ಮಗು ತೊಟ್ಟಿಲಲ್ಲಿ ಅಳುತ್ತಿರುತ್ತದೆ. ತಾಯಿ ಒಳಗೆ ಕೆಲಸ ಮಾಡುತ್ತಿರುತ್ತಾಳೆ ಅದು ಹಠಕ್ಕೆ ಬಿದ್ದು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಆಗ ತಂದೆ ರಮಿಸುತ್ತಾನೆ, ಮಗು ಸುಮ್ಮನಾಗುವುದಿಲ್ಲ , ಅಣ್ಣ ತಂಗಿ ಯಾರು ರಮಿಸಿದರೂ ಸುಮ್ಮನಾಗದ ಮಗು ಕೆಲಸದ ಗಡಿಬಿಡಿಯಲ್ಲಿ ಸೆರಗಿಗೆ ಕೈ ಒರಿಸಿಕೊಳ್ಳುತ್ತಾ , ತಾಯಿ ಬಂದು “ಹೋತು ಬಿಡು…ಏನಾತು? ಏನಾತು ನನ್ನ ಕಂದ!ಯಾರು?ಯಾರು?” ಎಂದು ಕಕ್ಕುಲಾತಿಯಿಂದ ಎತ್ತಿಕೊಳ್ಳುತ್ತಾಳೆ.ಆಗ ಮಗು ಸುಮ್ಮನೆ ಆಗುತ್ತದೆ. ಮಗುವಿಗೆ ಇಲ್ಲಿ ಶಬ್ದಗಳು ಗೊತ್ತಾ!? ಭಾವ ಗೊತ್ತಾ!? ಅದಕ್ಕೆ ಸಂಜ್ಞೆ ಮಾಡಲು ಬರುತ್ತಾ… ಇಲ್ಲ ಆದರೆ ತಾಯಿಯ ಭಾವ ಮಗುವಿನ ಹೃದಯವನ್ನು ತಲುಪುತ್ತದೆ….ಹೀಗೆ ಹೃದಯಕ್ಕೆ ಹತ್ತಿರವಾದ ಭಾವವನ್ನು ಯಾವದು ಹೊಮ್ಮಿಸುತ್ತದೆಯೋ ಅದೇ ನಮ್ಮ ಮಾತೃಭಾಷೆ. ಹಗಲಿಡೀ ಶಾಲೆ ಕಾಲೇಜುಗಳಲ್ಲಿ ಎಷ್ಟೇ ಇಂಗ್ಲಿಷ್ನಲ್ಲಿ ಓದಿರಬಹುದು, ಮಾತನಾಡಬಹುದು ಆದರೆ ಮಲಗಿದಾಗ ಕನಸು ಕಾಣುವುದು ಕನ್ನಡದಲ್ಲಿ!!ಹೀಗೆ ಮಾತೃ ಭಾಷೆ ಎಂಬುದು ನಮ್ಮ ಭಾವನೆಯ ಬೇರು. ಚೀನಾದವರು ಜಗತ್ತಿನಲ್ಲಿ ಮುಂಚೂಣಿಯಲಿ ಇರಲು ಕಾರಣ ಅವರು ಮಕ್ಕಳನ್ನು ಮಾತೃ ಭಾಷೆಯಲ್ಲಿ ಓದಿಸುತ್ತಾರೆ. ಅವರ ಯಾವುದೇ ವಸ್ತುಗಳನ್ನು ಕೊಂಡರು ಅದರ ಮೇಲೆ ಚೀನಾದ ಭಾಷೆಯಲ್ಲಿ ಬರಹಗಳಿರುತ್ತವೆ… ಹೀಗೆ ಒಂದಿಷ್ಟು ಉಪದೇಶ ನೀಡುತ್ತಾ ಒಂದು ದೃಷ್ಟಾಂತವನ್ನು ಹೇಳಿದೆ… ನಮ್ಮ ಮಾತೃ ಭಾಷೆ ಕನ್ನಡ! ಅದರ ಬೇರು ಆಳವಾಗಿ ಊರಿವೆ, ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಭಾಷೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಸಾಹುಕಾರ… ಆತ ಊರಿನ ಗೌಡ. ಅವನಿಗೆ ತನ್ನ ಮಗನಿಗೆ ಇಂಗ್ಲಿಷ್ ಕಲಿಸಬೇಕು ಎಂಬ ಆಸೆ. ಆದರೆ ಅವನ ಮಗ ಎಷ್ಟೇ ಪ್ರಯತ್ನಿಸಿದರು ಎ ಟು ಝೆಡ್ ವರ್ಣಮಾಲೆಯ ಹೊಸ್ತಿಲು ಮುಂದೆ ದಾಟಲು ಆಗಲೇ ಇಲ್ಲ..
ಆಗ ಹಂಪಿಯನ್ನು ನೋಡಲು ಅಮೆರಿಕಾದ ನಿವಾಸಿಯಾದ ಡೇವಿಡ್ ಎಂಬಾತನು ಬರುತ್ತಾನೆ. ಹಂಪಿ ಸಾಹುಕಾರನ ಊರಿಗೆ ಹತ್ತಿರ!! ಅವನಿಗೆ ಇಳಿದುಕೊಳ್ಳಲು ಊರಿನ ಗೌಡ ಎಲ್ಲ ವ್ಯವಸ್ಥೆ ಮಾಡುತ್ತಾನೆ. ಊಟ ತಿಂಡಿಯಿಂದ ಹಿಡಿದುಕೊಂಡು ತನ್ನ ಟೊಯೋಟಾ ಗಾಡಿಯಲ್ಲಿ ಹಂಪಿಯ ಮೂಲೆ ಮೂಲೆಯನ್ನು ತೋರಿಸುತ್ತಾನೆ..ಗೌಡನ ಅತಿಥಿ ಉಪಚಾರಕ್ಕೆ ಆ ವಿದೇಶಿಗನು ಋಣ ಭಾರಕ್ಕೆ ಮಣಿದು ಹೋಗುತ್ತಾನೆ. ತುಂಬಾ ವಿನೀತನಾಗಿ ತನ್ನ ಹರುಕು ಮುರುಕು ಕನ್ನಡದಲ್ಲಿ ಕೇಳುತ್ತಾನೆ..ನೀವು ನನಗೆ ತುಂಬಾ ಚಂದವಾಗಿ ಉಪಚಾರ ಮಾಡಿದಿರಿ ನನ್ನಿಂದ ಏನು ಸಹಾಯ ಬೇಕಾದರೂ ಹೇಳಿ ಎಂದು ಹೇಳುತ್ತಾನೆ. ಆಗ ಊರಿನ ಗೌಡ ಸಂತೋಷದಿಂದ “ನನ್ನ ಮಗ ಬಸವರಾಜುಗೆ ಇಂಗ್ಲಿಷ್ ಕಲಿಸಬೇಕಂತ ಬಹಳ ಆಸೆ ನೀವು ಅವನಿಗೆ ಹೆಂಗರ ಮಾಡಿ ಇಂಗ್ಲೀಷ್ ಕಲಸರಿ!”ಅಂತ ಕೇಳ್ಕೋತಾನೆ. ಆಗ ವಿಲಿಯಂ ಒಂದು ಉಪಾಯ ಮಾಡುತ್ತಾನೆ. ಅವನು ಇಲ್ಲೇ ಇದ್ದರೆ ಇಂಗ್ಲಿಷ್ ಕಲಿಯುವುದು ಅಸಾಧ್ಯ ನನ್ನೊಡನೆ ನಮ್ಮ ದೇಶಕ್ಕೆ ಬರಲಿ… ಅಲ್ಲಿ ಕನ್ನಡ ಮಾತನಾಡುವರು ಯಾರು ಇಲ್ಲ, ಆಗ ಅವನು ತಾನಾಗೆ ಇಂಗ್ಲಿಷ್ ಕಲಿಯುತ್ತಾನೆ ಎಂದು ಆಂಗ್ಲ ಮಿಶ್ರಿತ ಕನ್ನಡದಲ್ಲಿ ಹೇಳುತ್ತಾನೆ.ಈ ವಿಚಾರಕ್ಕೆ ಒಪ್ಪಿದ ಗೌಡರು ತನ್ನ ಮಗನಿಗೆ ಮೂರು ತಿಂಗಳು ವಿದೇಶಕ್ಕೆ ಕಳಿಸುತ್ತಾರೆ.ಮೂರು ತಿಂಗಳ ನಂತರ ಮಗ ಬಸವರಾಜ ತನ್ನ ಹಳ್ಳಿಗೆ ವಾಪಸ್ ಬರುತ್ತಾನೆ , ವಿದೇಶದಿಂದ ಬಂದ ಮಗನನ್ನು ಕಂಡು ಗೌಡರಿಗೆ ತುಂಬಾ ಖುಷಿ! ಇನ್ನು ಯಾರಾದರೊಡನೆ ಅವನು ಇಂಗ್ಲೀಷ್ ಮಾತನಾಡುವುದು ನೋಡಬೇಕು ಎಂಬ ಆಸೆ ಗೌಡರಿಗೆ!! ಈತ ಊರು ತಲುಪಿ ಸ್ವಲ್ಪ ಸಮಯವಾಗಿರುತ್ತದೆ. ಆಗ ಬಸವರಾಜನಿಗೆ ಡೇವಿಡ್ ನ ಫೋನ್ ಬರುತ್ತದೆ. ಗೌಡರು ಕೌತುಕದಿಂದ ಮಗ ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಕೇಳಲು ಕಾತುರರಾಗಿರುತ್ತಾರೆ. ಅವನ ಮುಂದೆ ಕುರ್ಚಿ ಹಾಕಿ ಕೂಡುತ್ತಾರೆ.
ಡೇವಿಡ್ ನ ಫೋನನ್ನು ಎತ್ತಿ ಬಸವರಾಜು ಹಲೋ ಎನ್ನುತ್ತಾನೆ…. ಆ ಕಡೆಯಿಂದ ಡೇವಿಡ್ “ಯಾಕ್ಲೆ ಯಾಕಲೇ ಬಸವರಾಜ್!?ಊರ್ ಮುಟ್ಟಿ ಎರಡು ತಾಸು ಆದ್ರು ಫೋನ್ ಮಾಡಕ್ss ಬರಂಗಿಲ್ಲ!?”ಅಂತ ಜವಾರಿ ಉತ್ತರ ಕನ್ನಡ ಭಾಷೆಯಲ್ಲಿ ಬೈಯುತ್ತಾನೆ ಹೀಗೆ ಬಸವರಾಜ್ ಇಂಗ್ಲಿಷ್ ಕಲಿಯುವುದಿಲ್ಲ.. ಬದಲಾಗಿ ಅಲ್ಲಿ ಹೋಗಿ ಅವರಿಗೆ ಕನ್ನಡ ಕಲಿಸಿ ಬಂದಿರುತ್ತಾನೆ. ಹೀಗೆ ಜವಾರಿ ಕನ್ನಡ ಭಾಷೆಯ ಬೇರುಗಳು ಆಳವಾಗಿವೆ.
ಬೇಸತ್ತ ಮಕ್ಕಳು ಒಂದಿಷ್ಟು ನಗೆಯನ್ನು ಚೆಲ್ಲಿ ಚಪ್ಪಾಳೆ ಬಾರಿಸಿದವು. ಸಿಡಿಯುವ ತಲೆಯನ್ನು ತುದಿಬೆರಳಲ್ಲೇ ಹಿಡಿದುಕೊಂಡು ಬಂದು ಕುರ್ಚಿ ಮೇಲೆ ಕೂತೆ…ಸಹಜ ವಂದನಾರ್ಪಣೆ ಮುಗಿದು ಕಾರ್ಯಕ್ರಮ ಮುಕ್ತಾಯವಾಯಿತು.ಬರುವಾಗ ಇರುವಷ್ಟೇ ಅವಸರ ಮನೆಗೆ ಹೋಗಲು ಇತ್ತು. ಮಾತಿನಲಿ ಲಘುತ್ವದ ಹಾಸ್ಯ ಇರಲಿ ಎಂದೇ ನಂಬಿದವಳಾದರೂ ದೇಹದಲಿ ಸ್ಥೂಲ ,ಜಡತ್ವದ ಹೆಜ್ಜೆ ಇಡುತ್ತಲೇ ಸಾಗಿದೆ. ಕೆಲವು ವಿದ್ಯಾರ್ಥಿಗಳು ಕೈ ಕುಲಕಿ ನಕ್ಕರು… ಕಾಲೇಜಿನ ಕಾರಿಡಾರಿನ ತುದಿಯವರೆಗೆ ನಡೆಯುತ್ತಲೇ ಸಾಗಿ ಬಂದವಳು ಅಲ್ಲೊಂದು ಬಿಎಡ್ ಪ್ರಶಿಕ್ಷಣಾರ್ಥಿ ನಿಂತಿದ್ದ… ಹಾಗೆ ತುಸು ದೊಡ್ಡವನೇ ಇದ್ದ.. ನನ್ನನ್ನು ನೋಡಿ ನಕ್ಕ…ನಾನು ಪ್ರತಿಯಾಗಿ ನಕ್ಕೆ! ಚಂದ ಮಾತಾಡಿದ್ರೆ ಮೇಡಂ..ಅಂದ. ನಾನು ಥ್ಯಾಂಕ್ಸ್ ಅಂದೆ. , ಕ್ಷಣ ತಡೆದು “ನಿಮ್ಮನ್ನು ನೋಡಿದರೆ ನಮ್ಮ ನನಗೆ ಅಮ್ಮನ ನೆನಪು ಬಂತು “ಅಂದ… ಹೇಳಿದೆನಲ್ಲ ಹಾಸ್ಯದ ಲಘುತಮಕ್ಕೆ ಜೋತು ಬಿದ್ದವಳು ತಕ್ಷಣ ತಮಾಷೆಗೆಂದು ತಲೆಯನ್ನು ಸವರಿಕೊಂಡು…”ನನ್ನ ನೋಡಿದರೆ ಅಮ್ಮನನ್ನು ನೋಡಿದಂತೆ ಆಯ್ತಾ!?ಅಷ್ಟು ವಯಸ್ಸಾದವಳ ಹಾಗೆ ಕಾಣುತ್ತೇನಾ ನಾನು!?” ಎಂದು ನಗುತ್ತಾ ಕೇಳಿದೆ. ಆದರೆ ಆ ಯುವಕ ಮಾತ್ರ ಅದೇ ಗಂಭೀರ ಭಾವದಿಂದ ಮುಖದಲ್ಲಿ ಯಾವ ಬದಲಾವಣೆ ಇಲ್ಲದೆ ದೃಢತ್ವದಿಂದ “ಇಲ್ಲ ಮೇಡಂ ನಿಮಗೆ ವಯಸ್ಸಾಗಿಲ್ಲ!! ಆದರೆ ನಾನು ಸಣ್ಣವನಿದ್ದಾಗಲೇ ನಮ್ಮ ಅಮ್ಮನನ್ನು ಕಳೆದುಕೊಂಡುಬಿಟ್ಟೆ .
ಬಹುಶಃ ನಾನು 5ನೇ ತರಗತಿಯಲ್ಲಿರಬಹುದು, ಆಗ ಅಮ್ಮನ ಕೊನೆಯ ಬಾರಿ ನೋಡಿದ ನೆನಪು… ನೀವು ಮಾತನಾಡುವಾಗ ನನಗೆ ಅಮ್ಮನದೇ ನೆನಪು ಬಂತು.ಅವಳು ನಿಮ್ಮ ಹಾಗೆ ಇದ್ದಂತೆ ನೋಡಿದ ಹಳೇ…ನೆನಪು..ಮಸುಕು… ಮಸುಕು!!” ನನ್ನ ಹಾಸ್ಯವೆಲ್ಲ ಕ್ಷಣಾರ್ಧದಲ್ಲಿ ಕರಗಿ ” ಐ ಯಾಮ್ ಸಾರಿ!!” ಅಂದೆ ಗೊತ್ತು ಇದು ಇಂಗ್ಲೀಷ್ ಔಪಚಾರಿಕ ಪ. ಕೆಲವು ಆಳವಾದ ನೋವುಗಳಿಗೆ ಸಾಂತ್ವನದ ಪದಗಳು ಇರುವುದೇ ಇಲ್ಲ!! ಅನುಭವಿಸಿದ ಸಂಕಟ ಅವರಿಗೆ ಗೊತ್ತು…. ಮುಖವೆತ್ತಿ ನೋಡಬೇಕೆಂದರು ಕಣ್ಣೆಲ್ಲ ಮಸುಕು ಮಸುಕು ಚೌಕಾಶಿ ಮಾಡದೆ ಆಟೋ ಹತ್ತಿ ಕುಳಿತು ಮನೆಗೆಬಂದೆ.

ಸಾಕ್ಷಿ ಶ್ರೀಕಾಂತ ತಿಕೋಟಿಕರ.








