ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಅವರು, ನೇಮಕಾತಿ ಪ್ರಕ್ರಿಯೆಗೆ ಇದ್ದ ಎಲ್ಲ ತೊಡಕುಗಳು ನಿವಾರಣೆಯಾಗಿದ್ದು, ಎಲ್ಲಾ ಇಲಾಖೆಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ
ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ವಿವಿಧ ಕ್ಷೇತ್ರಗಳ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿ, ಕರ್ನಾಟಕದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕೌಶಲ ತರಬೇತಿ ನೀಡಲು ಮೂರು ಸಚಿವರ ಸಮಿತಿಯನ್ನೂ ರಚಿಸಲಾಗಿದೆ.
ಬಿ ಖಾತಾದಾರರಿಗೆ ಎ ಖಾತಾ ಅವಕಾಶ
‘ಬಿ’ ಖಾತಾ ಹೊಂದಿರುವವರು ‘ಎ’ ಖಾತಾ ಪಡೆಯಲು ರಾಜ್ಯದ ಗ್ರಾಮ ಪಂಚಾಯಿತಿಯಿಂದ ಮಹಾನಗರ ಪಾಲಿಕೆಗಳವರೆಗೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ 2,500 ಚದರ ಅಡಿ ಒಳಗಿನ ಕಟ್ಟಡಗಳಿಗೆ ಒಮ್ಮೆ ಮಾತ್ರ ಒಸಿ ಮತ್ತು ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಹೊಸದಾಗಿ ₹2,000 ಕೋಟಿ ಅನುದಾನ ನೀಡಲಾಗುವುದು. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಂ ಹೇಳಿದರು.
“ಮುಖ್ಯಮಂತ್ರಿ ಕುರ್ಚಿ ನನ್ನದೇ ಅಲ್ಲ, ಅದು ಜನರದ್ದು. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ರೈತರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯದ ಜನರ ವಿಶ್ವಾಸ ಉಳಿಸಿಕೊಂಡು ಉತ್ತಮ ಆಡಳಿತ ನೀಡುವುದು ತಮ್ಮ ಮುಖ್ಯ ಗುರಿ ಎಂದು ಅವರು ತಿಳಿಸಿದರು.








