ಸೃಜನಶೀಲತೆ ಎಂಬುದು ಕೇವಲ ಸುಖದ ಸುಪ್ಪತ್ತಿಗೆಯಲ್ಲಿ ಅರಳುವ ಹೂವಲ್ಲ; ಅದು ಕೊರತೆ ಮತ್ತು ನೋವಿನ ಬೆಂಕಿಯಲ್ಲಿ ಅರಳುವ ಕೆಂದಾವರೆ. ಸುಮಾರು ನಾಲ್ಕು ಶತಮಾನಗಳ ಹಿಂದೆ,ಕವಿ ಸರ್ ಜಾನ್ ಹ್ಯಾರಿಂಗ್ಟನ್ ಅರಮನೆಯ ಅನೈರ್ಮಲ್ಯದಿಂದ ಕಂಗೆಟ್ಟಿದ್ದರು.ಆದರೆ ಅವರು ಆ ಪರಿಸ್ಥಿತಿಯನ್ನು ಕಂಡು ಕೇವಲ ಮೂಗು ಮುಚ್ಚಿ ಕೂರಲಿಲ್ಲ. ತಮ್ಮ ಕಾವ್ಯದ ಲೇಖನಿಯನ್ನು ಬದಿಗಿಟ್ಟು, ತಾಂತ್ರಿಕ ಕುತೂಹಲವನ್ನು ಕೈಗೆತ್ತಿಕೊಂಡರು.ಅದರ ಫಲವಾಗಿ ಅವರು ವಾಟರ್ ಕ್ಲೋಸೆಟ್ (ಕಮೋಡ್) ಅನ್ನು ಕಂಡುಹಿಡಿದರು.
ಯಾತನೆಯ ಹಾದಿಯಲ್ಲಿ ಯೋಗಕ್ಷೇಮದ ದಾರಿ ಹುಡುಕಿದ ಅವರ ಈ ಆವಿಷ್ಕಾರವೇ ಇಂದು ಕಾಲು ನೋವಿನಿಂದ ಬಳಲುವ ಕೋಟ್ಯಂತರ ವಯಸ್ಕರಿಗೆ ಕುಳಿತುಕೊಳ್ಳುವ ಸೌಲಭ್ಯ ನೀಡಿ,ಗೌರವಯುತ ಬದುಕನ್ನು ಉಡುಗೊರೆಯಾಗಿ ನೀಡಿದೆ.ಇತಿಹಾಸದ ಈ ರೋಚಕ ಪುಟ ನಮಗೆ ಕಲಿಸುವ ಪಾಠವೆಂದರೆ, ಸಮಸ್ಯೆಗಳೇ ಸಂಶೋಧನೆಯ ಗರ್ಭಗುಡಿ.
ದುರದೃಷ್ಟವಶಾತ್,ಇಂದಿನ ಯುವಶಕ್ತಿ ಸ್ಮಾರ್ಟ್‌ಫೋನ್‌ಗಳ ಮಾಯಾಲೋಕದಲ್ಲಿ ಸಿಲುಕಿ, ಅಡೆತಡೆಗಳು ಎದುರಾದಾಗ ದಾರಿ ಹುಡುಕುವ ಬದಲು ದಿಕ್ಕು ತಪ್ಪುತ್ತಿದೆ. ಕಾಲಹರಣದ ವ್ಯಸನಗಳು ನಮ್ಮೊಳಗಿನ ಜ್ಞಾನದ ದೀಪವನ್ನು ಆರಿಸುತ್ತಿವೆ. ನೆನಪಿಡಿ, ಹ್ಯಾರಿಂಗ್ಟನ್ ಅಂದು ಕೇವಲ ದೂರು ನೀಡುತ್ತಾ ಕುಳಿತಿದ್ದರೆ, ಇಂದು ಮಾನವನ ಮೂಲಭೂತ ಅಗತ್ಯವೊಂದು ಈ ಘನತೆಯನ್ನು ಪಡೆಯುತ್ತಿರಲಿಲ್ಲ. ನಿಮ್ಮ ಸುತ್ತಲಿರುವ ಅನಾನುಕೂಲಗಳನ್ನೇ ಸವಾಲಾಗಿ ಸ್ವೀಕರಿಸಿ; ಏಕೆಂದರೆ ಜಗತ್ತು ನಿಮ್ಮ ಮೌನಕ್ಕೆ ಬೆಲೆ ನೀಡುವುದಿಲ್ಲ, ನಿಮ್ಮ ಕ್ರಿಯಾಶೀಲತೆಗೆ ಮಾತ್ರ ತಲೆಬಾಗುತ್ತದೆ.
ರಣಹೇಡಿಗಳಂತೆ ಸಂಕಷ್ಟಗಳಿಂದ ಪಲಾಯನ ಮಾಡುವ ಬದಲು, ಹ್ಯಾರಿಂಗ್ಟನ್ ಅವರಂತೆ ಸಮಾಜದ ಯಾತನೆಗೆ ಮದ್ದಾಗುವ ಕನಸು ಕಾಣಿ. ನಿಮ್ಮಲ್ಲಿರುವ ಅಪ್ರತಿಮ ಸಾಮರ್ಥ್ಯವನ್ನು ವ್ಯರ್ಥ ಮಾಡದೆ, ಸೃಜನಶೀಲತೆಯ ಹಾದಿಯಲ್ಲಿ ನಡೆಯಿರಿ. ನಿಮ್ಮ ಒಂದು ಸಣ್ಣ ಸಕಾರಾತ್ಮಕ ಬದಲಾವಣೆ ಇನ್ನೊಬ್ಬರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಲಿ. ಈ ಮೊಬೈಲ್ ಮತ್ತು ವ್ಯರ್ಥ ಹರಟೆಗಳು ನೀಡುವ ತಾತ್ಕಾಲಿಕ ಸುಖಕ್ಕಿಂತ, ಒಂದು ಉಪಯುಕ್ತ ಆವಿಷ್ಕಾರ ನೀಡುವ ತೃಪ್ತಿ ದೊಡ್ಡದು. ಇಂದೇ ಎದ್ದೇಳಿ, ಸವಾಲುಗಳನ್ನು ಸ್ವಾಗತಿಸಿ, ನಿಮ್ಮ ಯಶಸ್ಸಿನ ಕಾವ್ಯವನ್ನು ನೀವೇ ಬರೆಯಲು ಆರಂಭಿಸಿ.

-ಡಾ.ಸುಧಾಕರ.ಜಿ.ಲಕ್ಕವಳ್ಳಿ.



