ಮೈಸೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ದ ಕರ್ನಾಟಕ ಸೇನಾಪಡೆವತಿಯಿಂದ ಮೈಸೂರಿನ ಹಳೆ ಜಿಲ್ಲಾಧಿಕಾರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ, ಸ್ವತಂತ್ರ ಲಿಪಿ ಹೊಂದಿರುವ, ಶಾಸೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ.
ಕೋಟ್ಯಾಂತರ ಕನ್ನಡಿಗರ ಜೀವನಾಡಿ ಆಗಿರುವ ಹೆಮ್ಮೆಯ ಕನ್ನಡ ಭಾಷೆಗೆ ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಗೆ ಅವಮಾನಿಸಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ನಮ್ಮ ಕನ್ನಡ ಭಾಷೆಯಲ್ಲಿ 52 ಅಕ್ಷರಗಳಿವೆ. ಆದರೆ ತಮಿಳು ಭಾಷೆಯಲ್ಲಿ ಬರೀ 18 ಅಕ್ಷರಗಳಿವೆ. ಕನ್ನಡದ ಬಗ್ಗೆ ಅರಿಯದ, ಭಾಷೆಗಳ ಬಗ್ಗೆ ಜ್ಞಾನ ಇಲ್ಲದ ಕಮಲಹಾಸನ್ ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕನ್ನಡ ಭಾಷೆ ದೇಶದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಬಹುಶಃ ಸಂಸ್ಕೃತ ಬಿಟ್ಟರೆ ಕನ್ನಡ ಭಾಷೆ ಬಹಳ ಪ್ರಾಚೀನ ಭಾಷೆ ಅದಕ್ಕಾಗಿ ನಮ್ಮ ಕನ್ನಡಕ್ಕೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ, ಇತ್ತೀಚೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಹ ನಮ್ಮ ಕನ್ನಡಕ್ಕೆ ಸಿಕ್ಕಿದೆ ಎಂಬುವುದನ್ನು ಕಮಲಹಾಸನ್ ಅರಿಯಬೇಕಿದೆ ಎಂದು ಕಿಡಿಕಾರಿದರು.
ಈ ಕೂಡಲೇ ಕಮಲ್ ಹಾಸನ್ ಕನ್ನಡಿಗರ ಹಾಗೂ ಕನ್ನಡ ಭಾಷೆಯ ಬಗ್ಗೆ ಕ್ಷಮೆಯನ್ನು ಕೋರಬೇಕು. ಇಲ್ಲವಾದ ಪಕ್ಷದಲ್ಲಿ ಮುಂದಿನ ವಾರ ತೆರೆ ಕಾಣಲಿರುವ ಅವರ ಸಿನಿಮಾವನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಿ ಬಿಡುಗಡೆಯಾಗದಂತೆ ತಡೆ ಹಿಡಿಯುತ್ತೇವೆಂದು ಎಚ್ಚರಿಕೆ ನೀಡಿದರು.ಇದನ್ನು ಓದಿ –ಯಾರು ಅಂತಹ ಹೇಳಿಕೆ ಕೊಡಬಾರದು: ಬಿ.ಎಸ್.ಯಡಿಯೂರಪ್ಪ
ಪ್ರತಿಭಟನೆಯಲ್ಲಿ ಗೋಲ್ಡ್ ಸುರೇಶ್, ಪ್ರಭುಶಂಕರ, ನೇಹಾ, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಗಿರೀಶ್ ಹೆಚ್, ಸಿಂಧುವಳ್ಳಿ ಶಿವಕುಮಾರ್, ತಾಯೂರ್ ಗಣೇಶ್, ಹನುಮಂತಯ್ಯ, ಮೂರ್ತಿ ಲಿಂಗಯ್ಯ, ದರ್ಶನ್ ಗೌಡ, ವರಕೂಡು ಕೃಷ್ಣೇಗೌಡ,ರವೀಶ್, ಪ್ರಭಾರ್ಕ , ನಾಗರಾಜ್ ರ್ಚಾ, ಶಿವರಾಂ ಗೌಡ, ರಘು ಅರಸ್, ಎಳನೀರು ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.