ಬೆಂಗಳೂರು: ಹೋಟೆಲ್‌ಗಳಲ್ಲಿನ ಆಹಾರ ಗುಣಮಟ್ಟದ ತಪಾಸಣೆ ಬಳಿಕ ಇದೀಗ ಹಾಸ್ಟೆಲ್‌ಗಳು ಹಾಗೂ ಪಿಜಿಗಳಲ್ಲೂ ಆಹಾರ ತಪಾಸಣೆ ನಡೆಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ತಪಾಸಣೆ ವೇಳೆ ಆಹಾರ ಪದಾರ್ಥಗಳ ಗುಣಮಟ್ಟ, ಅಡುಗೆ ಸ್ಥಳದ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ವಿಧಾನ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುವುದು. ಪಿಜಿಗಳಲ್ಲಿಯೂ ಆಹಾರ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಇದರ ಜತೆಗೆ ಕ್ಯಾಂಟೀನ್‌ಗಳಲ್ಲಿಯೂ ಆಹಾರದ ಗುಣಮಟ್ಟ ಪರಿಶೀಲನೆ ನಡೆಯಲಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಧಿಕಾರಿಗಳು ಈ ಕುರಿತು ಎಚ್ಚರಿಕೆ ವಹಿಸಿ ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿದೆ.
“ಎಲ್ಲಾ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿ ಆಹಾರ ತಪಾಸಣೆ ಮಾಡಿಸುತ್ತೇವೆ. ಕ್ಯಾಂಟೀನ್‌ಗಳಲ್ಲಿಯೂ ತಪಾಸಣೆ ನಡೆಯಲಿದೆ. ಬೆಂಗಳೂರು ಕೇಂದ್ರದಲ್ಲಿ ದಾಳಿ ನಡೆಯುತ್ತಿರುವಂತೆ ಜಿಲ್ಲಾ ಕೇಂದ್ರಗಳಲ್ಲಿಯೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು,” ಎಂದು ಯು.ಟಿ. ಖಾದರ್ ಹೇಳಿದರು.
ಹಾಸ್ಟೆಲ್, ಪಿಜಿ ಹಾಗೂ ಇತರ ಆಹಾರ ಸೇವಾ ಕೇಂದ್ರಗಳಿಗೆ ಬರುವ ಜನರಿಗೆ ಗುಣಮಟ್ಟದ ಆಹಾರ ನೀಡಬೇಕು. ಹಣ ಪಾವತಿಸುವ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡದೆ ಮೋಸ ಮಾಡಬಾರದು ಎಂದು ಸಚಿವರು ಎಚ್ಚರಿಕೆ ನೀಡಿದರು.ಇದನ್ನು ಓದಿ –ಇಂದಿನಿಂದ ಮುಂಗಾರು ಅಧಿವೇಶನ; ಸರ್ಕಾರಕ್ಕೆ ಸವಾಲೊಡ್ಡಲು ವಿಪಕ್ಷಗಳ ಸಜ್ಜು
ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.








