ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ.
ಮೊದಲ ಅಧಿವೇಶನದಲ್ಲೇ ಹಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ತಂತ್ರ ರೂಪಿಸಿವೆ.
ವಾಲ್ಮೀಕಿ ನಿಗಮದ ಹಣಕಾಸು ಅಕ್ರಮ ಪ್ರಕರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ಸದನದಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರ ಪಡೆಯಲು ವಿಪಕ್ಷಗಳು ಸಿದ್ಧತೆ ನಡೆಸಿವೆ.
ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವೂ ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ರೈತರ ಸಮಸ್ಯೆಗಳು, ಮಳೆ ಕೊರತೆ, ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಸೇರಿದಂತೆ ಕೃಷಿ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಮುಂದಾಗಿವೆ. ಬೆಳೆಹಾನಿಗೆ ಸಮರ್ಪಕ ಪರಿಹಾರ ನೀಡಿಲ್ಲ ಎಂಬ ಆರೋಪವನ್ನೂ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಕಾನೂನು ಸುವ್ಯವಸ್ಥೆ ವಿಚಾರವೂ ಪ್ರತಿಧ್ವನಿಸುವ ಸಾಧ್ಯತೆ
ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರದಲ್ಲೂ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿ-ಜೆಡಿಎಸ್ ಸಿದ್ಧವಾಗಿವೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ವಿಪಕ್ಷಗಳು ವಾಗ್ದಾಳಿ ನಡೆಸುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ನಡೆದಿರುವ ಅಪರಾಧ ಪ್ರಕರಣಗಳು ಹಾಗೂ ಕಾನೂನು ಸುವ್ಯವಸ್ಥೆಯ ಕುರಿತು ಸರ್ಕಾರದಿಂದ ಉತ್ತರ ಪಡೆಯಲು ಮುಂದಾಗಲಿವೆ.
ಪಶುವೈದ್ಯರ ನೇಮಕಾತಿಯಲ್ಲಿ ಕೆಪಿಎಸ್‌ಸಿ ಅಕ್ರಮ ನಡೆದಿದೆ ಎಂಬ ಆರೋಪವೂ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ಇದರ ಜತೆಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಫಲಾನುಭವಿಗಳಿಗೆ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬ ಬಗ್ಗೆಯೂ ಸರ್ಕಾರವನ್ನು ಪ್ರಶ್ನಿಸಲು ವಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.
ಅನುದಾನ ತಾರತಮ್ಯದ ಆರೋಪ
ಬಿಜೆಪಿ-ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನೂ ಸದನದಲ್ಲಿ ಪ್ರಸ್ತಾಪಿಸಲು ಮೈತ್ರಿಕೂಟದ ಶಾಸಕರು ಮುಂದಾಗಿದ್ದಾರೆ. ಕ್ಷೇತ್ರವಾರು ಅನುದಾನದ ಕೊರತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.ಇದನ್ನು ಓದಿ –ಬಂದ್‌ಗೂ ಮುನ್ನವೇ ವಾಟಾಳ್ ನಾಗರಾಜ್ ವಶಕ್ಕೆ
ಒಟ್ಟಾರೆ, ವಾಲ್ಮೀಕಿ ನಿಗಮದ ಹಣಕಾಸು ಅಕ್ರಮ ಪ್ರಕರಣದಿಂದ ಹಿಡಿದು ರೈತರ ಸಮಸ್ಯೆಗಳು, ಕಾನೂನು ಸುವ್ಯವಸ್ಥೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಆರೋಪ, ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಅನುದಾನ ತಾರತಮ್ಯದವರೆಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ.








