ಮಂಡ್ಯ: ಕೆಆರ್ಎಸ್ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಸ್ನಾನಘಟ್ಟ, ಸಂಗಮ, ನಿಮಿಷಾಂಭ ದೇಗುಲ ಮತ್ತು ಘೋಸಾಯ್ ಘಾಟ್ ಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಇದೆಲ್ಲದೊಂದಿಗೆ, ನದಿ ಪಾತ್ರದಲ್ಲಿ ನಡೆಯುವ ಪಿಂಡ ಪ್ರಧಾನ ಪೂಜೆ ಹಾಗೂ ಇತರ ಧಾರ್ಮಿಕ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಕಾನೂನು ಉಲ್ಲಂಘನೆಯು ಸಂಭವಿಸಿದರೆ ತಕ್ಷಣ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.ಇದನ್ನು ಓದಿ –ಮಂಡ್ಯ: ವಿವಾಹಿತ ಪ್ರೇಯಸಿ ಕೊಲೆ-ಯುವಕನ ಬಂಧನ
ಸಾರ್ವಜನಿಕರು ನದಿ ಪಾತ್ರದತ್ತ ಹೋಗದಂತೆ ಎಚ್ಚರಿಕೆ ನೀಡಲಾಗಿದೆ ಹಾಗೂ ತಾತ್ಕಾಲಿಕ ನಿರ್ಬಂಧಗಳನ್ನು ಪಾಲಿಸಬೇಕೆಂದು ಪ್ರಾಧಿಕಾರಗಳು ವಿನಂತಿಸಿವೆ.