ಮಂಡ್ಯ: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ನಡುವೆಯೇ, ಇಂದಿನಿಂದ ಮಂಡ್ಯದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೂ ಚಾಲನೆ ದೊರಕಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಉತ್ಸವವನ್ನು ನಟ-ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಮಧ್ಯಾಹ್ನ 2:30ರಿಂದ 3 ಗಂಟೆಯ ಶುಭಲಗ್ನದಲ್ಲಿ ಉದ್ಘಾಟಿಸಿದರು. ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೂ ಆರಂಭವಾಯಿತು.
ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಮೈಸೂರು ದಸರಾಕ್ಕೆ ಭಾಗಿಯಾದ ಮಹೇಂದ್ರ ಆನೆ ಅಂಬಾರಿ ಹೊತ್ತು ಹೆಜ್ಜೆ ಹಾಕಿತು. ಬನ್ನಿ ಮಂಟಪದಿಂದ ಆರಂಭವಾದ ಮೆರವಣಿಗೆ ಶ್ರೀರಂಗನಾಥ ದೇವಾಲಯದವರೆಗೆ ಸಾಗಿತು.
ಮೆರವಣಿಗೆಯಲ್ಲಿ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಮತ್ತು ಸ್ತಬ್ಧ ಚಿತ್ರಗಳು ವಿಶೇಷ ಆಕರ್ಷಣೆಯಾಗಿ ಜನರನ್ನು ಕಣ್ತುಂಬಿಸಿತು.ಇದನ್ನು ಓದಿ –ನಾಳೆ ಮೈಸೂರಿನಲ್ಲಿ ಸಾಹಿತ್ಯ ಲೋಕದ ದಿಗ್ಗಜ ಡಾ. ಎಸ್.ಎಲ್. ಭೈರಪ್ಪ ನವರ ಅಂತ್ಯಕ್ರಿಯೆ
ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.








