ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮಳೆರಾಯನ ಆರ್ಭಟ ಇದೀಗ ಮತ್ತೆ ಚುರುಕು ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 26) ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಮುಂದಿನ ದಿನಗಳಲ್ಲಿಯೂ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾವ ಜಿಲ್ಲೆಗಳಿಗೆ ಎಚ್ಚರಿಕೆ?
ರಾಜ್ಯಾದ್ಯಂತ ಸೆಪ್ಟೆಂಬರ್ ಅಂತ್ಯದವರೆಗೂ ಮಳೆಯ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯೆಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು:
- ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ
- ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ
- ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ
- ಚಿಕ್ಕಮಗಳೂರು, ಶಿವಮೊಗ್ಗ, ವಿಜಯನಗರ
ಇದೇ ವೇಳೆ ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಗದಗ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮಳೆಯ ಪರಿಣಾಮ
ಈಗಾಗಲೇ ಹಲವೆಡೆ ಭಾರೀ ಮಳೆಯ ಪರಿಣಾಮವಾಗಿ ಕೆರೆ-ಕಟ್ಟೆಗಳು ಮತ್ತು ನದಿಗಳು ಅಪಾಯದ ಮಟ್ಟ ಮೀರಿ ಹರಿದು ಅವಾಂತರಗಳಿಗೆ ಕಾರಣವಾಗಿದ್ದು, ಅತಿವೃಷ್ಟಿಯಿಂದ ಕೆಲವು ಕಡೆ ಬೆಳೆಗಳು ಜಲಾವೃತಗೊಂಡಿದ್ದರೆ, ಇನ್ನೊಂದೆಡೆ ಸಮರ್ಪಕ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಜೂನ್ ಆರಂಭದಲ್ಲೇ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿದಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮಳೆ ಕಡಿಮೆಯಾಗಿದ್ದರೂ, ಈಗ ಮತ್ತೆ ಮಳೆರಾಯ ತನ್ನ ಅಬ್ಬರವನ್ನು ಮುಂದುವರಿಸಿದ್ದಾನೆ.ಇದನ್ನು ಓದಿ –ಅಮೆರಿಕದಲ್ಲಿ ಟ್ರಂಪ್‌ನ ಹೊಸ ಸುಂಕ ನೀತಿ ಘೋಷಣೆ
ಹವಾಮಾನ ಇಲಾಖೆ ಸೂಚನೆಯಂತೆ, ಮುಂದಿನ ಎರಡು ದಿನಗಳ ಕಾಲ ಜನರು ಎಚ್ಚರಿಕೆಯಿಂದಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.








