- ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ತಂಡ
ದುಬೈ: ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತೀಯ ಕ್ರಿಕೆಟ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದು, ಬಿಸಿಸಿಐ (BCCI) ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಒಟ್ಟು 21 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿಂದ ಚಾಂಪಿಯನ್ ತಂಡಕ್ಕೆ 2.6 ಕೋಟಿ ರೂ. ಬಹುಮಾನ ನೀಡಲಾಯಿತು. ರನ್ನರ್‌ಅಪ್ ಆದ ಪಾಕಿಸ್ತಾನ ತಂಡಕ್ಕೆ ಕೇವಲ 1.3 ಕೋಟಿ ರೂ. ಸಿಕ್ಕಿದೆ.
ಆದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪ್ರತೀಕ್ಷಿತ ಡ್ರಾಮಾ ನಡೆಯಿತು. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಪರಿಣಾಮ, ವಿಜೇತರಿಗೆ ಟ್ರೋಫಿ ನೀಡಲಾಗಲಿಲ್ಲ.
ಟ್ರೋಫಿಯನ್ನು ಹಸ್ತಾಂತರಿಸಬೇಕಿದ್ದವರು ಏಸಿಸಿ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ. ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿ ಹಿಂದೆ ಸರಿಯಿತು.
ಭಾನುವಾರ ರಾತ್ರಿ ನಡೆದ ಹೈವೋಲ್ಟೇಜ್ ಫೈನಲ್‌ನಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಆಟಗಾರರು ಸುಮಾರು 15 ಗಜ ದೂರದಲ್ಲೇ ನಿಂತು, ಮುಂದೆ ಬರಲಿಲ್ಲ.
ಈ ಘಟನೆಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಯಿತು. ಕ್ರೀಡಾಂಗಣದಲ್ಲಿ ಇದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು.
ಟ್ರೋಫಿ ಸ್ವೀಕರಿಸದೆ ವಿಜಯೋತ್ಸವ ಆಚರಿಸಿದ ಭಾರತೀಯ ತಂಡದ ಈ ನಿರ್ಧಾರ ಕ್ರೀಡಾ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.








