ಬೆಂಗಳೂರು: ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಮಧ್ಯಾಹ್ನದ ನಂತರ ಕೆಲವೆಡೆ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದ್ದು, ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ಮುನ್ಸೂಚನೆ ತಿಳಿಸಿದೆ.
ಹಗುರದಿಂದ ಸಾಧಾರಣ ಮಳೆಯೊಂದಿಗೆ ಗಾಳಿ-ಮಿಂಚಿನ ಅಬ್ಬರ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ದಕ್ಷಿಣ ಮಾಗಡಿ ಪ್ರದೇಶದಲ್ಲಿ ಗರಿಷ್ಠ 77 ಮಿ.ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ.








