ಒಂದಾನೊಂದು ಕಾಲದಲ್ಲಿ ಸಮಾಜದಲ್ಲಿ ‘ಡೈವೋರ್ಸ್’ ಅನ್ನುವ ಪದ ಕೇಳಿದರೆ, ಸಹಜವಾಗಿದ್ದ ಮುಖದಲ್ಲಿ ಗಂಭೀರತೆ, ಕಣ್ಣಲ್ಲಿ ಧಾರಾಕಾರ ಕಣ್ಣೀರು, ಬದುಕಿಯೂ ಸತ್ತಂಥ ಭಾವನೆ, ಜೀವನದಲ್ಲಿ ಮುಂದೇನೂ? ಎನ್ನುವ ಗಾಢಾಂಧಕಾರ ಕಂಡಂಥ ಭಯ! ಕಾರ್ಮೋಡ ಕವಿದಂಥಾ ಮನಸ್ಸು, ಜೀವನ ಮುಗಿದೇ ಹೋಯಿತೇನೋ ಎನ್ನುವಂತಾ ಭೀತಿ, ಮಕ್ಕಳ ಕತೆ ಹೇಗೆ? ಅವರನ್ನು ಜೋಪಾನ ಮಾಡುವುದು ಹೇಗೇ? ಎನ್ನುವ ನೂರಾರು ಚಿಂತೆಗಳು ವಿಚ್ಛೇದನಕ್ಕೆ ನಿಂತ ದಂಪತಿಗಳನ್ನ ಹಿಂಡಿ ಕುಗ್ಗಿಸುತ್ತಿದ್ದವು. ಆದರೆ, ಅದೇನೋ ಗೊತ್ತಿಲ್ರೀ. ಇಂದಿನ ಪೀಳಿಗೆ ಎಲ್ಲ ವಿಚಾರಗಳಲ್ಲೂ ಸಕಾರಾತ್ಮಕತೆ ಹುಡುಕಿ, ಆ ಸಂತಾಪದಲ್ಲೂ ಸಡಗರ ಕಾಣುವ ದೃಷ್ಟಿಕೋನವೋ, ಅಥವಾ ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಫಿಲಾಸಫಿಯೋ, ಒಟ್ಟಿನಲ್ಲಿ ದಾಂಪತ್ಯದ ಬ್ರೇಕಪ್ ವಿಚ್ಛೇದನವನ್ನೂ ಕೂಡಾ ಫೋಟೋಶೂಟ್ ಸಂಭ್ರಮಿಸುವ ಕರ್ಮಕಾಂಡದ ಕಾಲ ಈಗ ಬಂದಿದೆ!
ಈ ಕಾಲದಲ್ಲಿ ಮದುವೆ, ಜನ್ಮದಿನ, ನಾಮಕರಣ, ಗರ್ಭಧಾರಣೆ, ಹಬ್ಬ – ಏನಾದರೂ ಕಾರ್ಯಕ್ರಮವಿರಲಿ, ಫೋಟೋಶೂಟ್ ಇಲ್ಲದಿದ್ದರೆ,ಆ ಸಂಭ್ರಮ ಶೂನ್ಯವೇ ಸರಿ!ಕಾರ್ಯಕ್ರಮ ನಡೆಸಿಕೊಡುವ ಪುರೋಹಿತರು ಬರದಿದ್ದರೂ ಸರಿಯೇ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಬರದಿದ್ದರೆ, ಆ ಸಮಾರಂಭ ಸಾಧ್ಯವೇ ಇಲ್ಲವೆನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಹೀಗಿದ್ದಾಗ, ಬರೀ ಕೂಡಿಕೊಳ್ಳುವಾಗ ಮಾತ್ರವೇ ಫೋಟೋ ಶೂಟೇ? ಕಳಚಿಕೊಳ್ಳುವಾಗಲೂ ಒಂದು ಫೋಟೋ ಶೂಟ್ ಯಾಕಾಗಬಾರದೂ? ಎಂಬ ಆಲೋಚನೆ ಇಂದಿನ ಕಲಹಪ್ರಿಯ ದಂಪತಿಗಳಿಗೆ ಬಂದಾಗ, ಹೂ ಹೂ , ಅದೂ ನಡೆಯಲಿ ಎಂಬುದಾಗಿ ಕಾಲವೇ ನಿರ್ಧರಿಸಿ ಹಸಿರು ನಿಶಾನೆ ತೋರಿಸಿದೆ.
ಹೀಗಿದ್ದಾಗ ಕೋರ್ಟಿಗೆ ಕೊನೆಯ ಭೇಟಿಗೆಂದು ಬಂದ ದಂಪತಿಗಳು ಫೋಟೋಶೂಟಿಗೆಂದು ಸಿದ್ದವಾಗಿ ಬಂದರೆ, ಆ ಪ್ರಸಂಗವಾದರೂ ಊಹಿಸಿಕೊಂಡಾಗ ಹೇಗಿರಬಹುದು ಹೇಳಿ? ದಿಕ್ಕೆಟ್ಟ ನೀರೆ, ತಾನುಟ್ಟ ಸೀರೆಯ ಪರಿವೆಯೂ ಇಲ್ಲದೆ,ದೀನಳಾಗಿ ಬಂದು ಕಟಕಟೆಯಲ್ಲಿ ಸೋತು ನಿಲ್ಲುವ ದೃಶ್ಯ ಸಾಮಾನ್ಯ ಎನ್ನುವಂತಿರುವಾಗ, ಅವಳು ಕುಸುರಿ ಕೆಲಸದಿಂದ ಮಿಂಚುವ ಕೆಂಪು ಲೆಹಂಗಾ ತೊಟ್ಟು, ಬಿರಿಗೂದಲನ್ನ ಹಾರಾಡಿಸುತ್ತಾ, ಆಗ ತಾನೇ ಫ್ರೆಶ್ಶಾದ ಮೇಕಪ್ ಮುಖದೊಂದಿಗೆ ಕೋರ್ಟಿನ ಮೆಟ್ಟಿಲುಗಳನ್ನ ನಿಧಾನವಾಗಿ ಹತ್ತುತ್ತಾ ಮಂದಗಮನೆಯಂತೆ ತನ್ನ ಜೊತೆಗಿರುವವರರೊಡನೆ ಬಂದರೆ,ನೋಡುಗರಿಗೆ ಹೇಗನಿಸಬಹುದೂ?
ಇನ್ನು ವಿಚ್ಛೇದನವೆಂದರೆ ಗಂಡಸಿನ ಗೋಳೋನು ಕಡಿಮೆಯೇ? ಮುಂದೆ ಪತ್ನಿ ಇಲ್ಲದ ಬಾಳ್ವೆ ಹೇಗಪ್ಪಾ ನಡೆಸುವುದೂ? ಅವಳು ಕೇಳುವ ಲಕ್ಷ ಲಕ್ಷ ಪರಿಹಾರ ಧನವನ್ನ ಹೇಗೆ ಹೊಂದಿಸುವುದೂ? ಎಂದು ಭವಿಷ್ಯದ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡು ಮತಿಗೆಟ್ಟು ಬಂದು ಜೋಲು ಮೋರೆಯಲ್ಲಿ ಕಾಣಿಸಿಕೊಳ್ಳುವ ಬದಲು, ತಿಳಿ ನೀಲಿ ಅಂಗಿ ಧರಿಸಿ, ನೀಲಿ ಬ್ಲೇಜರ್ ತೊಟ್ಟು, ಅದಕ್ಕೊಪ್ಪುವ ಪ್ಯಾಂಟು, ಕಪ್ಪು ಕನ್ನಡಕ, ದಿರುಸುಗೊಪ್ಪುವ ಬೂಟು ಧರಿಸಿ ಟಪಟಪನೆ ಸದ್ದು ಮಾಡುತ್ತಾ ಮತ್ತೊಂದೆಡೆಯಿಂದ ಕೋರ್ಟಿನ ಮೆಟ್ಟಿಲು ಹತ್ತಿದ ಎಂದರೆ ಹೇಗಿರಬೇಡಾ? ಇಬ್ಬರ ಕಣ್ಣುಗಳಲ್ಲಿ ಕಣ್ಣೀರು ಇರುವ ಬದಲು – ಇಬ್ಬರದ್ದೂ ಮೇಕಪ್ ಮಯ ವದನ!ನೋಡುಗರಿಗೆ ಇದೇನಿದೂ? ವಿನೂತನ ಮಾದರಿಯ ವಿಚ್ಛೇದನ? ವಿಚ್ಛೇದನ ಹೀಗೂ ನಡೆಯಬಹುದೇ? ಎನ್ನುವಂತಾಗದೇ ಇರುತ್ತದೆಯೇ?
ಇನ್ನು ಫೋಟೋ ಶೂಟ್ ಎಂದ ಮೇಲೆ, ಪಕ್ಕದಲ್ಲೇ ಫೋಟೋಗ್ರಾಫರ್, ಡ್ರೋನ್, ಲೈಟ್‌ಬಾಯ್ ಎನ್ನುವ ಶೂಟಿಂಗ್ ತಂಡ!
ಹಿಂದೆಂದೂ ಇಂಥ ಅದ್ಭುತ ಕಾಣದ ಇಬ್ಬರ ಕಡೆಯ ವಕೀಲರೂ ಚಕಿತ! ಇವಳ ವಕೀಲನಂತೂ ಕೇಳಿಯೂಬಿಟ್ಟ…
“ನೀವಿಬ್ಬರೂ ವಿಚ್ಛೇದನಕ್ಕೆ ಬಂದಿರೋದಾ? ಇಲ್ಲಾ ಯಾವುದಾದರೂ ರೀಲ್ಸ್ ಮಾಡಿ ವೈರಲ್ ಆಗೋಕಾ?”ಎಂದಾಗ, ಅವನ ವಕೀಲನಿಗೆ ಗಲಿಬಿಲಿ!
ವಕೀಲರಿಗೆ ಈ ಸನ್ನಿವೇಶ ಗೊಂದಲಮಯವಾದಾಗ, ಅಲ್ಲಿದ್ದ ಕೆಮರಾ ಹಿಡಿದ ಕ್ರಿಯಾಶೀಲ ಫೋಟೋಗ್ರಾಫರ್, “ಡೈವೋರ್ಸ್‌ಗೂ ಒಂದು ನೆನಪು ಬೇಕಲ್ಲ ಸರ್! ಎಲ್ಲರಿಗೂ ಅಚ್ಚುಮೆಚ್ಚಾಗೋ ಕಾನ್ಸೆಪ್ಟ್ ನಾನು ತಂದಿದ್ದೇನೆ ಯುವರ್ ಆನರ್. ದಯವಿಟ್ಟು ಈ ಬೇರೆಯಾಗುವ ದಂಪತಿಗಳ ಜೊತೆಗೆ ನೀವು ಒಂದೊಂದು ಚಿತ್ರಕ್ಕೆ ಪೋಸ್ ಕೊಡಿ!ನಿಮಗೂ ಇವರ ಜೊತೆಯಲ್ಲಿ ಇದು ಕೊನೆಯ ಅವಕಾಶ !”ಎಂದು ಕೆಮರಾ ಸರಿ ಮಾಡಿಕೊಂಡು ವಕೀಲರ ಮುಂದೆ ನಿಂತಾಗ ವಕೀಲಪ್ಪನೂ ಬೆಪ್ಪು, ತಬ್ಬಿಬ್ಬು!
“ಇಲ್ಲಿ ಕಾನೂನು ಮಾತಾಡೋಣ ಅಷ್ಟೇ, ಫೋಟೋಶೂಟ್ ಬೇಡ”ಒಬ್ಬ ವಕೀಲಪ್ಪ ಕಟ್ಟುನಿಟ್ಟಾಗಿ ಅಂದರೂ,ಬ್ರೇಕಪ್ಪ ದಂಪತಿಗಳು ಹಾಕಿಕೊಂಡ ಮೇಕಪ್ಪ ವ್ಯರ್ಥವಾಗುವ ಭೀತಿಯಿಂದ ವಕೀಲರ ಕಾಲಿಗೆ ಬಿದ್ದು,”ದಯವಿಟ್ಟು ಈ ಶೂಟ್ ಅನ್ನು ಮಾಡುವ ಅವಕಾಶ ಮಾಡಿಕೊಡಿ. ಮುಂದೆಂದೂ ಈ ಚಿತ್ರಗಳನ್ನ ನೋಡಿದಾಗ ಜೀವನದಲ್ಲಿ ನಾವೆಷ್ಟು ಮೂರ್ಖ ನಿರ್ಧಾರ ಮಾಡಿದ್ದೆವು, ಮುಂದೆ ಬಹಳ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು, ಎಂಬ ಎಚ್ಚರಿಕೆಯ ಗಂಟೆ ಹೊಡೆದಂತೆ, ಈ ಚಿತ್ರಗಳು ನಮಗೆ ಬುದ್ದಿ ಹೇಳುತ್ತವೆ”, ಎಂದು ದೂರವಾಗುವ ದಂಪತಿಗಳು ಒತ್ತಾಯ ಮಾಡಿದಾಗ ವಕೀಲಪ್ಪನೂ ವಿಧಿ ಇಲ್ಲದೆ, ಒಪ್ಪಲೇಬೇಕಾಯ್ತು.
ಅಂತೂ ಕೋರ್ಟ್ ನ ಕೊಠಡಿಯಲ್ಲಿ ನ್ಯಾಯಾಧೀಶರೇ ಈ ವಿಪರೀತವನ್ನು ಸಹಿಸಿ, ಈ ಸನ್ನಿವೇಶವನ್ನು ಕಂಡು ನಗು ಬಂದರೂ ತೋರಗೊಡದೆ, “ಸರಿ, ಮೊದಲು ಫೋಟೋಶೂಟ್ ಮುಗಿಸಿ. ನಂತರ ನೀವಿಬ್ಬರೂ ಜೊತೆಗೆ ಸಂಸಾರ ನಡೆಸಬೇಕೋ, ಇಲ್ಲಾ ನಿಮ್ಮ ದಾರಿ ನೀವು ನೋಡಿಕೊಳ್ಳಬೇಕೋ, ಯೋಚಿಸಿ, ತೀರ್ಪು ಕೊಡೋಣ” ಎಂದು ಅನುಮತಿ ನೀಡಬೇಕುತ್ತದೆಯೋ ಏನೋ?ನೀವೇ ಹೇಳಬೇಕು.
ಇತ್ತೀಚೆಗೆ ಈ ವಿವಾಹ ವಿಚ್ಛೇದನದ ಫೋಟೋಶೂಟ್ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದನ್ನ ನೋಡಿದರೆ, ಮುಂದೆ ಇನ್ನೂ ಏನೇನು ವಿಚಾರಗಳಲ್ಲಿ ಫೋಟೋ ಶೂಟ್ ಎಂಬ ಕರ್ಮಕಾಂಡವನ್ನ ನೋಡಬೇಕಾಗಿದೆಯೋ ಎಂದು ಹಣೆ ಚಚ್ಚಿಕೊಳ್ಳುವಂತಾಗುತ್ತದೆ! “#ಡೈವೋರ್ಸ್ವಿತ್‌ಸ್ಮೈಲ್”, “#ನೌಸಿಂಗಲ್‌ಗೋಲ್”ಸಿಂಗಲ್ ರೆಡಿಟುಮಿಂಗಲ್”, “ಔಟ್ಆಫ್ ಕೇಜ್”ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹ್ಯಾಷ್‌ಟ್ಯಾಗ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.ಇಷ್ಟು ಸಾಲದೆಂಬಂತೆ ಇಂಥ ವಾಕ್ಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಳ್ಳುವ ಚಪಲಪ್ಪ, ಚಪಲಮ್ಮಗಳು ಬೇರೆ…..
“ನಮ್ಮ ಮದುವೆಗಯಲ್ಲೇನೋ ಪ್ರೀ ವೆಡ್ಡಿಂಗ್ ಫೋಟೋಶೂಟ್ ಇರಲಿಲ್ಲ, ಈಗ ಡೈವೋರ್ಸ್ ಸಮಯಕ್ಕಾದರೂ ಫೋಟೋ ಶೂಟ್ ಸಿಕ್ಕಿದೆ!ಇದು ನನ್ನ ಜೀವನಘಟ್ಟದಲ್ಲಿ ಸಾರ್ಥಕತೆಯ ಕಾಲ!
“ನಮ್ಮ ಜಂಟಿ ಚಿತ್ರಕ್ಕೆ ಪೂರ್ಣ ವಿರಾಮ! ಇನ್ನೆಲ್ಲಾ ಒಂಟಿ ಚಿತ್ರಗಳೇ!”
“ಸ್ವತಂತ್ರ ಕಳೆದುಕೊಂಡಾಗ ಇರುವ ಫೋಟೋಶೂಟ್, ಸ್ವತಂತ್ರ ಪಡೆದುಕೊಂಡಾಗ ಯಾಕಿರಬಾರದೂ?”,
“ನಾನೀಗ ಪಂಜರದಿಂದ ಹೊರಬಂದ ಹಕ್ಕಿ. ಈ ಹಕ್ಕಿ ಈಗ ಎಲ್ಲ ಬಂಧನದಿಂದಲೂ ಮುಕ್ತ! ಇದರ ಆನಂದಕ್ಕಾಗಿ ಒಂದು ಫೋಟೋಶೂಟ್”,
“ಹೊಸ ಜೋಡಿಗಾಗಿ ಈ ಜೀವ ಕಾದಿದೆ”,
ಇಂಥ ಫೋಟೋಗಳು, ಹೇಳಿಕೆಗಳು, ಇನ್‌ಸ್ಟಾಗ್ರಾಮ್,ವಾಟ್ಸಪ್, ಟಿಕ್‌ಟಾಕ್ ಎಲ್ಲೆಡೆ ಮತ್ತಷ್ಟು ಪಂಚುಗಳ ಜೊತೆಗೆ ಕಾಣಿಸಿಕೊಳ್ಳತೊಡಗಿದೆ.
“ಅವನು ಅವಳನ್ನು ‘ಕಟ್ ಮಾಡೋಣ’ಅಂದೆ. ನಮ್ಮ ಫೋಟೋಗ್ರಾಫರ್ ‘ಕ್ರಾಪ್ ಮಾಡ್ತೀನಿ’ಅಂದ!”
“ಕೋರ್ಟ್‌ನಲ್ಲಿ ‘ಬ್ರೇಕಪ್’ಪೇಪರುಗಳ ಮೇಲೆ ಸಹಿ, ಆದರೆ ಕ್ಯಾಮೆರಾದ ಮುಂದೆ ‘ಮೇಕಪ್’ಮುಖದಲ್ಲಿ ಮುಚ್ಚಿಹೋದ ಕಹಿ!”
ಈ ಲೇಖನ ಹಾಸ್ಯದಿಂದ ಓದಿಸಿಕೊಂಡು ಹೋದರೂ, ಮಂದಹಾಸದಲ್ಲಿ ನಡೆಯುತ್ತಿರುವ ದಾಂಪತ್ಯದ ಪಯಣ ಅಪಹಾಸ್ಯ ಆಗದಿರಲಿ! ನಿಜ ಹೇಳಬೇಕಾದರೆ – ಇವತ್ತಿನ ಯುವ ಪೀಳಿಗೆ ಮದುವೆಯನ್ನೂ, ಪ್ರೀತಿಯನ್ನೂ ಫಿಲ್ಟರ್ ಮತ್ತು ಫ್ರೇಮ್ ನ ಒಳಗೇ ನಡೆಯುವಂತೆ ನಡೆಯುತ್ತಿರುವುದು ವಿಪರ್ಯಾಸವೇ ಸರಿ!
ಪ್ರತಿ ಸಂಬಂಧ ಫೋಟೋಶೂಟ್ ಅಷ್ಟೇ -ಪರ್‌ಫೆಕ್ಟ್ ಆಗಿರೋದಿಲ್ಲ. ಹೊಂದಾಣಿಕೆ, ಅವಗಾಹನೆ, ಪ್ರೀತಿ, ನಂಬಿಕೆ, ಒಬ್ಬರಿಗಾಗಿ ಮತ್ತೊಬ್ಬರ ಕರ್ತವ್ಯ, ಹೊಣೆಗಾರಿಕೆ – ಇವುಗಳನ್ನು ಬಳಸಿಕೊಂಡಲ್ಲಿ ಬದುಕಿದಾಗ ಮಾತ್ರವೇ ಮದುವೆ ಜೀವಂತವಾಗಿರುತ್ತದೆ.
ಇಲ್ಲದಿದ್ದರೆ, ಮದುವೆ ದಿನದಂತೆ ಡೈವೋರ್ಸ್ ದಿನವೂ ಇವೆಂಟ್ ಆಗಿಬಿಡುತ್ತದೆ.
“ಜೀವನದ ಎಲ್ಲ ಸನ್ನಿವೇಶಗಳಲ್ಲೂ ಫೋಟೋಶೂಟ್ ಇರಲಿ. ಬೇಡ ಎಂದವರ್ಯಾರೂ? ಆದರೆ ಫೋಟೋಶೂಟಿಗೆ ಕೊಡುವ ಮಹತ್ವದಲ್ಲಿ ಕಿಂಚಿತ್ತಾದರೂ ಪರಸ್ಪರ ಹೊಂದಿ ಬಾಳಲು ಕೊಟ್ಟರೆ, ದಾಂಪತ್ಯದಲ್ಲಿ ಬೆನ್ನು ತಿರುಗಿಸಿ ವಿರುದ್ದವಾಗಿ ನಡೆಯುವ ಸನ್ನಿವೇಶ ಇಬ್ಬರಿಗೂ ಮುಂದೆ ಬರಲಾರದು. ಯಾಕೆಂದರೆ, ಫೋಟೋ ಶೂಟ್ ನಲ್ಲಿ ತೆಗೆದ ಫೋಟೋ ನಾಲ್ಕು ವರ್ಷ ಕಳೆಯುವುದರಲ್ಲಿ ಮಾಸಬಹುದು. ಆದರೆ ದಾಂಪತ್ಯದಲ್ಲಿ ಒಬ್ಬರ ಮೇಲೊಬ್ಬರು ಇಡುವ ನಂಬಿಕೆಗಳು ಎಂದೂ ಮಾಸಬಾರದು.”ನಿಜ ಅಲ್ವೇ? ಜೀವನದ ಹೆಜ್ಜೆಗಳನ್ನಿಡುವಾಗ ಭಾವನೆಯಿಂದ ಭಾವನೆಗೆ ಒಂದು ಸಣ್ಣ ರೇಖೆ ಇದ್ದರೆ ಚೆನ್ನ!
ತಲೆಗೆಲ್ಲಾ ಒಂದೇ ಮಂತ್ರ ಎನ್ನುವಂತೆ,ಎಲ್ಲಾ ಸಮಯದಲ್ಲೂ ಒಂದೇ ರೀತಿ ನಡೆದುಕೊಂಡರೆ, ಸಂತಾಪಕ್ಕೂ ಸಂಭ್ರಮಕ್ಕೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಇದು ನನ್ನ ಅನಿಸಿಕೆ. ನೀವೇನು ಹೇಳ್ತೀರ ಫ್ರೆಂಡ್ಸ್? ವಂದನೆಗಳು.
ರೂಪ ಮಂಜುನಾಥ
ಹೊಳೆನರಸೀಪುರ








