ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ (Cabinet Reshuffle) ಆಗುವ ಸಾಧ್ಯತೆ ಇದೀಗ ಬಹುತೇಕ ಖಚಿತವಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣವೇ ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಜರುಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ಉನ್ನತ ನಾಯಕರ ನಡುವೆ ಚರ್ಚೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಪುನರ್‌ರಚನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಔತಣಕೂಟ ಆಯೋಜಿಸಿದ್ದು, ಅಕ್ಟೋಬರ್ 13ರಂದು ಸಂಪುಟದ ಸಹೋದ್ಯೋಗಿಗಳಿಗಾಗಿ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿದೆ.
ರಾಜಕೀಯ ವಲಯದ ಪ್ರಕಾರ, ಬಿಹಾರ ಚುನಾವಣೆ ಬಳಿಕ ಸುಮಾರು 15 ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸುಮಾರು 50% ಮಟ್ಟದ ಪುನರ್‌ರಚನೆ ನಡೆಯಬಹುದು ಎಂದು ಚರ್ಚೆಯಾಗಿದೆ.
ಇದು ದೊಡ್ಡ ಮಟ್ಟದ ಬದಲಾವಣೆ ಆಗಲಿರುವುದರಿಂದ, ಸರ್ಕಾರದ ಸ್ಥಿರತೆಗೆ ಯಾವುದೇ ಅಡ್ಡಿಯಿಲ್ಲ ಎಂಬ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ “ಮಾಸ್ಟರ್ ಪ್ಲಾನ್” ರೂಪಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಿದ್ದು, ಸಚಿವ ಸಂಪುಟ ಪುನರ್‌ರಚನೆ ಕುರಿತ ಅಂತಿಮ ಚರ್ಚೆ ನಡೆದಿರುವುದಾಗಿ ಮೂಲಗಳು ದೃಢಪಡಿಸಿವೆ.ಇದನ್ನು ಓದಿ –540 ಗಸ್ತು ಅರಣ್ಯ ಪಾಲಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ದೊಡ್ಡ ಬದಲಾವಣೆ ಸಂಭವಿಸುವ ನಿರೀಕ್ಷೆಯಿದ್ದು, ಇದು ಕಾಂಗ್ರೆಸ್ ಸರ್ಕಾರದ ಮುಂದಿನ ರಾಜಕೀಯ ತಂತ್ರಕ್ಕೆ ಪ್ರಮುಖ ಘಟ್ಟವಾಗಲಿದೆ.








