ನವದೆಹಲಿ: ವಿಧಾನ ಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷಗಳ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ತಮ್ಮಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ದೂರು ಕೊಡಿಸುವ ಮೂಲಕ ಬಿಜೆಪಿ ನಾಯಕರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಅವರು, ಈ ಸಂಬಂಧ ತಾವು ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರಾಜ್ಯಪಾಲರನ್ನು ಖುದ್ದಾಗಿ ಭೇಟಿ ಮಾಡಿ, ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇವೆ ಎಂದರು.
ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ
ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಂಪುಟದಲ್ಲಿ ಮಹಿಳಾ ಪ್ರತಿನಿಧಿಗೆ ಸೂಕ್ತ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದರು.
‘ಮಹಿಳಾ ಪ್ರತಿನಿಧಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಲೇಬೇಕು. ನೀಡುತ್ತೇವೆ. ಆದರೆ ಇದಕ್ಕೆ ಯಾವುದೇ ತರಾತುರಿ ಇಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ರಚನೆ ಎಷ್ಟು ದಿನಗಳ ಬಳಿಕ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.
ಖಾತೆ ಹಂಚಿಕೆ ವಿಚಾರದಲ್ಲೂ ತಕ್ಷಣದ ನಿರ್ಧಾರದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘ನಾಳೆಯೇ ಖಾತೆ ಹಂಚಿಕೆ ಮಾಡಬೇಕು ಎಂದೇನೂ ಇಲ್ಲ. ನಾನು ಒಬ್ಬನೇ ಅಧಿವೇಶನದಲ್ಲಿ ಉತ್ತರಿಸುತ್ತೇನೆ’ ಎಂದು ತಿಳಿಸಿದರು.
ನಾಗೇಂದ್ರ ಇ.ಡಿ ಪ್ರಕರಣದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಮಾಜಿ ಸಚಿವ ನಾಗೇಂದ್ರ ಅವರ ವಿರುದ್ಧದ ಜಾರಿ ನಿರ್ದೇಶನಾಲಯದ (ಇ.ಡಿ.) ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ದೇಶದಲ್ಲಿ ಯಾರ ಮೇಲೆ ಪ್ರಕರಣಗಳಿಲ್ಲ ಎಂದು ಪ್ರಶ್ನಿಸಿದರು.
‘ಯಾರ ಮೇಲೆ ಕೇಸ್ ಇಲ್ಲ ಈ ದೇಶದಲ್ಲಿ ಹೇಳಿ? ಡಿಕೆಶಿ ಜಾಮೀನು ಪಡೆದಿಲ್ಲವೇ? ಕುಮಾರಸ್ವಾಮಿ ಅವರು ಜಾಮೀನಿನ ಮೇಲೆ ಇಲ್ಲವೇ?’ ಎಂದು ಪ್ರಶ್ನಿಸಿದ ಅವರು, ನಾಗೇಂದ್ರ ಅವರು ನ್ಯಾಯಾಲಯದ ಷರತ್ತು ಉಲ್ಲಂಘಿಸಿದ್ದಾರೆಯೇ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
‘ನಾವು ಎಲ್ಲವನ್ನೂ ನೋಡಿದ್ದೇವೆ. ವಿಪಕ್ಷದವರಿಗೆ ಮಾತನಾಡಲು ಒಂದು ವಿಷಯ ಬೇಕು, ಅಷ್ಟೇ’ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.








