ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳ ಪತ್ತೆಗೆ ಬೆಂಗಳೂರಿನಲ್ಲಿ ವೈಟ್‌ಫೀಲ್ಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಆರಂಭವಾದ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದ್ದು, ನಾಲ್ವರು ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ವೈಟ್‌ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಡಿಸಿಪಿ, ಇಬ್ಬರು ಎಸಿಪಿಗಳು ಹಾಗೂ ಆರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವೈಟ್‌ಫೀಲ್ಡ್, ಕಾಡುಗೋಡಿ, ಮಾರತ್ತಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು ಏಕಕಾಲದಲ್ಲಿ ಶೋಧ ನಡೆಸಿದರು. ವಿಶೇಷವಾಗಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಮೇಲೆ ನಿಗಾ ವಹಿಸಿ, ಅವರ ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಯಿತು.
ಬೆಳಗ್ಗೆ ಕೆಲಸಕ್ಕೆ ತೆರಳುವ ಮುನ್ನವೇ ಶೆಡ್‌ಗಳಿಗೆ ತೆರಳಿದ ಪೊಲೀಸರು ಅಲ್ಲಿನ ನಿವಾಸಿಗಳ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳ ಬಗ್ಗೆ ಅನುಮಾನ ಮೂಡಿದವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ.
ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕೆಲವರು ಸ್ಥಳೀಯ ಕಂಪನಿಗಳು, ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹೌಸ್‌ಕೀಪಿಂಗ್, ಕ್ಲೀನಿಂಗ್, ಪ್ಲಾಸ್ಟಿಕ್ ಕೆಲಸ ಸೇರಿದಂತೆ ವಿವಿಧ ಸಣ್ಣಪುಟ್ಟ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದವರ ದಾಖಲೆಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ.
ಕಾರ್ಯಾಚರಣೆ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ನಾಲ್ವರು ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ಗುರುತು ಹಾಗೂ ದಾಖಲೆಗಳ ಬಗ್ಗೆ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಇದೇ ವೇಳೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಮಂದಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚುವುದು, ಅವರ ಹಿನ್ನೆಲೆ ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
ವೈಟ್‌ಫೀಲ್ಡ್ ವಿಭಾಗದ ವಿವಿಧ ಪ್ರದೇಶಗಳಲ್ಲಿ ಶೋಧ ಮತ್ತು ವಿಚಾರಣೆ ಮುಂದುವರಿದಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.








