ಬೀದರ್: ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಬೀದರ್ ಜಿಲ್ಲೆಯಲ್ಲಿ ಭಾರಿ ದಾಳಿ ನಡೆಸಿದ್ದಾರೆ. ಔರಾದ್ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೂಳಪ್ಪ ಅವರ ವಿರುದ್ಧ ಬಂದಿದ್ದ ದೂರು ಆಧರಿಸಿ, ಲೋಕಾಯುಕ್ತ ತಂಡವು ಏಕಕಾಲದಲ್ಲಿ ನಾಲ್ಕು ಕಡೆ ಶೋಧ ನಡೆಸಿದೆ.
ದಾಳಿ ಬೀದರ್ ನಗರದ ಗುರುನಾನಕ್ ಕಾಲೋನಿಯಲ್ಲಿರುವ ದೂಳಪ್ಪ ಅವರ ನಿವಾಸ, ಭಾಲ್ಕಿ ತಾಲೂಕಿನ ಕಡ್ಯಾಳ ಗ್ರಾಮದ ಮನೆ, ಔರಾದ್‌ನ ಎಡಿ ಕಚೇರಿ ಹಾಗೂ ಮುದೋಳ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ನಡೆದಿದೆ.
ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿಗಳ ಸಂಬಂಧಿತ ದಾಖಲೆಗಳು ಮತ್ತು ಹಣದ ವ್ಯವಹಾರಗಳ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಈ ದಾಳಿಯನ್ನು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ನಡೆಸಲಾಗಿದೆ.
ದಾಳಿ ವೇಳೆ ಅಧಿಕಾರಿಗಳು ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.








