ಮಂಡ್ಯ: ಅಲಂಕಾರಿಕ ಗಿಡ ಎಂದು ನೆರೆಹೊರೆಯವರನ್ನು ನಂಬಿಸಿ ಮನೆಯ ಮುಂದೆಯೇ ಗಾಂಜಾ ಬೆಳೆದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ನಡೆದಿದೆ.
ಶ್ರೀನಿವಾಸ ಅಗ್ರಹಾರದ ಸುರೇಶ್ ಎಂಬಾತ ತನ್ನ ಮನೆಯ ಮುಂದೆಯೇ ಐದು ಗಾಂಜಾ ಗಿಡಗಳನ್ನು ಬೆಳೆಸಿಕೊಂಡಿದ್ದು, ಸ್ಥಳೀಯರು ಗಿಡಗಳ ಬಗ್ಗೆ ವಿಚಾರಿಸಿದಾಗ ಅವು ಅಲಂಕಾರಿಕ ಗಿಡಗಳೆಂದು ಸುರೇಶ್ ಸುಳ್ಳು ಹೇಳಿದ್ದಾನೆ.
ಗಿಡಗಳು ಹೂ ಬಿಡುವ ಹಂತಕ್ಕೆ ಬಂದ ನಂತರ ಅವು ಗಮನಕ್ಕೆ ಬಾರದಂತೆ ಮಾಡಲು ಸೀರೆ ಸುತ್ತಿ ಮರೆ ಮಾಡಿದ್ದಾನೆ. ಈ ವಿಷಯವನ್ನು ಸ್ಥಳೀಯ ನಿವಾಸಿಯೊಬ್ಬರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ಪರಿಶೀಲನೆ ವೇಳೆ ಅವು ಅಲಂಕಾರಿಕ ಗಿಡಗಳಲ್ಲದೆ ಗಾಂಜಾ ಗಿಡಗಳೆಂದು ದೃಢಪಟ್ಟಿದೆ. ಪೊಲೀಸರು ಸುಮಾರು 9 ಕೆ.ಜಿ ತೂಕದ, ಸುಮಾರು ₹3 ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ಜಪ್ತಿ ಮಾಡಿ ಸುರೇಶ್‌ನ್ನು ಬಂಧಿಸಿದ್ದಾರೆ.ಇದನ್ನು ಓದಿ –ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ
ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.








