- ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ಕುರ್ಚಿ ಕದನ–ಗೊಂದಲಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಒಟ್ಟಿಗೇ ಕಾಣಿಸಿಕೊಂಡು, “ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಒಟ್ಟಿಗೆ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟ ಸಂದೇಶ ನೀಡಿದರು.
ಬ್ರೇಕ್‌ಫಾಸ್ಟ್ ಸಭೆಯ ಬಳಿಕ ಕಾವೇರಿ ನಿವಾಸದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು, ಡಿಕೆಶಿ ಹಾಗೂ ಪೊನ್ನಣ್ಣ ಬ್ರೇಕ್‌ಫಾಸ್ಟ್‌ನಲ್ಲಿ ಭಾಗವಹಿಸಿದ್ದೇವೆ. ಅಲ್ಲಿ ರಾಜಕೀಯ ವಿಷಯ ಯಾವುದೇ ಮಾತನಾಡಿಲ್ಲ, ಕೇವಲ ಊಟ ಮಾಡಿದ್ದೇವೆ. ಡಿಕೆಶಿ ಇವತ್ತು ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದ್ದರೂ, ಕೆ.ಸಿ. ವೇಣುಗೋಪಾಲ್ ಅವರು ಈ ಸಭೆಯಲ್ಲಿ ಮಾತನಾಡುವಂತೆ ಸೂಚನೆ ನೀಡಿದ ಕಾರಣ ಇಲ್ಲಿಗೆ ಬಂದಿದ್ದೇವೆ. ಇನ್ನೊಂದು ದಿನ ಅವರ ಮನೆಗೆ ಊಟಕ್ಕೆ ಹೋಗುತ್ತೇನೆ” ಎಂದು ಹೇಳಿದರು.
ಅವರು ಮುಂದುವರಿದು, “ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿದ್ದರೂ, ನಾವಿಬ್ಬರೂ ಕೂತು ಅದನ್ನು ಪರಿಹರಿಸಿದ್ದೇವೆ. 2028ರ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಚರ್ಚಿಸಿದ್ದೇವೆ. 2023ರಲ್ಲಿ ಹೇಗೆ ಒಟ್ಟಿಗೆ ಕೆಲಸ ಮಾಡಿದೆವೋ, ಹಾಗೆಯೇ ಮುಂದುವರಿಯುತ್ತೇವೆ. ನನ್ನ–ಡಿಕೇಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಎಂದು ಒಗ್ಗಟ್ಟಿನ ಸಂದೇಶ ನೀಡಿದರು.
“ಸುಳ್ಳು ಪ್ರಚಾರ – ಬಿಜೆಪಿ-ಜೆಡಿಎಸ್ ಚಾಳಿ, ನಾವು ಸಮರ್ಥವಾಗಿ ಎದುರಿಸುತ್ತೇವೆ”
ಮುಂದೆ ಮಾತನಾಡಿದ ಅವರು, “ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸುಳ್ಳು ಆರೋಪ ಮಾಡುವುದು ಬಿಜೆಪಿ–ಜೆಡಿಎಸ್ ಪದ್ದತಿ. ಅದನ್ನು ಸಮರ್ಥವಾಗಿ ಎದುರಿಸಲು ನಾವು ತಂತ್ರ ರೂಪಿಸಿದ್ದೇವೆ” ಎಂದರು.
“ಹೈಕಮಾಂಡ್ ಸೂಚನೆ ಅಂತಿಮ – ನಾಳೆಯಿಂದ ಗೊಂದಲವೇ ಇಲ್ಲ”
ಸಿದ್ದರಾಮಯ್ಯ ಸ್ಪಷ್ಟಪಡಿಸಿದಂತೆ, “ನಾವು 142 ಮಂದಿ ಶಾಸಕರು, ಅವರು 64 ಜನ ಮಾತ್ರ. ಜೆಡಿಎಸ್ 18. ಯಾರೇ ಏನು ಆರೋಪ ಮಾಡಿದರೂ, ನಾವು ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತೇವೆ. ಕೇಂದ್ರದಲ್ಲಿ ಚಳಿಗಾಲದ ಅಧಿವೇಶನ ಇರುವುದರಿಂದ ಹೈಕಮಾಂಡ್ ನಮ್ಮನ್ನೇ ಗೊಂದಲ ಬಗೆಹರಿಸಲು ಹೇಳಿದೆ. ನಾಳೆಯಿಂದ ಗೊಂದಲಗಳೇ ಇರುವುದಿಲ್ಲ” ಎಂದು ಹೇಳಿದರು.
ದೆಹಲಿಗೆ ತೆರಳಿದ್ದ ಶಾಸಕರ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ದೆಹಲಿಗೆ ಹೋದ ಕೆಲ ಶಾಸಕರು ನನ್ನನ್ನು ಭೇಟಿ ಮಾಡಿ, ಯಾಕಾಗಿ ಹೋದರು ಎಂಬುದನ್ನೇ ಸ್ಪಷ್ಟವಾಗಿ ವಿವರಿಸಿದ್ದಾರೆ” ಎಂದು ತಿಳಿಸಿದರು.
ಈ ಮೂಲಕ ಸಿಎಂ-ಡಿಸಿಎಂ ಜಂಟಿ ವೇದಿಕೆಯ ಸಂದೇಶ ಕಾಂಗ್ರೆಸ್‌ನ ಒಳಕಳಹಕ್ಕೆ ತೆರೆ ಬಿದ್ದಂತೆ ಕಂಡುಬಂದಿದೆ.








