ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಸರ್ಕಾರ ನೀಡಿದ್ದ ಋತುಚಕ್ರ ರಜೆಯ ಸೌಲಭ್ಯಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ರಾಜ್ಯ ಸರ್ಕಾರವು ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ಋತುಚಕ್ರ ರಜೆ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್‌ನ ದ್ವಾರ ತಟ್ಟಿತ್ತು. ಸಂಘದ ಪರವಾಗಿ ವಕೀಲ ಪ್ರಶಾಂತ್ ಬಿ.ಕೆ. ಅವರು ವಾದ ಮಂಡಿಸಿದ್ದರು.
ಸಂಘದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ಇದೀಗ ಸರ್ಕಾರದ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಖಾಸಗಿ ವಲಯದಲ್ಲಿಯೂ ಈ ರಜೆ ಸೌಲಭ್ಯಕ್ಕೆ ವಿರೋಧ ವ್ಯಕ್ತವಾಗಿತ್ತು. ಹೋಟೆಲ್ ಮಾಲೀಕರ ಸಂಘವು ಈ ರಜೆಯ ಪರಿಣಾಮ ಉದ್ಯಮಗಳ ಕಾರ್ಯನಿರ್ವಹಣೆಯ ಮೇಲೆ ಬೀಳಬಹುದಾದ ಪರಿಣಾಮಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ರಾಜ್ಯ ಸರ್ಕಾರವು ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದ ವಯೋಮಿತಿಯ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ – ವರ್ಷಕ್ಕೆ ಒಟ್ಟು 12 ದಿನಗಳ ವೇತನಸಹಿತ ಋತುಚಕ್ರ ರಜೆಯನ್ನು ನೀಡಲು ತೀರ್ಮಾನಿಸಿತ್ತು.ಇದನ್ನು ಓದಿ –ಗ್ಯಾಸ್ ಗೀಸರ್ ಸೋರಿಕೆ : ತಾಯಿ–ಮಗುವಿನ ದುರ್ಮರಣ
ಇದೇ ರೀತಿ ರಾಜ್ಯ ಮಹಿಳಾ ಸರ್ಕಾರಿ ನೌಕರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಹೈಕೋರ್ಟ್‌ನ ತಡೆಯಾಜ್ಞೆಯಿಂದಾಗಿ ಈ ಆದೇಶ ಜಾರಿಗೆ ಬಾರದಂತಾಗಿದೆ.








