ವಿಜಯಪುರ: ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರು ಮಾಡುವುದಕ್ಕಾಗಿ ₹6 ಸಾವಿರ ಲಂಚ ಸ್ವೀಕರಿಸುವ ಸಮಯದಲ್ಲೇ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವಿಜಯಪುರ ಉಪವಿಭಾಗದ ಕಿರಿಯ ಎಂಜಿನಿಯರ್ ವಿಷ್ಣು ಪೋಳ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದಿದ್ದಾರೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 2023–24ರ ಅನುದಾನದಲ್ಲಿ ವಿಜಯಪುರ ತಾಲ್ಲೂಕಿನ ಕತಕನಹಳ್ಳಿ ಗ್ರಾಮದ ಶ್ರೀ ಮರಗಮ್ಮ (ದುರ್ಗಾದೇವಿ) ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾರ್ಯ ನಡೆಯುತ್ತಿತ್ತು.
ಈ ಕಾಮಗಾರಿಯ ಬಿಲ್ ಮಂಜೂರಾತಿಗೆ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಡುವುದಕ್ಕಾಗಿ ಕಿರಿಯ ಎಂಜಿನಿಯರ್ ವಿಷ್ಣು ಪೋಳ ಅವರು ಲಂಚ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿದುಬಂದಿದೆ.
ಇದನ್ನು ಓದಿ –ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ
ಲೋಕಾಯುಕ್ತ ಪೊಲೀಸ್ ತಂಡ ನೀಡಿದ ಮಾಹಿತಿಯ ಪ್ರಕಾರ, ಲಂಚ ಸ್ವೀಕರಿಸುವ ವೇಳೆಯಲ್ಲಿ ನಡೆಸಿದ ಬಲೆಯಿಂದ ಎಂಜಿನಿಯರ್‌ರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಕಾರ್ಯಾಚರಣೆಯನ್ನು ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ತುಳಸಿಗೇರಿ, ಇನ್‌ಸ್ಪೆಕ್ಟರ್ ಆನಂದ ಟಕ್ಕನ್ನವರ, ಆನಂದ ಡೋಣಿ ಹಾಗೂ ನಿಂಗಪ್ಪ ಪೂಜೇರಿ ಒಟ್ಟಾಗಿ ನಡೆಸಿದರು.








