ಬೆಂಗಳೂರು : ನಗರದ ಹೊಸಕೆರೆಹಳ್ಳಿ ಬಳಿ ನೈಸ್ ರಸ್ತೆಯಲ್ಲಿ ಶನಿವಾರ ನಡೆದ ಹಿಟ್-ಅಂಡ್-ರನ್ ದುರಂತದಲ್ಲಿ ಇಬ್ಬರು ಮಹಿಳಾ ದಿನಗೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಯಾದಗಿರಿ ಮೂಲದ ರಂಗಮ್ಮ (45) ಮತ್ತು ಚೌಡಮ್ಮ (55) ಎಂಬುವವರು ನೈಸ್ ರಸ್ತೆಯ ಬದಿಯಲ್ಲಿ ಹುಲ್ಲು ತೆರವುಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಇಬ್ಬರ ಮೇಲಕ್ಕೆ ನುಗ್ಗಿದ ಪರಿಣಾಮ, ರಭಸದ ಹೊಡೆತಕ್ಕೆ ಇಬ್ಬರೂ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ಕಾರು ನಿಲ್ಲಿಸದೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧಾರಂಭಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ.








