ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಗೊರ್ಲತ್ತು ಕ್ರಾಸ್ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದು 6 ಮಂದಿ ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಂಟೇನರ್ ಲಾರಿ ರಸ್ತೆ ಬ್ಯಾರಿಕೇಡ್‌ಗಳನ್ನು ದಾಟಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಒಡೆದು ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬಸ್‌ನಲ್ಲಿ ಒಟ್ಟು 29 ಮಂದಿ ಪ್ರಯಾಣಿಸುತ್ತಿದ್ದು, ಇವರಲ್ಲಿ ಐವರು ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಲವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಹಾಗೂ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ಅಪಘಾತದ ಕಾರಣ ಹಾಗೂ ಪರಿಸ್ಥಿತಿಗಳ ಕುರಿತು ತನಿಖೆ ಕೈಗೊಳ್ಳಲಾಗಿದೆ.
ಅಪಘಾತದ ಸಮಯದಲ್ಲಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬಸ್‌ನ ಹಿಂದೆ ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ ಕೂಡ ಬೆಂಕಿಗೆ ಸಿಲುಕಿತು. ಚಾಲಕನ ಚಾತುರ್ಯದಿಂದ ಶಾಲಾ ಬಸ್ ರಾಷ್ಟ್ರೀಯ ಹೆದ್ದಾರಿಯ ಬೇಲಿಯನ್ನು ದಾಟಿ ಚರಂಡಿ ದಾಟಿ ಸುರಕ್ಷಿತವಾಗಿ ನಿಂತಿತು. ಅದೃಷ್ಟವಶಾತ್, ಬಸ್‌ನಲ್ಲಿದ್ದ ಯಾವುದೇ ಮಕ್ಕಳಿಗೂ ಗಾಯಗಳಾಗಿಲ್ಲ.
ಶಾಲಾ ಮಕ್ಕಳ ಬಸ್ ಚಾಲಕ ಸಚಿನ್, “ಮಧ್ಯರಾತ್ರಿ ಸುಮಾರು 2 ಗಂಟೆಗೆ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಂದು ಸ್ಲೀಪರ್ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಗುದ್ದಿತು. ತಕ್ಷಣವೇ ಬೆಂಕಿ ಕಾಣಿಸಿಕೊಂಡು ಸ್ಫೋಟವೂ ಸಂಭವಿಸಿತು. ನಾನು ನನ್ನ ಬಸ್ಸನ್ನು ಮುಂದೆ ನಿಲ್ಲಿಸಿ, ಅಪಘಾತಕ್ಕೀಡಾದ ಬಸ್‌ನಲ್ಲಿದ್ದ ಏಳು ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದೆ” ಎಂದು ತಿಳಿಸಿದ್ದಾರೆ.
ಸೀಬರ್ಡ್ ಬಸ್ ಮಾಲೀಕ ನಾಗರಾಜು ಮಾತನಾಡಿ, “ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್ ಡೀಸೆಲ್ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಪ್ರಯಾಣಿಕರ ಸುರಕ್ಷೆಗೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಬಸ್ ಹೊಂದಿತ್ತು. ಎರಡು ತುರ್ತು ನಿರ್ಗಮನ ದ್ವಾರಗಳೂ ಇದ್ದವು” ಎಂದು ತಿಳಿಸಿದರು.
ಬಸ್ ಕ್ಲೀನರ್ ಸಾಧಿಕ್, “ರಾತ್ರಿ 1:30 ರಿಂದ 2 ಗಂಟೆ ನಡುವೆ ಅಪಘಾತ ನಡೆದಿದೆ. ಡಿಕ್ಕಿಯ ಹೊಡೆತಕ್ಕೆ ನಾನು ಬಸ್ಸಿನಿಂದ ಹೊರ ಬಿದ್ದೆ. ಕ್ಷಣಾರ್ಧದಲ್ಲೇ ಬಸ್ ಧಗಧಗನೆ ಹೊತ್ತಿ ಉರಿಯಿತು. ಚಾಲಕನ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಸಹಾಯಕ್ಕೆ ಬಂದರು” ಎಂದು ಹೇಳಿದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ದುರಂತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, “ಹಲವರು ಸಜೀವ ದಹನಗೊಂಡಿರುವ ಈ ಘೋರ ಅಪಘಾತದ ಸುದ್ದಿ ಕೇಳಿ ಎದೆ ನಡುಗಿದೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಅಂತ್ಯಗೊಂಡಿರುವುದು ಅತ್ಯಂತ ವಿಷಾದನೀಯ. ಅಪಘಾತದ ಕುರಿತು ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಸಂತಾಪ, ಪರಿಹಾರ ಘೋಷಣೆ:
ಇದೇ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಕುರಿತು ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು, “ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.








