ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾರ್ಟಿ ಹಾಟ್‌ಸ್ಪಾಟ್ ಆಗಿರುವ ಎಂ.ಜಿ.ರೋಡ್‌ನಲ್ಲಿ ಭಾರೀ ಜನಸಂದಣಿ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಡಿಸೆಂಬರ್ 31ರ ರಾತ್ರಿ ಎಂ.ಜಿ.ರೋಡ್ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡುವುದಾಗಿ ಘೋಷಿಸಿದೆ.
ರಾತ್ರಿ 10 ಗಂಟೆಯಿಂದಲೇ ಎಂಟ್ರಿ ಹಾಗೂ ಎಗ್ಸಿಟ್ ಎರಡನ್ನೂ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಹೆಚ್ಚಿನ ಜನ ಸೇರುವುದರಿಂದ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆದರೆ ಸಮೀಪದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿಸುತ್ತವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಪ್ರಯಾಣಿಕರು ಈ ನಿಲ್ದಾಣಗಳನ್ನು ಪರ್ಯಾಯವಾಗಿ ಬಳಸುವಂತೆ ಮನವಿ ಮಾಡಲಾಗಿದೆ.
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಳದಿ ಮಾರ್ಗದಲ್ಲೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ನಂತರವೂ ಸೇವೆಗಳು ಮುಂದುವರಿಯಲಿದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಕೊನೆಯ ಮೆಟ್ರೋ ರೈಲು ಬೆಳಗಿನ ಜಾವ 3.10ಕ್ಕೆ ಹೊರಡಲಿದೆ. ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ಅಂತಿಮ ರೈಲು ಬೆಳಗಿನ ಜಾವ 1.30ಕ್ಕೆ ಸಂಚರಿಸಲಿದೆ. ಪ್ರಮುಖ ಇಂಟರ್‌ಚೇಂಜ್ ಆಗಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ದಿಂದ ವೈಟ್‌ಫೀಲ್ಡ್, ಚಲ್ಲಘಟ್ಟ, ಮಾದಾವರ ಹಾಗೂ ಸಿಲ್ಕ್ ಇನ್‌ಸ್ಟಿಟ್ಯೂಟ್ ದಿಕ್ಕುಗಳಿಗೆ ಕೊನೆಯ ಮೆಟ್ರೋ ರೈಲುಗಳು ಬೆಳಗಿನ ಜಾವ 2.45ಕ್ಕೆ ಹೊರಡಲಿವೆ.
ಟಿಕೆಟ್ ವ್ಯವಸ್ಥೆಯಲ್ಲಿ ಬದಲಾವಣೆ
ಜನದಟ್ಟಣೆ ಹೆಚ್ಚುವ ಕಾರಣ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೆಲವು ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್‌ಗಳನ್ನು ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರು ಕ್ಯೂಆರ್ ಕೋಡ್ ಅಥವಾ ಡಿಜಿಟಲ್ ಟಿಕೆಟ್ ಮೂಲಕವೇ ಪ್ರಯಾಣಿಸಬೇಕೆಂದು ಬಿಎಂಆರ್‌ಸಿಎಲ್ ಸೂಚಿಸಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕಾಗಿ ಮೆಟ್ರೋ ಸೇವೆಗಳನ್ನು ಸಮರ್ಪಕವಾಗಿ ಬಳಸುವಂತೆ ಮತ್ತು ಮೆಟ್ರೋ–ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.








